AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ

CPI based retail inflation of India for the 2025 Month is 2.10%: ಸಿಪಿಐ ಆಧಾರಿತ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10 ಎಂದು ದಾಖಲಾಗಿದೆ. ಮೇ ತಿಂಗಳಲ್ಲಿ ರೀಟೇಲ್ ಇನ್​ಫ್ಲೇಶನ್ ಶೇ. 2.82 ಇತ್ತು. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ. 5ಕ್ಕಿಂತಲೂ ಹೆಚ್ಚಿತ್ತು. ಈ ಜೂನ್ ತಿಂಗಳಲ್ಲಿ ದಾಖಲಾದ ಹಣದುಬ್ಬರವು 2019ರ ಜನವರಿ ಬಳಿಕ ಅತ್ಯಂತ ಕನಿಷ್ಠ ಮಟ್ಟ ಎನಿಸಿದೆ.

ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10; ಆರು ತಿಂಗಳಲ್ಲೇ ಕನಿಷ್ಠ ಬೆಲೆ ಏರಿಕೆ ದರ
ಹಣದುಬ್ಬರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2025 | 5:01 PM

Share

ನವದೆಹಲಿ, ಜುಲೈ 14: ಭಾರತದ ರೀಟೇಲ್ ಹಣದುಬ್ಬರ ದರ (Retail Inflation) ನಿರೀಕ್ಷಿಸಿದುದಕ್ಕಿಂತಲೂ ಇಳಿಕೆ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಗ್ರಾಹಕ ಬೆಲೆ ಅನುಸೂಚಿ ಆಧಾರಿತವಾದ ರೀಟೇಲ್ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.10ರಷ್ಟಿದೆ. ಕಳೆದ ತಿಂಗಳು ಹಣದುಬ್ಬರ ಶೇ. 2.8 ಇತ್ತು. ಸತತ ಎರಡು ತಿಂಗಳು ಇದು ಶೇ. 3ರ ಒಳಗಿರುವುದು ವಿಶೇಷ. ಜೂನ್ ತಿಂಗಳ ಹಣದುಬ್ಬರವು ಕಳೆದ ಆರು ವರ್ಷದಲ್ಲೇ ಕನಿಷ್ಠ ಮಟ್ಟ ಎನಿಸಿದೆ. 2019ರ ಜನವರಿ ತಿಂಗಳಲ್ಲಿ ರೀಟೇಲ್ ಇನ್​ಫ್ಲೇಶನ್ ಶೇ. 1.97 ಇತ್ತು. ಅದಾದ ಬಳಿಕ ದಾಖಲಾದ ಕನಿಷ್ಠ ಹಣದುಬ್ಬರ ಇದು.

2024ರ ಜೂನ್ ತಿಂಗಳಲ್ಲಿ ಶೇ. 5.08ರಷ್ಟಿದ್ದ ಹಣದುಬ್ಬರಕ್ಕೆ ಹೋಲಿಸಿದರೆ ಈ ಬಾರಿ ಗಣನೀಯವಾಗಿ ಇಳಿಕೆ ಆಗಿದೆ. 2025ರ ಮೇ ತಿಂಗಳಲ್ಲಿ ಇದು ಶೇ. 2.82 ಇತ್ತು. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಅಂದರೆ, ಏಪ್ರಿಲ್​​ನಿಂದ ಜೂನ್​ವರೆಗಿನ ಕ್ವಾರ್ಟರ್​​ನಲ್ಲಿ ಹಣದುಬ್ಬರ ಶೇ. 2.9 ಇರಬಹುದು ಎಂದು ಆರ್​ಬಿಐ ಅಂದಾಜು ಮಾಡಿತ್ತು. ವಾಸ್ತವವಾಗಿ ಹಣದುಬ್ಬರವು ಇನ್ನೂ ಕಡಿಮೆ ಮಟ್ಟದಲ್ಲಿದೆ.

ಇದನ್ನೂ ಓದಿ: ಹೋಲ್​ಸೇಲ್ ಬೆಲೆ ಉಬ್ಬರ ಮತ್ತಷ್ಟು ಇಳಿಕೆ; ಜೂನ್​ನಲ್ಲಿ ರೀಟೇಲ್ ಹಣದುಬ್ಬರವೂ ಇಳಿಯುವ ಸಾಧ್ಯತೆ

ಏಪ್ರಿಲ್​ನಲ್ಲಿ ಶೇ. 3.16, ಮೇ ತಿಂಗಳಲ್ಲಿ ಶೇ. 2.82, ಮತ್ತು ಜೂನ್ ತಿಂಗಳಲ್ಲಿ ಶೇ. 2.10 ಹಣದುಬ್ಬರ ಇದೆ. ಅಂದರೆ ಮೊದಲ ಕ್ವಾರ್ಟರ್​​ನಲ್ಲಿ ಹಣದುಬ್ಬರ ಶೇ. 2.7ಕ್ಕಿಂತಲೂ ಕಡಿಮೆ ಮಟ್ಟದಲ್ಲಿದೆ. ಆರ್​ಬಿಐ ನಿರೀಕ್ಷಿಸಿದುದಕ್ಕಿಂತಲೂ ಕಡಿಮೆ ಬೆಲೆ ಏರಿಕೆ ಸ್ಥಿತಿ ಇದೆ.

ರಾಯ್ಟರ್ಸ್ ಮತ್ತು ಬ್ಲೂಮ್​ಬರ್ಗ್ ಸಂಸ್ಥೆಗಳು ನಡೆಸಿದ ವಿವಿಧ ಆರ್ಥಿಕ ತಜ್ಞರ ಸಮೀಕ್ಷೆ ಪ್ರಕಾರ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 2.30ರಿಂದ ಶೇ. 2.60ರಷ್ಟಾಗಬಹುದು ಎನ್ನುವ ಅಭಿಪ್ರಾಯ ಬಂದಿತ್ತು. ಎಲ್ಲಾ ಲೆಕ್ಕಾಚಾರವನ್ನೂ ಮೀರಿ ಇಳಿಕೆ ಆಗಿದೆ ಹಣದುಬ್ಬರ.

ನಿರೀಕ್ಷೆಯಂತೆ ಜೂನ್ ತಿಂಗಳಲ್ಲಿ ಹಣದುಬ್ಬರ ಇಳಿಕೆ ಆಗಲು ಪ್ರಮುಖ ಕಾರಣ ಆಹಾರವಸ್ತುಗಳ ಬೆಲೆ ಇಳಿಕೆ. ಗ್ರಾಹಕ ಬೆಲೆ ಅನುಸೂಚಿಯ ಅರ್ಧ ತೂಕ ಇರುವ ಆಹಾರ ಹಣದುಬ್ಬರ ಮೇ ತಿಂಗಳಲ್ಲಿ ಶೇ. 0.99 ಇತ್ತು. ಆದರೆ, ಜೂನ್ ತಿಂಗಳಲ್ಲಿ ಇದು ಮೈನಸ್ 1.06 ಪ್ರತಿಶತದಷ್ಟಾಗಿದೆ. ಅಂದರೆ, ಬೆಲೆ ಏರಿಕೆ ಬದಲು ಶೇ. 1.06ರಷ್ಟು ಬೆಲೆ ಕುಸಿತ ಆಗಿದೆ.

ಇದನ್ನೂ ಓದಿ: ಭಾರತದಲ್ಲಿಯಂಥ ವೇಗದ ಪೇಮೆಂಟ್ ಸಿಸ್ಟಂ ಬೇರೆಲ್ಲೂ ಇಲ್ಲ ಎಂದ ಐಎಂಎಫ್; ಅಮೆರಿಕದಕ್ಕಿಂತ ಹೇಗೆ ಭಿನ್ನ? ಯುಪಿಐ ವಿಶೇಷತೆ ಏನು?

ಇವತ್ತು ಬೆಳಗ್ಗೆ ಬಿಡುಗಡೆ ಆದ ಸಗಟು ಮಾರಾಟ ದರ ಹಣದುಬ್ಬರವೂ ಜೂನ್ ತಿಂಗಳಲ್ಲಿ ಇಳಿಕೆ ಆಗಿದೆ. ಮೇನಲ್ಲಿ ಶೇ. 0.39 ಇದ್ದ ಡಬ್ಲ್ಯುಪಿಐ ಹಣದುಬ್ಬರ ಜೂನ್ ತಿಂಗಳಲ್ಲಿ ಮೈನಸ್ ಶೇ. 0.13ಕ್ಕೆ ಕುಸಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ