
ನವದೆಹಲಿ, ಜುಲೈ 1: ಡೊನಾಲ್ಡ್ ಟ್ರಂಪ್ ಅವರ ನೇತೃತ್ವದ ಸರ್ಕಾರ ಜಾರಿಗೆ ತರಲು ಹೊರಟಿರುವ ದೊಡ್ಡ ಕಾಯ್ದೆ ಸಾಕಷ್ಟು ವಿಚಾರಗಳಿಗೆ ಗಮನ ಸೆಳೆದಿದೆ. ‘ಒನ್ ಬಿಗ್ ಬ್ಯೂಟಿಫುಲ್ ಬಿಲ್ ಆ್ಯಕ್ಟ್’ (One Big Beautiful Bill Act) ಎಂದು ಕರೆಯಲಾಗುವ ಇದು 4.2 ಟ್ರಿಲಿಯನ್ ಡಾಲರ್ (360 ಲಕ್ಷ ಕೋಟಿ ರೂ) ಮೌಲ್ಯದ ಶಾಸನ ಎಂದು ವರ್ಣಿತವಾಗುತ್ತಿದೆ. 1,000 ಪುಟಗಳ ಈ ಮಹಾ ಮಸೂದೆಯು ಅಮೆರಿಕನ್ ಸಂಸತ್ತಿನಲ್ಲಿ ಅನುಮೋದನೆ ಪಡೆಯುವ ಹಾದಿಯಲ್ಲಿದೆ. ಅಲ್ಲಿಯ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಅದಕ್ಕೆ ಅನುಮೋದನೆ ಸಿಕ್ಕಿದೆ. ಮೇಲ್ಮನೆಯಾದ ಸೆನೇಟ್ನಲ್ಲಿ ಪ್ರಾಥಮಿಕ ಅನುಮೋದನೆ ಪಡೆದಿದೆ. ಇವತ್ತು ಮತ್ತು ನಾಳೆ ವ್ಯಾಪಕ ಚರ್ಚೆ, ವಿಮರ್ಶೆ ಮತ್ತು ವೋಟಿಂಗ್ ನಡೆಯಲಿದೆ.
ಸೆನೇಟ್ನಲ್ಲಿ ಮಸೂದೆಗೆ ತಿದ್ದುಪಡಿಯಾಗಿ ಅದಕ್ಕೆ ವೋಟಿಂಗ್ ಮೂಲಕ ಅನುಮೋದನೆ ಸಿಕ್ಕರೆ, ನಂತರ ಈ ತಿದ್ದುಪಡಿ ಮಸೂದೆಯನ್ನು ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಅನುಮೋದನೆಗೆ ವಾಪಸ್ ಬರುತ್ತದೆ. ಅಲ್ಲಿ ಒಪ್ಪಿಗೆ ಪಡೆದ ಬಳಿಕ ಅಧ್ಯಕ್ಷರಿಂದ ಅಂತಿಮ ಮುದ್ರೆ ಸಿಕ್ಕು ನಂತರ ಕಾಯ್ದೆಯಾಗಿ ಬದಲಾಗುತ್ತದೆ.
ಇದನ್ನೂ ಓದಿ: ಅಮೆರಿಕದಲ್ಲಿ ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಎಲಾನ್ ಮಸ್ಕ್
ಮಹಾಗೋಡೆ: ಮೆಕ್ಸಿಕೋ ಗಡಿ ಮೂಲಕ ಸಾಕಷ್ಟು ಅಕ್ರಮ ವಲಸಿಗರು ಅಮೆರಿಕಕ್ಕೆ ಬರುತ್ತಾರೆ. ಅದನ್ನು ತಡೆಯಲು ಅಮೆರಿಕ-ಮೆಕ್ಸಿಕೋ ಗಡಿಯುದ್ಧಕ್ಕೂ ಫೆನ್ಸಿಂಗ್ ನಿರ್ಮಿಸಲಾಗುತ್ತದೆ. ಇದಕ್ಕೆ 46 ಬಿಲಿಯನ್ ಡಾಲರ್ ಅನ್ನು ಸರ್ಕಾರ ವ್ಯಯಿಸಲಿದೆ.
ರಕ್ಷಣಾ ಕಾರ್ಯ: ಹೊಸ ಡಿಟೆನ್ಷನ್ ಅಥವಾ ಕಾರಾಗೃಹಗಳ ನಿರ್ಮಾಣ, ಮಿಲಿಟರಿ ಶಸ್ತ್ರಾಸ್ತ್ರಗಳ ತಯಾರಿಕೆ, ಗಡಿ ಪಹರೆ ಏಜೆಂಟ್ಸ್ಗಳಿಗೆ ಬೋನಸ್ ಇದಕ್ಕೆಲ್ಲಾ ಹಲವು ಬಿಲಿಯನ್ ಡಾಲರ್ ವ್ಯಯಿಸಲಾಗುತ್ತದೆ. ಒಟ್ಟಾರೆ ಡಿಫೆನ್ಸ್ ಮತ್ತು ಗಡಿ ಕ್ಷೇತ್ರಕ್ಕೆ 350 ಬಿಲಿಯನ್ ಡಾಲರ್ ವೆಚ್ಚ ಮಾಡಲಿದೆ ಸರ್ಕಾರ.
ವಲಸೆ ನಿರ್ಬಂಧ: ಕಾನೂನಾತ್ಮಕವಾಗಿ ಒಬ್ಬ ವ್ಯಕ್ತಿ ವಲಸೆ ಬಂದಿದ್ದರೆ, ಆತನ ಜೊತೆ ಹೆಂಡತಿ ಮತ್ತು ಮಕ್ಕಳು ಮಾತ್ರವೇ ಬರಬಹುದು. ಕುಟುಂಬದ ಇತರ ಸದಸ್ಯರಿಗೆ ಬರಲು ಅವಕಾಶ ಇರುವುದಿಲ್ಲ.
ವೀಸಾ ಲಾಟರಿ ರದ್ದು: ಕಡಿಮೆ ವಲಸಿಗರು ಬರುವ ದೇಶಗಳ ಜನರಿಗೆ ವಲಸೆಗೆ ಉತ್ತೇಜಿಸಲು ಅಮೆರಿಕದಲ್ಲಿ ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆ ಇದೆ. ಆಯ್ದ ದೇಶಗಳಿಂದ ವಲಸಿಗರಿಗೆ ಗ್ರೀನ್ ಕಾರ್ಡ್ ನೀಡಲು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈಗ ಈ ಲಾಟರಿ ಸಿಸ್ಟಂ ರದ್ದು ಮಾಡಲಾಗುತ್ತದೆ.
ಮೌಲ್ಯ ಆಧಾರಿತ ವಲಸೆ: ಯಾರಂದವರಿಗೆ ವಲಸೆಗೆ ಅವಕಾಶ ಕೊಡುವುದರ ಬದಲು ಕೌಶಲ್ಯವಂತ ಮತ್ತು ಸುಶಿಕ್ಷಿತ ವಲಸಿಗರಿಗೆ ಆದ್ಯತೆ ಕೊಡುವ ನೀತಿ ತರಲಾಗುತ್ತದೆ.
ಟ್ಯಾಕ್ಸ್ ಡಿಡಕ್ಷನ್: ಸಾಲ್ಟ್ ಡಿಡಕ್ಷನ್ ಕ್ಯಾಪ್ ಅನ್ನು ಮುಂದಿನ ಐದು ವರ್ಷಗಳಿಗೆ 10,000 ಡಾಲರ್ನಿಂದ 40,000 ಡಾಲರ್ಗೆ ಏರಿಸಲಾಗುತ್ತದೆ. ಸಾಲ್ಟ್ ಡಿಡಕ್ಷನ್ ಟ್ಯಾಕ್ಸ್ ಎಂದರೆ ರಾಜ್ಯ ಮತ್ತು ಸ್ಥಳೀಯ ತೆರಿಗೆಗಳು. ನೀವು ರಾಜ್ಯ ಮತ್ತು ಸ್ಥಳೀಯ ತೆರಿಗೆಗಳನ್ನು ಕಟ್ಟಿದ್ದರೆ, ಫೆಡರಲ್ ಟ್ಯಾಕ್ಗಳಿಂದ ಡಿಡಕ್ಷನ್ ಪಡೆಯಬಹುದು.
ಮೆಡಿಕ್ಏಡ್ ಟ್ಯಾಕ್ಸ್ ಇಳಿಕೆ: ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಕವರೇಜ್ (Medicaid scheme) ನೀಡಲು ಆಗುವ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರಗಳು ವಿವಿಧ ಆಸ್ಪತ್ರೆ ಇತ್ಯಾದಿಗಳ ಮೇಲೆ ಟ್ಯಾಕ್ಸ್ ಹಾಕುತ್ತವೆ. ಇದಕ್ಕೆ ಮೆಡಿಕ್ಏಡ್ ಟ್ಯಾಕ್ಸ್ (Medicaid tax) ಎನ್ನುತ್ತಾರೆ. ಸದ್ಯ ಇದಕ್ಕೆ ಶೇ. 6 ತೆರಿಗೆ ಇದೆ. ಇದನ್ನು 2031ರೊಳಗೆ ಹಂತಹಂತವಾಗಿ ಶೇ. 3.5ಕ್ಕೆ ಇಳಿಸಲು ಯೋಜಿಸಲಾಗಿದೆ. ಇದು ಅಮೆರಿಕದ ಆಸ್ಪತ್ರೆಗಳ ಮೇಲಿನ ಹೊರೆ ತಗ್ಗಿಸಬಹುದು.
ಇದನ್ನೂ ಓದಿ: ಕೋಟ್ಯಾಧಿಪತಿಗಳೇ ಇರಬಾರದು ಎಂದ ಮಮ್ದಾನಿ; ಮೀರಾ ನಾಯರ್ ಪುತ್ರ ಹಾಗೂ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಹೇಳಿಕೆ
ಮೆಡಿಕ್ಏಡ್ ಎನ್ನುವುದು ಇನ್ಷೂರೆನ್ಸ್ ಕವರೇಜ್ ಇರುವ ಯೋಜನೆ. ಭಾರತ ಸರ್ಕಾರ ನಡೆಸುವ ಪಿಎಂ ಜನ್ ಆರೋಗ್ಯ ಅಥವಾ ಆಯುಷ್ಮಾನ್ ಭಾರತ್ ಸ್ಕೀಮ್ ರೀತಿಯದ್ದು. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರ್ಕಾರವು ಮೆಡಿಕ್ಏಡ್ ಸ್ಕೀಮ್ ನಡೆಸುತ್ತದೆ. ಇದು ಉಚಿತ ಅಥವಾ ಅಲ್ಪ ಮೊತ್ತಕ್ಕೆ ನೀಡಲಾಗುವ ವಿಮಾ ಸೌಲಭ್ಯ.
ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ಕಾಯ್ದೆ ಪ್ರಕಾರ, ಮೆಡಿಕ್ಏಡ್ ಸೌಲಭ್ಯ ಪಡೆಯಬೇಕಾದರೆ ಜನರು ಕೆಲಸ ಮಾಡುತ್ತಿರಬೇಕು. 19ರಿಂದ 64 ವರ್ಷ ವಯೋಮಾನದಲ್ಲಿರುವ ಜನರು ಮೆಡಿಕ್ಏಡ್ ಕವರೇಜ್ ಪಡೆಯಬೇಕಾದರೆ ತಿಂಗಳಿಗೆ ಕನಿಷ್ಠ 80 ಗಂಟೆ ಕೆಲಸ ಮಾಡಬೇಕಾಗುತ್ತದೆ. ಹಿಂದೆಯೂ ಈ ಕಾನೂನು ಇತ್ತಾದರೂ ಅದು ಮಕ್ಕಳಿಲ್ಲದ ವ್ಯಕ್ತಿಗಳಿಗೆ ಅನ್ವಯ ಆಗುತ್ತಿತ್ತು. ಈಗ ಪ್ರತಿಯೊಬ್ಬರೂ ಕೂಡ ಕೆಲಸ ಮಾಡಲೇಬೇಕಾಗುತ್ತದೆ.
65 ವರ್ಷದ ಆದ ಬಳಿಕ ಮೆಡಿಕ್ಏಡ್ ಬದಲು ಮೆಡಿಕೇರ್ ಎನ್ನುವ ಪ್ರತ್ಯೇಕ ಇನ್ಷೂರೆನ್ಸ್ ಯೋಜನೆ ಅನ್ವಯ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ