AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಬದಲು ಸೌದಿ ಅರೇಬಿಯಾ ದೇಶದಿಂದ ರಸಗೊಬ್ಬರ ಖರೀದಿಸಲಿದೆ ಭಾರತ

India deal with Saudi Arabia for supply of fertilizer: ಚೀನಾದಿಂದ ರಸಗೊಬ್ಬರ ಪೂರೈಕೆ ಸ್ಥಗಿತಗೊಂಡ ಕಾರಣಕ್ಕೆ ಭಾರತವು ಈಗ ಸೌದಿ ಅರೇಬಿಯಾದಿಂದ ಡಿಎಪಿ ರಸಗೊಬ್ಬರ ಪಡೆಯಲಿದೆ. ಸೌದಿ ಕಂಪನಿಯೊಂದರೊಂದಿಗೆ ವಿವಿಧ ಭಾರತೀಯ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಐದು ವರ್ಷ ಕಾಲ ಭಾರತೀಯ ಕಂಪನಿಗಳು ಸೌದಿಯಿಂದ ಡೈ ಅಮೋನಿಯಂ ಫಾಸ್​ಫೇಟ್ ರಸಗೊಬ್ಬರ ಪಡೆಯಲಿವೆ.

ಚೀನಾ ಬದಲು ಸೌದಿ ಅರೇಬಿಯಾ ದೇಶದಿಂದ ರಸಗೊಬ್ಬರ ಖರೀದಿಸಲಿದೆ ಭಾರತ
ಗೊಬ್ಬರ ಚೆಲ್ಲುತ್ತಿರುವ ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2025 | 6:19 PM

Share

ನವದೆಹಲಿ, ಜುಲೈ 14: ಡಿಎಪಿ ರಸಗೊಬ್ಬರ (DAP fertilizer) ಪೂರೈಕೆಗಾಗಿ ಸೌದಿ ಅರೇಬಿಯಾ ಜೊತೆ ಭಾರತ ದೀರ್ಘಾವಧಿ ಒಪ್ಪಂದಕ್ಕೆ ಸಹಿ ಹಾಕಿದೆ. ಸೌದಿ ದೇಶದ ಮೈನಿಂಗ್ ಸಂಸ್ಥೆಯಾದ ಮಾದೆನ್ (Ma’aden) ಜೊತೆ ಭಾರತದ ಇಂಡಿಯನ್ ಪೊಟ್ಯಾಶ್ ಲಿಮಿಟೆಡ್, ಕೋಲ್ ಇಂಡಿಯಾ, KRIBHCO ಕಂಪನಿಗಳು ಸಹಿ ಹಾಕಿವೆ. ಐದು ವರ್ಷ ಕಾಲ ಈ ಸೌದಿ ಕಂಪನಿಯು ಭಾರತೀಯ ಕಂಪನಿಗಳಿಗೆ 31 ಲಕ್ಷ ಮೆಟ್ರಿಕ್ ಟನ್ ಡೈ ಅಮ್ಮೋನಿಯಂ ಫಾಸ್ಫೇಟ್ (DAP- Di-ammonium Phosphate) ರಸಗೊಬ್ಬರವನ್ನು ಪೂರೈಸಲಿದೆ.

ಈ ಒಪ್ಪಂದವನ್ನು ಮತ್ತಷ್ಟು ಐದು ವರ್ಷಗಳಿಗೆ ವಿಸ್ತರಿಸುವ ಅವಕಾಶ ಇದೆ. ಭಾರತದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರು ಸೌದಿ ಅರೇಬಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ

ಕೈಕೊಟ್ಟ ಚೀನಾ… ಕೈಹಿಡಿದ ಸೌದಿ

ಡಿಎಪಿ ರಸಗೊಬ್ಬರಗಳಿಗೆ ಚೀನಾ ಮೊದಲಾದ ದೇಶಗಳ ಮೇಲೆ ಭಾರತ ಅವಲಂಬಿತವಾಗಿದೆ. ಆದರೆ, ಚೀನಾ ಈಗ ರಫ್ತಿಗೆ ನಿರ್ಬಂಧ ಹೇರಿರುವುದರಿಂದ ಭಾರತಕ್ಕೆ ರಸಗೊಬ್ಬರ ಕೊರತೆ ಎದುರಾಗುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಭಾರತವು ಸೌದಿ ಅರೇಬಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.

ಚೀನಾದಿಂದ ಭಾರತಕ್ಕೆ ಸಾಕಷ್ಟು ವರ್ಷಗಳಿಂದ ರಸಗೊಬ್ಬರಗಳ ಪೈರೈಕೆಯಾಗುತ್ತಿತ್ತು. ಕಡಿಮೆ ಬೆಲೆಗೆ ಸುಲಭವಾಗಿ ಲಭ್ಯವಾಗುತ್ತಿತ್ತು. ಚೀನಾ ಕಳೆದ ಎರಡು ತಿಂಗಳಿಂದ ಭಾರತಕ್ಕೆ ವಿಶೇಷ ರಸಗೊಬ್ಬರ ರಫ್ತನ್ನು ನಿಲ್ಲಿಸಿದೆ. ಇದರಿಂದಾಗಿ ಭಾರತೀಯ ಕಂಪನಿಗಳು ಯೂರೋಪ್, ರಷ್ಯಾ ಮತ್ತು ಪಶ್ಚಿಮ ಏಷ್ಯಾ ದೇಶಗಳ ಮೊರೆ ಹೋಗಬೇಕಾಗಿದೆ. ಇದರ ಜೊತೆಗೆ ಶೇ 15ರಿಂದ 20ರಷ್ಟು ಹೆಚ್ಚುವರಿ ಬೆಲೆಯೂ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Electricity cost: ಸರ್ಕಾರದಿಂದ ಎಫ್​​ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್​​ಗೆ 25 ಪೈಸೆ ಇಳಿಕೆ ಸಾಧ್ಯತೆ

ಚೀನಾದ ಪೋರ್ಟ್​​ಗಳಲ್ಲಿ 1.50 ಲಕ್ಷ ಟನ್​ಗಳಷ್ಟು ಸ್ಪೆಷಾಲಿಟಿ ರಸಗೊಬ್ಬರಗಳು ನಿಂತುಬಿಟ್ಟಿವೆ. ಚೀನಾ ಸರ್ಕಾರ ಅಧಿಕೃತವಾಗಿ ರಫ್ತು ನಿಷೇಧ ಹಾಕಿಲ್ಲವಾದರೂ ಅಲ್ಲಿಯ ಅಧಿಕಾರಿಗಳು ಭಾರತಕ್ಕೆ ಹೋಗಬೇಕಾದ ಸರಕುಗಳಿಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ, ಈ ಸರಕುಗಳು ಪೋರ್ಟ್​ನಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ.

ಈ ಕಾರಣಕ್ಕೆ ಬೇರೆ ಬೇರೆ ದೇಶಗಳಿಂದ ಭಾರತೀಯ ಕಂಪನಿಗಳು ಒಂದು ಲಕ್ಷ ಟನ್ ಕಚ್ಛಾ ವಸ್ತುಗಳನ್ನು ಖರೀದಿಸಿ ಅದನ್ನು ರಸಗೊಬ್ಬರವಾಗಿ ತಯಾರಿಸುವ ಕೆಲಸ ಮಾಡುವುದು ಈಗ ಉಳಿದಿರುವ ಒಂದು ಆಯ್ಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ