ಜೂನ್ನಲ್ಲಿ ಟ್ರೇಡ್ ಡೆಫಿಸಿಟ್ ಇಳಿಕೆ; ಈ ಹಣಕಾಸು ವರ್ಷ ಸರಕುಗಳ ವ್ಯಾಪಾರ ಕೊರತೆ ಹಿಗ್ಗುವ ಸಾಧ್ಯತೆ
India's goods and services trade deficit narrows in 2025 June: ಜೂನ್ ತಿಂಗಳಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ವ್ಯಾಪಾರ ಕೊರತೆ 3.51 ಬಿಲಿಯನ್ ಡಾಲರ್ಗೆ ಇಳಿದಿದೆ. ಹಿಂದಿನ ವರ್ಷದಲ್ಲಿ ಇದು 7.30 ಬಿಲಿಯನ್ ಡಾಲರ್ ಇತ್ತು. ರಫ್ತು ಶೇ. 6.5ರಷ್ಟು ಏರಿಕೆಯಾದರೆ, ಆಮದು ಬಹಳ ಅಲ್ಪ ಹೆಚ್ಚಳ ಆಗಿದೆ. 2025-26ರಲ್ಲಿ ಸೇವೆ ಹೊರತುಪಡಿಸಿ ಸರಕುಗಳ ಟ್ರೇಡ್ ಡೆಫಿಸಿಟ್ 300 ಬಿಲಿಯನ್ ಡಾಲರ್ ದಾಟಬಹುದು.

ನವದೆಹಲಿ, ಜುಲೈ 16: ಜೂನ್ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ವ್ಯಾಪಾರ ಕೊರತೆ (Trade Deficit) ಗಣನೀಯವಾಗಿ ಇಳಿಕೆ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಜೂನ್ನಲ್ಲಿ ಟ್ರೇಡ್ ಡೆಫಿಸಿಟ್ 3.51 ಬಿಲಿಯನ್ ಡಾಲರ್ಗೆ ಇಳಿದಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ, ಅಂದರೆ, 2024ರ ಜೂನ್ ತಿಂಗಳಲ್ಲಿ ಟ್ರೇಡ್ ಡೆಫಿಸಿಟ್ 7.30 ಬಿಲಿಯನ್ ಡಾಲರ್ ಇತ್ತು. ಈ ಜೂನ್ನಲ್ಲಿ ಅದು ಅರ್ಧದಷ್ಟು ಇಳಿದಿದೆ. 2025ರ ಮೇ ತಿಂಗಳಲ್ಲಿ ಇದು 6.62 ಬಿಲಿಯನ್ ಡಾಲರ್ ಇತ್ತು.
ಈ ಜೂನ್ನಲ್ಲಿ ಆಮದು ಮತ್ತು ರಫ್ತು ಎರಡೂ ಏರಿಕೆಯಾಗಿವೆಯಾದರೂ, ರಫ್ತಿನಲ್ಲಿ ಗಣನೀಯ ಹೆಚ್ಚಳ ಆಗಿರುವುದು ಒಟ್ಟಾರೆ ವ್ಯಾಪಾರ ಕೊರತೆ ಕಡಿಮೆಗೊಳ್ಳಲು ಕಾರಣವಾಗಿದೆ.
ದತ್ತಾಂಶದ ಪ್ರಕಾರ ಒಟ್ಟಾರೆ ರಫ್ತು 2025ರ ಜೂನ್ನಲ್ಲಿ 67.98 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಅದು 63.83 ಬಿಲಿಯನ್ ಡಾಲರ್ ಇತ್ತು. ಶೇ. 6.5ರಷ್ಟು ರಫ್ತು ಹೆಚ್ಚಳ ಆಗಿದೆ.
ಇದನ್ನೂ ಓದಿ: ಸ್ವಚ್ಛ ಇಂಧನ ಮೂಲಗಳಿಂದ ಶೇ. 50 ವಿದ್ಯುತ್ ಉತ್ಪಾದನೆ; ಐದು ವರ್ಷ ಮುಂಚೆಯೇ ಗುರಿ ಮುಟ್ಟಿದ ಭಾರತ
ಇನ್ನು, ಈ ಜೂನ್ ತಿಂಗಳಲ್ಲಿ ಒಟ್ಟಾರೆ ಆಮದು ಅಲ್ಪ ಏರಿಕೆಯಾಗಿ 71.50 ಬಿಲಿಯನ್ ಡಾಲರ್ ಮುಟ್ಟಿದೆ. ಹಿಂದಿನ ವರ್ಷದ ಜೂನ್ ತಿಂಗಳಲ್ಲಿ 71.14 ಬಿಲಿಯನ್ ಡಾಲರ್ ಮೊತ್ತದಷ್ಟು ರಫ್ತಾಗಿತ್ತು. ಅರ್ಧ ಬಿಲಿಯನ್ ಡಾಲರ್ಗಿಂತಲೂ ಕಡಿಮೆ ಆಮದು ಏರಿಕೆ ಆಗಿರುವುದು.
2025-26ರಲ್ಲಿ ಸರಕು ವ್ಯಾಪಾರ ಕೊರತೆ ಹಿಗ್ಗುವ ಸಾಧ್ಯತೆ
ಭಾರತದ ಸರಕುಗಳ ಟ್ರೇಡ್ ಡೆಫಿಸಿಟ್ ಈ ಹಣಕಾಸು ವರ್ಷದಲ್ಲಿ (2025-26) 300 ಬಿಲಿಯನ್ ಡಾಲರ್ಗೆ ಹಿಗ್ಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕ್ ಗ್ಲೋಬಲ್ ಮಾರ್ಕೆಟ್ಸ್ನ ಇತ್ತೀಚಿನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ (2024-25) ಸರಕುಗಳ ವ್ಯಾಪಾರ ಕೊರತೆ 287 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಇದರ ಟ್ರೇಡ್ ಡೆಫಿಸಿಟ್ ಏರಲು ಪ್ರಮುಖ ಕಾರಣಗಳನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ, ಜಾಗತಿಕವಾಗಿ ಸರಕುಗಳಿಗೆ ಬೇಡಿಕೆ ಕಡಿಮೆ ಆಗಿರುವುದು ಭಾರತದ ರಫ್ತು ಕಡಿಮೆಗೊಳ್ಳಲು ಕಾರಣವಾಗಬಹುದು.
ಇದನ್ನೂ ಓದಿ: ಚೀನಾ ಬದಲು ಸೌದಿ ಅರೇಬಿಯಾ ದೇಶದಿಂದ ರಸಗೊಬ್ಬರ ಖರೀದಿಸಲಿದೆ ಭಾರತ
ಹಾಗೆಯೇ, ಆಂತರಿಕವಾಗಿ ಅನುಭೋಗ ಹೆಚ್ಚುತ್ತಿರುವುದರಿಂದ ಆಮದು ಹೆಚ್ಚಾಗಬಹುದು. ಈ ಎರಡು ಅಂಶಗಳ ಕಾರಣದಿಂದ ಭಾರತದ ಸರಕುಗಳ ವ್ಯಾಪಾರ ಕೊರತೆ ಹಿಗ್ಗಬಹುದು ಎಂದು ಐಸಿಐಸಿಐ ಬ್ಯಾಂಕ್ ಗ್ಲೋಬಲ್ ಮಾರ್ಕೆಟ್ಸ್ನ ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Wed, 16 July 25








