Electricity cost: ಸರ್ಕಾರದಿಂದ ಎಫ್ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್ಗೆ 25 ಪೈಸೆ ಇಳಿಕೆ ಸಾಧ್ಯತೆ
Flue-Gas Desulphurization rule on coal based power plants: ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ ಸಿಸ್ಟಂ ಅಳವಡಿಕೆ ವಿಚಾರದಲ್ಲಿ ಸರ್ಕಾರ ನಿಮಯ ಸಡಿಲಿಕೆ ಮಾಡಿದೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯ ಹೊರಗೆ ಇರುವ ಘಟಕಗಳು ಎಫ್ಜಿಡಿ ಅಳವಡಿಸುವ ಅಗತ್ಯ ಇಲ್ಲ. ಹೆಚ್ಚಿನ ವಿದ್ಯುತ್ ಘಟಕಗಳಿಗೆ ಇದರಿಂದ ಅನುಕೂಲವಾಗುತ್ತದೆ. ಪರಿಣಾಮವಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ.

ನವದೆಹಲಿ, ಜುಲೈ 14: ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ (coal based power plants) ಸಲ್ಫರ್ ಹೊರಸೂಸುವಿಕೆಯ (sulphur emission) ನಿಯಮಗಳಲ್ಲಿ ಸರ್ಕಾರ ಸಡಿಲಿಕೆ ಮಾಡಿದೆ. ಈ ಕ್ರಮದಿಂದಾಗಿ ಗ್ರಾಹಕರಿಗೆ ಒಂದು ಯುನಿಟ್ ವಿದ್ಯುತ್ ದರ 25-30 ಪೈಸೆಯಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಐಐಟಿ ದೆಹಲಿ, ಸಿಎಸ್ಐಆರ್-ಎನ್ಇಇಆರ್ಇ, ಎನ್ಐಎಎಸ್ ಸಂಸ್ಥೆಗಳಿಂದ ನಡೆದ ವಿವಿಧ ಅಧ್ಯಯನಗಳನ್ನು ಗಮನಿಸಿ ಮಾಲಿನ್ಯ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ಸಲ್ಫರ್ ಎಮಿಷನ್ ನಿಯಮದಲ್ಲಿ ಬದಲಾವಣೆ ಏನು?
ಕಲ್ಲಿದ್ದಲು ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ (ಎಫ್ಜಿಡಿ) ವ್ಯವಸ್ಥೆ ಅಳವಡಿಸಬೇಕೆಂದು 2015ರಲ್ಲಿ ಸರ್ಕಾರವು ನಿರ್ಬಂಧ ಹಾಕಿತ್ತು. ಈಗ ಆ ನಿಯಮದಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯೊಳಗೆ ಇರುವ ವಿದ್ಯುತ್ ಘಟಕಗಳು ಮಾತ್ರವೇ ಕಡ್ಡಾಯವಾಗಿ ಎಫ್ಜಿಡಿ ಸಿಸ್ಟಂ ಹಾಕಿರಬೇಕು ಎಂದು ಗೆಜೆಟ್ ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ಏನಿದು ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್?
ಕಲ್ಲಿದ್ದಲನ್ನು ಸುಡುವಾಗ ಫ್ಲ್ಯೂ ಗ್ಯಾಸ್ ಅಥವಾ ಧೂಮನಾಳ ಅನಿಲ ಹೊರಬರುತ್ತದೆ. ಈ ಫ್ಲ್ಯೂ ಗ್ಯಾಸ್ನಲ್ಲಿ ಮಾಲಿನ್ಯಕಾರಕ ಸಲ್ಫರ್ ಡೈ ಆಕ್ಸೈಡ್ ಅಥವಾ ಗಂಧಕ ಡೈ ಆಕ್ಸೈಡ್ ಅನಿಲ ಇರುತ್ತದೆ. ಫ್ಲ್ಯೂ ಗ್ಯಾಸ್ನಿಂದ ಈ ಸಲ್ಫರ್ ಡೈ ಆಕ್ಸೈಡ್ ಅನ್ನು ತೆಗೆಯಲು ಎಫ್ಜಿಡಿ ಬಳಸಲಾಗುತ್ತದೆ.
ಇದನ್ನೂ ಓದಿ: ಭಾರತದ ಐಫೋನ್ ಫ್ಯಾಕ್ಟರಿಗಳಿಂದ ಚೀನೀಯರ ಗೋಬ್ಯಾಕ್; ಆ್ಯಪಲ್ ಬಳಿ ಪ್ಲಾನ್ ಬಿ?
ಫ್ಲ್ಯೂ ಗ್ಯಾಸ್ಗೆ ಲೈಮ್ಸ್ಟೋನ್ ಕೆಸರನ್ನು ಎರಚಿದಾಗ ಅದು ಗ್ಯಾಸ್ನಲ್ಲಿ ಬೆರೆತಿರುವ ಗಂಧಕ ಡೈ ಆಕ್ಸೈಡ್ ಅನ್ನು ಪ್ರಭಾವಗೊಳಿಸುತ್ತದೆ. ಅದನ್ನು ಜಿಪ್ಸಮ್ ಆಗಿ ಪರಿವರ್ತಿಸುತ್ತದೆ. ಈ ಜಿಪ್ಸಮ್ ಅನ್ನು ಸಿಮೆಂಟ್ ಇತ್ಯಾದಿ ತಯಾರಿಕೆಗೆ ಬಳಸಲಾಗುತ್ತದೆ.
ಎಫ್ಜಿಡಿ ನಿಯಮ ಸಡಿಲಿಕೆಯಿಂದ ಪರಿಸರಕ್ಕೆ ಮಾರಕವಾಗುವುದಿಲ್ಲವಾ?
ವಿವಿಧ ಅಧ್ಯಯನದ ಪ್ರಕಾರ ಭಾರತದ ಹೆಚ್ಚಿನ ನಗರಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಮಟ್ಟವು ನ್ಯಾಕ್ಸ್ (NAAQS- National Ambient Air Quality Standards) ಪ್ರಮಾಣಿತ ಮಟ್ಟಕ್ಕಿಂತ ಕಡಿಮೆ ಇದೆ. ಗಂಧಕ ಡೈ ಆಕ್ಸೈಡ್ ಪ್ರಮಾಣವು ವಾತಾವರಣದಲ್ಲಿ ಪ್ರತಿ ಕ್ಯೂಬಿಕ್ ಮೀಟರ್ಗೆ 80 ಮೈಕ್ರೋಗ್ರಾಮ್ ಮಟ್ಟ ದಾಟಬಾರದು ಎಂದು NAAQS ಹೇಳುತ್ತದೆ. ಆದರೆ, ವಿವಿಧ ನಗರಗಳಲ್ಲಿ ಇದು 3ರಿಂದ 20 ಮೈಕ್ರೋಗ್ರಾಮ್ ಮಾತ್ರವೇ ಇರುವುದು ಗೊತ್ತಾಗಿದೆ. ಇದರಿಂದಾಗಿ ಎಫ್ಜಿಡಿ ನಿಯಮವನ್ನು ಸರ್ಕಾರ ಸಡಿಲಿಸಲು ನಿರ್ಧರಿಸಿದೆ.
ಹಾಗೆಯೇ, ಭಾರತದಲ್ಲಿರುವ ಕಲ್ಲಿದ್ದಲಿನಲ್ಲಿ ಗಂಧಕದ ಅಂಶ ಶೇ. 0.5ಕ್ಕಿಂತ ಕಡಿಮೆ ಇದೆ. ಇದರಿಂದಾಗಿ ಕಲ್ಲಿದ್ದಲು ಸುಟ್ಟಾಗ ಹೊರಬರುವ ಸಲ್ಫರ್ ಡೈ ಆಕ್ಸೈಡ್ ಕೂಡ ಕಡಿಮೆ ಇರುತ್ತದೆ.
ಇದನ್ನೂ ಓದಿ: ಎಟಿಎಂಗಳಲ್ಲಿ 500 ರೂ ನೋಟು ವಿತರಿಸದಂತೆ ಆರ್ಬಿಐ ಸೂಚಿಸಿದೆಯಾ? ವೈರಲ್ ಸುದ್ದಿ ಬಗ್ಗೆ ಸರ್ಕಾರದ ಸ್ಪಷ್ಟನೆ ಇದು
ಎಫ್ಜಿಡಿ ನಿಯಮ ಸಡಿಲಿಕೆಯಿಂದ ವಿದ್ಯುತ್ ದರ ಹೇಗೆ ಕಡಿಮೆ ಆಗುತ್ತದೆ?
ಸರ್ಕಾರವು 10 ಲಕ್ಷ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಕಲ್ಲಿದ್ದಲು ಘಟಕಗಳಿಗೆ ಮಾತ್ರವೇ ಎಫ್ಜಿಡಿ ಸಿಸ್ಟಂ ಕಡ್ಡಾಯಪಡಿಸಿರುವುದು. ದೇಶದ ಶೇ 79ರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಈ ಘಟಕಗಳು ಎಫ್ಜಿಡಿ ಸಿಸ್ಟಂ ಅಳವಡಿಸುವುದು ಕಡ್ಡಾಯವೇನಿಲ್ಲ.
ಇದರಿಂದಾಗಿ ಈ ವಿದ್ಯುತ್ ಘಟಕಗಳಿಗೆ ಸಾಕಷ್ಟು ವೆಚ್ಚ ಕಡಿಮೆ ಆಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನಾ ವೆಚ್ಚವೂ ತಗ್ಗುತ್ತದೆ. ಇದರಿಂದ ಅಂತಿಮ ಗ್ರಾಹಕರಿಗೆ ಲಾಭ ವರ್ಗಾವಣೆ ಆಗುತ್ತದೆ. ಅಂದಾಜು ಲೆಕ್ಕ ಹಾಕಿದಾಗ ಪ್ರತೀ ಯುನಿಟ್ಗೆ 25-30 ಪೈಸೆ ತಗ್ಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




