ಟ್ರಾಯ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ; ಖಾಸಗಿ ಕ್ಷೇತ್ರದವರಿಗೂ ಟ್ರಾಯ್ ಅಧ್ಯಕ್ಷರಾಗಲು ಅವಕಾಶ?
TRAI Chairperson Job For Private Sector?: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಛೇರ್ಮನ್ ಸ್ಥಾನಕ್ಕೆ ಖಾಸಗಿ ವಲಯದ ವ್ಯಕ್ತಿಗಳಿಗೂ ಅವಕಾಶ ಕೊಡಲಾಗುವಂತೆ ಸರ್ಕಾರ ಕಾನೂನು ರೂಪಿಸಲು ಹೊರಟಿದೆ. ವರದಿಗಳ ಪ್ರಕಾರ, ಟ್ರಾಯ್ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸಾಧ್ಯತೆ ಇದೆ. ಸದ್ಯ ಟ್ರಾಯ್ಗೆ ಈವರೆಗೂ ಛೇರ್ಮನ್ ಆದವರೆಲ್ಲರೂ ಸರ್ಕಾರೀ ಹುದ್ದೆಗಳಲ್ಲಿ ಇದ್ದವರೇ ಆಗಿದ್ದಾರೆ. ಈಗ ಖಾಸಗಿ ವಲಯದವರಿಗೂ ಅವಕಾಶ ಕೊಡುವುದು ದೂರಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆ ತರಲು ಅನುಕೂಲವಾಗಬಹುದು ಎಂದು ಭಾವಿಸಲಾಗಿದೆ.
ನವದೆಹಲಿ, ಸೆಪ್ಟೆಂಬರ್ 13: ಕೇಂದ್ರ ಸರ್ಕಾರ 1997ರ ಟ್ರಾಯ್ ಕಾಯ್ದೆಗೆ (TRAI Act) ತಿದ್ದುಪಡಿ ತರಲು ಆಲೋಚಿಸುತ್ತಿದೆ. ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವಾದ (Telecom Regulatory Authority of India) ಟ್ರಾಯ್ನ ಛೇರ್ಮನ್ ಸ್ಥಾನ ಪಡೆಯುವ ಅವಕಾಶವನ್ನು ಖಾಸಗಿ ಕ್ಷೇತ್ರದ ವ್ಯಕ್ತಿಗಳಿಗೂ ನೀಡುವಂತೆ ಮಾಡಡುವುದು ಈ ತಿದ್ದುಪಡಿ ಉದ್ದೇಶ ಎನ್ನಲಾಗಿದೆ. ಇದರೊಂದಿಗೆ, ಭಾರತದ ವಿವಿಧ ಉದ್ಯಮಗಳ ನಿಯಂತ್ರಣ ಪ್ರಾಧಿಕಾರಗಳ ಪ್ರಮುಖ ಹುದ್ದೆಗಳನ್ನು ಖಾಸಗಿ ವಲಯದ ವ್ಯಕ್ತಿಗಳಿಗೂ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಇಡಲಿರುವ ಮೊದಲ ಹೆಜ್ಜೆ ಇದಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಆಡಳಿತ ವ್ಯವಹಾರದಲ್ಲಿ ಸರ್ಕಾರ ತರಲಿರುವ ಮತ್ತೊಂದು ಪ್ರಮುಖ ಸುಧಾರಣಾ ಕ್ರಮವೆಂದೂ ಭಾವಿಸಲಾಗಿದೆ.
ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ಮುಂಬರುವ ದೂರಸಂಪರ್ಕ ಮಸೂದೆಯಲ್ಲಿ ಕೆಲ ಪ್ರಮುಖ ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿ ಪ್ರಮುಖ ಹುದ್ದೆಗಳಲ್ಲಿ ಸುದೀರ್ಘ ಅನುಭವ ಇರುವ ವ್ಯಕ್ತಿಗಳನ್ನು ಟ್ರಾಯ್ ಛೇರ್ಮನ್ ಸ್ಥಾನಕ್ಕೆ ನೇಮಕ ಮಾಡುವ ಕಾನೂನು ಅವಕಾಶ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
1997ರ ಟ್ರಾಯ್ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಟ್ರಾಯ್ ಸದಸ್ಯರಾಗಬೇಕಿದ್ದರೆ ಸರ್ಕಾರದಲ್ಲಿ ಮೂರಕ್ಕೂ ಹೆಚ್ಚು ವರ್ಷ ಕಾಲ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿ ಅಥವಾ ತತ್ಸಮಾನ ಹುದ್ದೆ ಹೊಂದಿರಬೇಕು. ಆದರೆ, ಟ್ರಾಯ್ ಛೇರ್ಮನ್ ಸ್ಥಾನಕ್ಕೆ ಅಂಥ ಮಾನದಂಡ ನಿಗದಿಯಾಗಿಲ್ಲ. ಇದ್ದರೂ ಕೂಡ ಇದೂವರೆಗೆ ಆಯ್ಕೆಯಾದ ಛೇರ್ಮನ್ಗಳೆಲ್ಲರೂ ಸರ್ಕಾರಿ ಸಂಸ್ಥೆ ಅಥವಾ ವಿಭಾಗಗಳಲ್ಲಿ ಕೆಲಸ ಮಾಡಿದವರೇ ಆಗಿದ್ದಾರೆ.
ಇದನ್ನೂ ಓದಿ: ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಸೂಪರ್ ಹಿಟ್ ಎನಿಸಿರುವುದು ಯಾಕೆ? ಐತಿಹಾಸಿಕ ಎನಿಸಿದ ನಿರ್ಧಾರಗಳ್ಯಾವುವು?
ಈಗ ಈ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲಿದೆ. ವರದಿಯ ಪ್ರಕಾರ, ಖಾಸಗಿ ವಲಯದ ಸಂಸ್ಥೆಯ ಮಂಡಳಿ ಸದಸ್ಯನಾಗಿ ಅಥವಾ ಸಿಇಒ ಇತ್ಯಾದಿ ಸೀನಿಯರ್ ಮಟ್ಟದಲ್ಲಿ ಕನಿಷ್ಠ 30 ವರ್ಷ ವೃತ್ತಿಪರ ಅನುಭವ ಇದ್ದವರನ್ನು ಟ್ರಾಯ್ ಛೇರ್ಮನ್ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಬಹುದು ಎಂಬ ಅಂಶವನ್ನು ಕಾಯ್ದೆಯಲ್ಲಿ ಸೇರಿಸುವ ಪ್ರಸ್ತಾಪ ಇದೆ.
ಈಗಿನ ಟ್ರಾಯ್ ಛೇರ್ಮನ್ ಪಿ.ಡಿ. ವಘೇಲಾ ಅವರು ಐಎಎಸ್ ಅಧಿಕಾರಿಯಾಗಿದ್ದು, ಹಿಂದೆ ಫಾರ್ಮಸ್ಯೂಟಿಕಲ್ಸ್ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅವರಿಗಿಂತ ಹಿಂದೆ ಆ ಹುದ್ದೆಯಲ್ಲಿದ್ದ ಆರ್ ಎಸ್ ಶರ್ಮಾ ಕೂಡ ಐಎಎಸ್ ಅಧಿಕಾರಿಯಾಗಿದ್ದು, ಐಟಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಆಹಾರವಸ್ತುಗಳ ಬೆಲೆ ಇಳಿಕೆಯ ಎಫೆಕ್ಟ್; ರೀಟೇಲ್ ಹಣದುಬ್ಬರ ಆಗಸ್ಟ್ನಲ್ಲಿ ಶೇ. 6.83ಕ್ಕೆ ಇಳಿಕೆ
1997ರಿಂದ 2000ರವರೆಗೂ ಈ ಪ್ರಾಧಿಕಾರದ ಮೊದಲ ಛೇರ್ಮನ್ ಆಗಿದ್ದ ಎಸ್ ಎಸ್ ಸೋಧಿ ಅವರು ಅಲಾಹಾಬಾದ್ ಹೈಕೋರ್ಟ್ನಲ್ಲಿ ಹಿಂದೆ ಮುಖ್ಯ ನ್ಯಾಯಾಧೀಶರಾಗಿದ್ದವರು. ಎರಡನೇ ಛೇರ್ಮನ್ ಎಂಎಸ್ ವರ್ಮಾ ಅವರು 2000ದಿಂದ 2003ರವರೆಗೂ ಅಧಿಕಾರದಲ್ಲಿದ್ದರು. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಛೇರ್ಮನ್ ಕೂಡ ಹೌದು. ಟ್ರಾಯ್ ಛೇರ್ಮನ್ ಆದವರ ಪೈಕಿ ಸೋಧಿ ಮತ್ತು ವರ್ಮಾ ಅವರಿಬ್ಬರು ಮಾತ್ರ ಐಎಎಸ್ ಅಧಿಕಾರಿಗಳಲ್ಲ ಎಂಬುದು ವಿಶೇಷ.
ಈಗ ಖಾಸಗಿ ವಲಯದ ವ್ಯಕ್ತಿಗಳನ್ನು ಪ್ರಾಧಿಕಾರದ ಮುಖ್ಯಸ್ಥರಂತಹ ಆಯಕಟ್ಟಿನ ಹುದ್ದೆಗಳಿಗೆ ನೇಮಕ ಮಾಡಿದಾಗ ಹಿತಾಸಕ್ತಿ ಸಂಘರ್ಷದ ಪ್ರಸಂಗ ಎದುರಾಗಬಹುದು ಎಂಬ ಅಭಿಪ್ರಾಯ ಇದೆ. ಆದರೆ, ಇಂಥ ಸಂಘರ್ಷ ತಡೆಯಲು ಸರ್ಕಾರ ಕಾಯ್ದೆಯಲ್ಲಿ ಕೆಲ ಅಂಶಗಳನ್ನು ಸೇರಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ