ಭಾರತದ ಐಫೋನ್ ಫ್ಯಾಕ್ಟರಿಗಳಿಂದ ಚೀನೀಯರ ಗೋಬ್ಯಾಕ್; ಆ್ಯಪಲ್ ಬಳಿ ಪ್ಲಾನ್ ಬಿ?
Apple has alternatives for Chinese crisis in its Indian iPhone plants: ಭಾರತದಲ್ಲಿರುವ ಫಾಕ್ಸ್ಕಾನ್ನ ಐಫೋನ್ ಘಟಕಗಳಿಂದ ಚೀನೀ ತಂತ್ರಜ್ಞರು ಮರಳಿ ಹೋಗುತ್ತಿರುವ ವಿದ್ಯಮಾನವನ್ನು ಸರ್ಕಾರ ಗಮನಿಸುತ್ತಿದೆ. ಈ ಸಮಸ್ಯೆಯು ಫಾಕ್ಸ್ಕಾನ್ ಮತ್ತು ಆ್ಯಪಲ್ ಮಧ್ಯೆ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಪರ್ಯಾಯ ಮಾರ್ಗವನ್ನು ಹುಡುಕಲು ಆ್ಯಪಲ್ ಪ್ಲಾನ್ ಬಿ ಹೊಂದಿರಬಹುದು ಎಂಬುದು ಸರ್ಕಾರದ ಎಣಿಕೆ.

ನವದೆಹಲಿ, ಜುಲೈ 11: ಫಾಕ್ಸ್ಕಾನ್ನ ಭಾರತೀಯ ಐಫೋನ್ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಚೀನೀ ತಂತ್ರಜ್ಞರು (Chinese engineers) ತಮ್ಮ ದೇಶಕ್ಕೆ ಮರಳಿದ್ದಾರೆ ಎನ್ನುವ ಸುದ್ದಿ ಇದೆ. ಸರ್ಕಾರವೂ ಕೂಡ ಈ ವಿದ್ಯಮಾನವನ್ನು ಗಮನಿಸುತ್ತಿದೆ. ಫಾಕ್ಸ್ಕಾನ್ನ ಘಟಕಗಳಲ್ಲಿ ಐಫೋನ್ ಉತ್ಪಾದನಾ ಪ್ರಮಾಣದ ಬಗ್ಗೆ ಸರ್ಕಾರ ಒಂದು ಕಣ್ಣಿಟ್ಟಿದೆ. ಉತ್ಪಾದನೆ ಕುಸಿಯದಂತೆ ಆ್ಯಪಲ್ ಕಂಪನಿ ಪರ್ಯಾಯ ಪ್ಲಾನ್ ಸಿದ್ಧಪಡಿಸಿರಬಹುದು ಎನ್ನುವ ವಿಶ್ವಾಸ ಸರ್ಕಾರಕ್ಕಿದೆ ಎಂದು ಮೂಲಗಳು ಹೇಳಿವೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
‘ಪರಿಸ್ಥಿತಿಯನ್ನು ಸರ್ಕಾರ ಗಮನಿಸುತ್ತಿದೆ. ಆ್ಯಪಲ್ಗೆ ಪರ್ಯಾಯ ಮಾರ್ಗ ಇರಬಹುದು. ಇದನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗಬಹುದು. ಈ ಸಮಸ್ಯೆಯು ಮುಖ್ಯವಾಗಿ ಆ್ಯಪಲ್ ಮತ್ತು ಫಾಕ್ಸ್ಕಾನ್ ಮಧ್ಯೆ ಇದೆ’ ಎಂದು ಸರ್ಕಾರಿ ಮೂಲವೊಂದು ಹೇಳಿದ್ದಾರೆ ವರದಿಯಲ್ಲಿ ತಿಳಿಸಲಾಗಿದೆ.
‘ಚೀನೀ ಕೆಲಸಗಾರರಿಗೆ ವೀಸಾ ಸಿಗುವಂತೆ ಸರ್ಕಾರ ನೋಡಿಕೊಂಡಿದೆ. ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕಂಪನಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತ ಬಿಟ್ಟು ಅಮೆರಿಕದಲ್ಲಿ ಐಫೋನ್ ತಯಾರಾದರೆ ಬೆಲೆಯಲ್ಲಿ ಎಷ್ಟು ವ್ಯತ್ಯಾಸ ಆಗುತ್ತೆ ಗೊತ್ತಾ?
ಚೀನೀ ತಂತ್ರಜ್ಞರು ನಿರ್ಗಮಿಸುತ್ತಿರುವುದರಿಂದ ಭಾರತದಲ್ಲಿ ಐಫೋನ್ 17 ಸರಣಿಯ ಸ್ಮಾರ್ಟ್ಫೋನ್ಗಳ ತಯಾರಿಕೆ ಕಾರ್ಯ ಕುಂಠಿತಗೊಳ್ಳಬಹುದು ಎನ್ನುವ ಕಳವಳ ಉದ್ಯಮ ವಲಯದ್ದು. ಆದರೆ, ಈ ಬಗ್ಗೆ ಆ್ಯಪಲ್ ಆಗಲೀ ಫಾಕ್ಸ್ಕಾನ್ ಆಗಲೀ ಯಾವ ಹೇಳಿಕೆಯನ್ನೂ ನೀಡಿಲ್ಲ.
ಐಫೋನ್ ತಯಾರಿಕೆಯಲ್ಲಿ ಚೀನೀ ತಂತ್ರಜ್ಞರ ಪಾತ್ರ ಅಷ್ಟು ಮಹತ್ವದ್ದೇ?
ಭಾರತದಲ್ಲಿ ಐಫೋನ್ ತಯಾರಿಸಲು ಬಳಸಲಾಗುತ್ತಿರುವ ಹೆಚ್ಚಿನ ಉಪಕರಣಗಳನ್ನು ಚೀನಾದಿಂದಲೇ ತರಿಸಲಾಗುತ್ತಿದೆ. ಈ ಉಪಕರಣಗಳನ್ನು ನಿರ್ವಹಿಸಲು ಚೀನೀ ತಂತ್ರಜ್ಞರು ನಿಷ್ಣಾತರಾಗಿದ್ದಾರೆ. ಹೀಗಾಗಿ, ಅವರನ್ನು ಫಾಕ್ಸ್ಕಾನ್ ಭಾರತದಲ್ಲಿರುವ ತನ್ನ ಘಟಕಗಳಿಗೆ ಕರೆತಂದಿತ್ತು. ಫ್ಯಾಕ್ಟರಿ ಡಿಸೈನ್, ಅಸೆಂಬ್ಲಿ ಲೈನ್ಗಳ ನಿರ್ವಹಣೆಯ ಜವಾಬ್ದಾರಿ ಈ ಚೀನೀ ಎಂಜಿನಿಯರುಗಳದ್ದು. ಹಾಗೆಯೇ, ಐಫೋನ್ ತಯಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ಹೇಗೆ ನಿರ್ವಹಿಸುವುದೆಂದು ಸ್ಥಳೀಯ ಎಂಜಿನಿಯರುಗಳಿಗೆ ತರಬೇತಿಯನ್ನೂ ಇವರೇ ನೀಡುತ್ತಿದ್ದರು. ಹೀಗಾಗಿ, ಚೀನೀ ತಂತ್ರಜ್ಞರು ಹೊರಹೋಗಿರುವುದು ಮುಂದಿನ ಉತ್ಪಾದನಾ ಭವಿಷ್ಯದ ಬಗ್ಗೆ ಸಂದೇಹ ಮೂಡಲು ಕಾರಣವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಐಫೋನ್ ತಯಾರಿಕೆಗೆ ಕಲ್ಲು ಹಾಕುತ್ತಿದ್ದಾರಾ ಟ್ರಂಪ್; ಭಾರತದಿಂದ ಹೊರಬರುವಂತೆ ಆ್ಯಪಲ್ಗೆ ತಿಳಿಸಿದ ಅಮೆರಿಕ ಅಧ್ಯಕ್ಷ
ಆ್ಯಪಲ್ ಕಂಪನಿಯು ಗುತ್ತಿಗೆ ಮೂಲಕ ತನ್ನ ಐಫೋನ್ಗಳನ್ನು ತಯಾರಿಸುತ್ತದೆ. ಫಾಕ್ಸ್ಕಾನ್, ಪೆಗಾಟ್ರಾನ್, ವಿಸ್ಟ್ರಾನ್, ಟಾಟಾ ಎಲೆಕ್ಟ್ರಾನಿಕ್ಸ್ ಇತ್ಯಾದಿ ಕಂಪನಿಗಳು ಐಫೋನ್ಗಳನ್ನು ಅಸೆಂಬಲ್ ಮಾಡಿಕೊಡುತ್ತವೆ. ಭಾರತದಲ್ಲಿ ಫಾಕ್ಸ್ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ನೀಂದ ಐಫೋನ್ ತಯಾರಿಕೆ ಆಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








