ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ

|

Updated on: Sep 13, 2023 | 2:02 PM

Russia President Vladimir Putin: ಭಾರತದ ಮೇಡ್ ಇನ್ ಇಂಡಿಯಾ ನೀತಿಯನ್ನು ಮೆಚ್ಚಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್, ತಮ್ಮ ದೇಶದಲ್ಲಿಯೂ ರಷ್ಯನ್ ನಿರ್ಮಿತ ವಾಹನಗಳ ಬಳಕೆ ಮಾಡಬೇಕೆಂದು ತಮ್ಮ ದೇಶದ ಜನರಿಗೆ ಕರೆ ನೀಡಿದ್ದಾರೆ. ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಮಾತನಾಡುತ್ತಿದ್ದ ಅವರು, ಭಾರತದಿಂದ ಯೂರೋಪ್​ವರೆಗೆ ಸರಕು ಸಾಗಣೆ ಮತ್ತು ವ್ಯಾಪಾರ ಮಾರ್ಗ ಸೃಷ್ಟಿಸುವ ಹೊಸ ಎಕನಾಮಿಕ್ ಕಾರಿಡಾರ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ
ವ್ಲಾದಿಮಿರ್ ಪುಟಿನ್
Follow us on

ನವದೆಹಲಿ, ಸೆಪ್ಟೆಂಬರ್ 13: ಭಾರತದ ಕೆಲ ಆರ್ಥಿಕ ನೀತಿಗಳನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಪ್ರಶಂಸಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಘೋಷಣೆಯಾದ ಭಾರತ ಮಧ್ಯಪ್ರಾಚ್ಯ ಮತ್ತು ಯೂರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆಯಿಂದ (IMEC- India Middle-east Europe Economic Corridor) ರಷ್ಯಾಗೆ ಹಿನ್ನಡೆ ಇಲ್ಲ, ಬದಲಾಗಿ ಲಾಭವೇ ಆಗುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ, ಭಾರತದ ಮೇಕ್ ಇನ್ ಇಂಡಿಯಾ ನೀತಿಯನ್ನು ಪ್ರಶಂಸಿದ್ದಾರೆ. ರಷ್ಯಾದ ಪೂರ್ವಭಾಗದ ಕರಾವಳಿಯಲ್ಲಿರುವ ವ್ಲಾದಿವೋಸ್ಟೊಕ್ ನಗರದಲ್ಲಿ 8ನೇ ಈಸ್ಟರ್ನ್ ಎಕನಾಮಿಕ್ ಫೋರಂ (EEF) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವ್ಲಾದಿಮಿರ್ ಪುಟಿನ್, ಮೇಕ್ ಇನ್ ಇಂಡಿಯಾ ಯೋಜನೆಗೆ ಮೋದಿ ಒತ್ತುಕೊಡುತ್ತಿರುವುದು ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದು, ರಷ್ಯಾವೂ ಅದೇ ನೀತಿಯನ್ನು ಅನುಸರಿಸುವುದು ಉತ್ತಮ ಎಂದು ಹೇಳಿದ್ದಾರೆ.

ರಷ್ಯನ್ ನಿರ್ಮಿತ ಕಾರುಗಳನ್ನು ಬಳಸಲು ಪುಟಿನ್ ಕರೆ

ಎಂಟನೇ ಇಇಎಫ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಷ್ಯನ್ ನಿರ್ಮಿತ ವಾಹನಗಳನ್ನು ಬಳಸುವಂತೆ ತಮ್ಮ ದೇಶದ ಜನರಿಗೆ ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತದ ನೀತಿಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಸಂಪರ್ಕ ಹೇಗಿರುತ್ತದೆ? ವಿಡಿಯೊ ನೋಡಿ

‘ಆಗ (90ರ ದಶಕದಲ್ಲಿ) ನಮ್ಮಲ್ಲಿ ದೇಶೀಯವಾಗಿ ನಿರ್ಮಿತವಾದ ಕಾರುಗಳು ಇರಲಿಲ್ಲ. ಆದರೆ, ಈಗ ಇದೆ. 90ರ ದಶಕದಲ್ಲಿ ನಾವು ಬಹಳವಾಗಿ ಖರೀದಿಸಿದ ಮರ್ಸಿಡೆಸ್ ಅಥವಾ ಆಡಿ ಕಾರುಗಳಿಗೆ ಹೋಲಿಸಿದರೆ ನಮ್ಮಲ್ಲಿ ತಯಾರಾದ ಕಾರುಗಳು ಸಾಧಾರಣವಾಗಿ ಕಾಣುತ್ತವೆ. ಆದರೆ, ಅದಲ್ಲ ಈಗ ಸಮಸ್ಯೆ. ಭಾರತದಂತಹ ನಮ್ಮ ಹಲವು ಸಹವರ್ತಿಗಳಿಂದ ನಾವು ಕಲಿಯುವುದಿದೆ. ಅವರೆಲ್ಲರೂ ಉತ್ಪಾದನೆಯತ್ತ ಗಮನ ಕೊಡುತ್ತಿದ್ದಾರೆ. ಭಾರತ ತನ್ನಲ್ಲಿ ತಯಾರಾದ ಕಾರುಗಳನ್ನು ಬಳಸಲು ಆದ್ಯತೆ ಕೊಟ್ಟಿದೆ. ಈ ನಿಟ್ಟಿನಲ್ಲಿ, ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಉತ್ಪನ್ನಗಳನ್ನು ಬಳಸುವಂತೆ ನರೇಂದ್ರ ಮೋದಿ ಅವರು ಜನರಿಗೆ ಉತ್ತೇಜನ ನೀಡುತ್ತಿರುವುದು ಸರಿಯಾದ ಕ್ರಮವಾಗಿದೆ. ನಮ್ಮಲ್ಲಿ ವಾಹನಗಳಿವೆ. ಅವುಗಳನ್ನು ನಾವು ಬಳಸಬೇಕು,’ ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ.

ಭಾರತದ ಆರ್ಥಿಕ ಕಾರಿಡಾರ್ ಯೋಜನೆ ಬಗ್ಗೆಯೂ ಪುಟಿನ್ ಸಕಾರಾತ್ಮಕ

ಜಿ20 ಶೃಂಗಸಭೆಯಲ್ಲಿ ಘೋಷಣೆಯಾದ ಭಾರತ ಯೂರೋಪ್ ನಡುವಿನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಚೀನಾದ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್​ಗೆ ಪರ್ಯಾಯ ಎಂದು ವಿಶ್ಲೇಷಿಸಲಾಗುತ್ತಿದೆ. ಚೀನಾದ ಪ್ರಮುಖ ಮಿತ್ರದೇಶವಾಗಿರುವ ರಷ್ಯಾ ಈ ಯೋಜನೆ ಬಗ್ಗೆ ನಕಾರಾತ್ಮಕವಾಗಬಹುದು ಎಂಬ ಅಭಿಪ್ರಾಯ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ರಷ್ಯಾ ಈ ಯೋಜನೆಯಿಂದ ತನಗೂ ಲಾಭ ಆಗುತ್ತದೆ ಎಂದು ಹೇಳಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?

ಭಾರತದ ಐಎಂಇಸಿ ಕಾರಿಡಾರ್ ದಾರಿ ರಷ್ಯಾದ ಕೆಲ ಪ್ರದೇಶಗಳ ಮೂಲಕವೂ ಹಾದು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆಯಿಂದ ರಷ್ಯಾಗೆ ನಷ್ಟವೇನಿಲ್ಲ ಎಂಬುದ ಪುಟಿನ್ ಅನಿಸಿಕೆ.

‘ನಮ್ಮ ಉತ್ತರ-ದಕ್ಷಿಣ ಯೋಜನೆಗೆ (ನಾರ್ತ್ ಸೌತ್ ಪ್ರಾಜೆಕ್ಟ್) ಇದು ಹೆಚ್ಚುವರಿ ಎಂದು ಭಾವಿಸಬಹುದು. ಈ ಕಾರಿಡಾರ್​ನಲ್ಲಿ ಹೆಚ್ಚುವರಿ ಸರಕು ಸಾಗಣೆಗಳಾಗುತ್ತವೆ. ನಮಗೆ ಹಿನ್ನಡೆ ಆಗುವಂಥದ್ದು ಏನೂ ಕಾಣುತ್ತಿಲ್ಲ’ ಎಂದು ಹೇಳಿದ ರಷ್ಯಾ ಅಧ್ಯಕ್ಷರು, ಭಾರತ ನೇತೃತ್ವದ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಅಮೆರಿಕಕ್ಕೆ ಸಿಗುವ ಲಾಭ ಅಷ್ಟೇನೂ ಇಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ