Vedanta: ಡಿಸ್​ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್​ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ

Display Fab Unit Proposal: ಟಿಎಫ್​ಡಿ ಎಲ್​ಸಿಡಿ ತಯಾರಿಸುವ ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಜೊತೆ ವೇದಾಂತ ಗ್ರೂಪ್ ಮಾತುಕತೆ ನಡೆಸುತ್ತಿದೆ. ಈ ಎರಡೂ ಕಂಪನಿಗಳ ಉನ್ನತ ಅಧಿಕಾರಿಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ತಿಳಿದುಬಂದಿದೆ. ಈ ಮಾತುಕತೆ ಫಲಪ್ರದವಾದರೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಒಂದು ಪುಷ್ಟಿ ಸಿಕ್ಕಂತಾಗುತ್ತದೆ.

Vedanta: ಡಿಸ್​ಪ್ಲೇ ಫ್ಯಾಬ್ ಘಟಕ ಸ್ಥಾಪನೆಗೆ ವೇದಾಂತ ಮತ್ತು ತೈವಾನ್​ನ ಇನ್ನೋಲುಕ್ಸ್ ನಡುವೆ ನಡೆದಿದೆ ಮಾತುಕತೆ
ವೇದಾಂತ ಗ್ರೂಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2023 | 3:00 PM

ನವದೆಹಲಿ, ನವೆಂಬರ್ 9: ಭಾರತದಲ್ಲಿ ಸೆಮಿಕಂಡ್ಟರ್ ಉದ್ದಿಮೆ (semiconductor manufacturing) ಶುರು ಮಾಡಲು ಪ್ರಯತ್ನಿಸುತ್ತಿರುವ ವೇದಾಂತ ಸಂಸ್ಥೆ ಇದೀಗ ಡಿಸ್​ಪ್ಲೇ ಫ್ಯಾಬ್ರಿಕೇಶನ್ ಘಟಕದ (display fab unit) ಸ್ಥಾಪನೆಗೆ ತೈವಾನ್ ಕಂಪನಿಯೊಂದರೊಂದಿಗೆ ಕೈಜೋಡಿಸಲು ಯತ್ನಿಸುತ್ತಿದೆ. ಟಿಎಫ್​ಡಿ ಎಲ್​ಸಿಡಿ ತಯಾರಿಸುವ ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಜೊತೆ ವೇದಾಂತ ಗ್ರೂಪ್ ಮಾತುಕತೆ ನಡೆಸುತ್ತಿದೆ. ಈ ಎರಡೂ ಕಂಪನಿಗಳ ಉನ್ನತ ಅಧಿಕಾರಿಗಳು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ತಿಳಿದುಬಂದಿದೆ.

‘ವೇದಾಂತ ಡಿಸ್​ಪ್ಲೇಸ್ ಲಿ ಸಂಸ್ಥೆಯ ಸಿಇಒ ವೈ.ಜೆ. ಚೆನ್, ವೇದಾಂತ ಗ್ರೂಪ್​ನ ಸ್ಟ್ರಾಟಿಜಿ ಮತ್ತು ಪಾಲಿಸಿ ವಿಭಾಗದ ಛೇರ್ಮನ್ ಸುನೀಲ್ ದುಗ್ಗಲ್, ಇನ್ನೋಲುಕ್ಸ್​ನ ಡೈರೆಕ್ಟರ್ ಜೈಹ ಚೌ ವ್ಯಾಂಗ್ ಅವರು ನನ್ನ ಕಚೇರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೇಶೀಯವಾಗಿ ಡಿಸ್​ಪ್ಲೇ ತಯಾರಿಸುವ ವಿಚಾರದ ಬಗ್ಗೆ ನಾವು ಚರ್ಚೆ ಮಾಡಿದೆವು,’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ

ಇದರೊಂದಿಗೆ, ತೈವಾನ್​ನ ಇನ್ನೋಲುಕ್ಸ್ ಕಂಪನಿ ಜೊತೆ ವೇದಾಂತ ಮಾತುಕತೆ ನಡೆಸುತ್ತಿರುವ ಸಂಗತಿ ದೃಢಪಟ್ಟಿದೆ. ವೇದಾಂತದ ಸೆಮಿಕಂಡಕ್ಟರ್ ಮತ್ತು ಡಿಸ್​ಪ್ಲೇ ವ್ಯವಹಾರ ವಿಭಾಗದ ವಕ್ತಾರರೊಬ್ಬರು ಈ ವಿಚಾರವನ್ನು ಖಚಿತಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಕೂಡ ತಿಳಿಸಿದೆ.

‘ಸರ್ಕಾರದ ಸ್ವಾವಂಬನೆಯ ಭಾರತದ ಮಹೋದ್ದೇಶಕ್ಕೆ ನಾವು ಬೆಂಬಲ ನೀಡಲು ಕಟಿಬದ್ಧರಾಗಿದ್ದೇವೆ. ಡಿಸ್​ಪ್ಲೇ ಫ್ಯಾಬ್ ಯೂನಿಟ್ ಅನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ಹೈಟೆಕ್ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಸ್ವಾವಲಂಬನೆ ಸಾಧ್ಯವಾಗಬಹುದು,’ ಎಂದು ಆ ವಕ್ತಾರರು ಖಚಿತಪಡಿಸಿದ್ದಾರೆ.

ತೈವಾನ್​ನ ಇನ್ನೋಲುಕ್ಸ್ ಕಾರ್ಪೊರೇಶನ್ ಸಂಸ್ಥೆ ಟಿಎಫ್​ಟಿ ಎಲ್​ಸಿಡಿ ಡಿಸ್​ಪ್ಲೇ ಅನ್ನು ತಯಾರಿಸುತ್ತದೆ. ಥಿನ್ ಫಿಲಂ ಟ್ರಾನ್ಸಿಸ್ಟರ್ ತಂತ್ರಜ್ಞಾನದ ಮೂಲಕ ಎಲ್​ಸಿಡಿ ಸ್ಕ್ರೀನ್​ಗಳು ಇವು. ಕಂಪ್ಯೂಟರ್, ಲ್ಯಾಪ್​ಟಾಪ್, ಸ್ಮಾರ್ಟ್​ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತದೆ. ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸರಪಳಿಯ ಒಂದು ಭಾಗವಾಗಿ ಡಿಸ್​ಪ್ಲೇ ಫ್ಯಾಬ್ ಯೂನಿಟ್ ಇರುತ್ತದೆ.

ಇದನ್ನೂ ಓದಿ: ಸಹಸ್ರ ಸಾಧನೆ; ಸೆಮಿಕಂಡಕ್ಟರ್ ಮೆಮೊರಿ ಚಿಪ್ ತಯಾರಿಸಿದ ಮೊದಲ ಭಾರತೀಯ ಕಂಪನಿ ಎಂಬ ದಾಖಲೆ

ವೇದಾಂತ ಸಂಸ್ಥೆ ಸೆಮಿಕಂಡಕ್ಟರ್ ಚಿಪ್ ಘಟಕಗಳ ನಿರ್ಮಾಣದ ಮುಖ್ಯ ಗುರಿ ಹೊಂದಿದೆ. ಈ ಹಿಂದೆ ತೈವಾನ್​ನ ಫಾಕ್ಸ್​ಕಾನ್ ಜೊತೆ ಅದು ಒಪ್ಪಂದ ಮಾಡಿಕೊಂಡಿತ್ತು. ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆಯ ಪ್ರಸ್ತಾಪ ಇತ್ತು. ಆದರೆ, ಈ ಜಂಟಿ ವ್ಯವಹಾರ ಕೆಲ ತಿಂಗಳ ಹಿಂದೆ ಮುರಿದುಬಿದ್ದಿತು. ಎರಡೂ ಕಂಪನಿಗಳು ಪ್ರತ್ಯೇಕವಾಗಿ ಸೆಮಿಕಂಡಕ್ಟರ್ ಉತ್ಪಾದನೆಯ ಹಾದಿ ಹಿಡಿಯಲು ನಿರ್ಧರಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ