ನವದೆಹಲಿ, ಫೆಬ್ರುವರಿ 7: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಅಜಿಲಿಟಾಸ್ ಸ್ಪೋರ್ಟ್ಸ್ (Agilitas Sports) ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ ಎನ್ನುವ ಸುದ್ದಿ ಸಿಎನ್ಬಿಸಿ ಟಿವಿ18ನಲ್ಲಿ ವರದಿಯಾಗಿದೆ. ಹಾಗೆಯೇ, ಪ್ಯೂಮಾ ಜೊತೆ ಎಂಟು ವರ್ಷದಿಂದ ಇದ್ದ ಒಪ್ಪಂದದಿಂದ ವಿರಾಟ್ ಕೊಹ್ಲಿ ಹಿಂದಕ್ಕೆ ಸರಿದಿದ್ದಾರೆ. ಜಗದ್ವಿಖ್ಯಾತ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಆದ ಪ್ಯೂಮಾ ಜೊತೆ ವಿರಾಟ್ ಕೊಹ್ಲಿ ನಂಟು 2017ರಲ್ಲಿ ಆರಂಭವಾಗಿತ್ತು. ಎಂಟು ವರ್ಷ ಕಾಲ ಅವರು ಬ್ರ್ಯಾಂಡ್ ಅಂಬಾಸಡರ್ ಆಗಲು 110 ಕೋಟಿ ರೂ ಮೊತ್ತದ ಡೀಲ್ ಆಗಿತ್ತು. ಈಗ ಒಪ್ಪಂದದ ಅವಧಿ ಬಹುತೇಕ ಮುಗಿದಿದೆ.
ಕುತೂಹಲವೆಂದರೆ ವಿರಾಟ್ ಕೊಹ್ಲಿ ಬ್ರ್ಯಾಂಡ್ ಅಂಬಾಸಡರ್ ಆಗಲಿರುವ ಎಜಿಲಿಟಾಸ್ ಸ್ಪೋರ್ಟ್ಸ್ ಸಂಸ್ಥೆಯ ಸಂಸ್ಥಾಪಕರು ಪ್ಯೂಮಾದ ಮಾಜಿ ಅಧಿಕಾರಿಯೂ ಹೌದು. ವಿರಾಟ್ ಕೊಹ್ಲಿ ಪ್ಯೂಮಾ ಜೊತೆ ಒಪ್ಪಂದ ಮಾಡಿಕೊಂಡಾಗ ಪ್ಯೂಮಾ ಇಂಡಿಯಾದಲ್ಲಿ ಅಭಿಷೇಕ್ ಗಂಗೂಲಿ ಎಂಡಿಯಾಗಿದ್ದರು. ಅವರೇ ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ 2 ಶತಕ ಬಾರಿಸುವಷ್ಟರಲ್ಲಿ, 8 ಸೆಂಚುರಿ ಸಿಡಿಸಿದ ಕೇನ್
2023ರ ಮೇ ತಿಂಗಳಲ್ಲಿ ಅಭಿಷೇಕ್ ಗಂಗೂಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಒಂದು ವರ್ಷದ ಒಳಗಾಗಿ ಸಾಕಷ್ಟು ಪ್ರಗತಿ ಕಂಡಿದೆ ಇವರ ಕಂಪನಿ. ಇತ್ತೀಚೆಗಷ್ಟೇ ನೆಕ್ಸಸ್ ವೆಂಚರ್ ಎಂಬ ಕಂಪನಿಯಿಂದ 100 ಕೋಟಿ ರೂ ಫಂಡಿಂಗ್ ಕೂಡ ಪಡೆದಿದೆ.
ವಿರಾಟ್ ಕೊಹ್ಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್ಗೆ ಬ್ರ್ಯಾಂಡ್ ಅಂಬಾಸಡರ್ ಆಗಿರುವುದು ಮಾತ್ರವಲ್ಲ, ಕಂಪನಿಯಲ್ಲಿ ಪಾಲುದಾರರೂ ಹೌದು. ಇದೇ ಕಾರಣಕ್ಕೆ ಅವರು ಪ್ಯೂಮಾ ಜೊತೆಗಿನ ಡೀಲ್ ಅನ್ನು ಕೈಬಿಟ್ಟು ಎಜಿಲಿಟಾಸ್ಗೆ ಬಂದಿರಬಹುದು.
ಎಜಿಲಿಟಾಸ್ ಸ್ಪೋರ್ಟ್ಸ್ ಕಳೆದ ಒಂದು ವರ್ಷದಿಂದ ಕೆಲ ಕಂಪನಿಗಳನ್ನು ಖರೀದಿ ಮಾಡಿದೆ. ಅಡಿಡಾಸ್, ರೀಬೋಕ್ ಮೊದಲಾದ ಬ್ರ್ಯಾಂಡ್ಗಳಿಗೆ ಶೂಗಳನ್ನು ತಯಾರಿಸಿಕೊಡುವ ಮೋಚಿಕೋ ಶೂಸ್ ಪ್ರೈ ಲಿ ಎಂಬ ಕಂಪನಿಯನ್ನು ಸೆಪ್ಟೆಂಬರ್ನಲ್ಲಿ ಖರೀದಿ ಮಾಡಲಾಗಿತ್ತು. ಈಗ ಇನ್ನಷ್ಟು ಫಂಡಿಂಗ್ ಸಿಕ್ಕಿರುವುದರಿಂದ ಇನ್ನಷ್ಟು ಕಂಪನಿಗಳನ್ನು ಖರೀದಿಸಬಹುದು. ಹಾಗೆಯೇ, ಶೂ, ಶರ್ಟ್ ಇತ್ಯಾದಿ ಉತ್ಪನ್ನಗಳ ತಯಾರಿಕೆಯ ಸಾಮರ್ಥ್ಯ ಹೆಚ್ಚಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ