ನವದೆಹಲಿ: ನಮ್ಮ ಬಳಕೆದಾರರು ಮತ್ತು ಡೆವಲಪರ್ಗಳಿಗೆ ಬದ್ಧರಾಗಿದ್ದೇವೆ ಎಂದು ಗೂಗಲ್ (Google) ಹೇಳಿದೆ. ಪ್ಲೇ ಸ್ಟೋರ್ (Play Store) ನೀತಿಗಳಿಗೆ ಸಂಬಂಧಿಸಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದ್ದ ಭಾರತೀಯ ಸ್ಪರ್ಧಾ ಆಯೋಗ (CCI) ಮಂಗಳವಾರ ಗೂಗಲ್ಗೆ 936.44 ಕೋಟಿ ರೂ. ದಂಡ ವಿಧಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಗೂಗಲ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ನಮ್ಮ ಬಳಕೆದಾರರು ಮತ್ತು ಡೆವಲಪರ್ಗಳಿಗೆ ಬದ್ಧರಾಗಿದ್ದೇವೆ. ಸಂಸ್ಥೆಯು ಭಾರತದ ಡಿಜಿಟಲ್ ರೂಪಾಂತರ ಪ್ರಕ್ರಿಯೆಗೆ ಗಣನೀಯ ಕೊಡುಗೆ ನೀಡಿದ್ದಲ್ಲದೆ ಲಕ್ಷಾಂತರ ಭಾರತೀಯರು ಡಿಜಿಟಲ್ ವ್ಯವಸ್ಥೆಗೆ ಪ್ರವೇಶ ಪಡೆಯಲು ನೆರವಾಗಿದೆ. ದಂಡಕ್ಕೆ ಸಂಬಂಧಿಸಿ ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಗೂಗಲ್ ವಕ್ತಾರರು ಪ್ರತಿಕ್ರಿಯಿಸಿರುವುದಾಗಿ ‘ಎಎನ್ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
#UPDATE | “We remain committed to our users and developers and are reviewing the decision to evaluate the next steps,” says a Google spokesperson, on CCI imposing a penalty of Rs 936.44 cr for abusing its dominant position with respect to its Play Store policies, yesterday. pic.twitter.com/2AYBJdrVx4
— ANI (@ANI) October 26, 2022
‘ಆಂಡ್ರಾಯ್ಡ್ ಮತ್ತು ಗೂಗಲ್ ಪ್ಲೇಸ್ಟೋರ್ ನೀಡುವ ಪಾರದರ್ಶಕ ಸೇವೆ, ತಂತ್ರಜ್ಞಾನ, ಸುರಕ್ಷತೆ, ಗ್ರಾಹಕರ ರಕ್ಷಣೆ ಮತ್ತು ಅಪ್ರತಿಮ ಆಯ್ಕೆಗಳಿಂದ ಭಾರತೀಯ ಡೆವಲಪರ್ಗಳಿಗೆ ಪ್ರಯೋಜನವಾಗಿದೆ. ಕಡಿಮೆ ವೆಚ್ಚ ನಿಗದಿಪಡಿಸುವ ಮೂಲಕ ಭಾರತದ ಡಿಜಿಟಲ್ ರೂಪಾಂತರ ಪ್ರಕ್ರಿಯೆಗೂ ನೆರವಾಗಿದ್ದೇವೆ. ಲಕ್ಷಾಂತರ ಭಾರತೀಯರಿಗೆ ಡಿಜಿಟಲ್ ಸೇವೆ ದೊರೆಯುವಂತೆ ಮಾಡಿದ್ದೇವೆ’ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: CCI Penalty on Google: ಗೂಗಲ್ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ
ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಕ್ಟೋಬರ್ 20ರಂದು ಗೂಗಲ್ಗೆ ಸಿಸಿಐ 1,337 ಕೋಟಿ ರೂ. ದಂಡ ವಿಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ, ಅಂದರೆ ಅಕ್ಟೋಬರ್ 25ರಂದು ಮತ್ತೆ 936.44 ಕೋಟಿ ರೂ. ದಂಡ ವಿಧಿಸಿತ್ತು. ಜತೆಗೆ, ನ್ಯಾಯೋಚಿತವಲ್ಲದ ವ್ಯಾಪಾರದ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿತ್ತು. ಇದರಿಂದ ಗೂಗಲ್ಗೆ ಈವರೆಗೆ ಒಟ್ಟು 2,274 ಕೋಟಿ ರೂ. ದಂಡ ವಿಧಿಸಿದಂತಾಗಿದೆ. ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್ ವಿರುದ್ಧ ಕೇಳಿಬಂದಿದ್ದ ದೂರುಗಳಿಗೆ ಸಂಬಂಧಿಸಿ 2020ರ ಕೊನೆಯಲ್ಲಿ ಸಿಸಿಐ ತನಿಖೆ ಆರಂಭಿಸಿತ್ತು.
ಭಾರತೀಯರಿಗೆ ಹಿನ್ನಡೆ ಎಂದಿದ್ದ ಗೂಗಲ್
ದಂಡ ವಿಧಿಸಿರುವುದು ಭಾರತೀಯರಿಗೆ ಹಿನ್ನಡೆ ಉಂಟು ಮಾಡಲಿದೆ. ದಂಡದ ಪರಿಣಾಮವಾಗಿ ಆ್ಯಂಡ್ರಾಯ್ಡ್‌ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಸುರಕ್ಷತಾ ಅಪಾಯಗಳು ಎದುರಾಗಲಿವೆ. ಭಾರತೀಯರಿಗೆ ಮತ್ತು ಭಾರತದ ಉದ್ದಿಮೆಗಳಿಗೆ ಮೊಬೈಲ್ಗಳ ಮೇಲಿನ ಖರ್ಚೂ ಹೆಚ್ಚಾಗಲಿದೆ ಎಂದು ಗೂಗಲ್ ಈ ಹಿಂದೆ ಪ್ರತಿಕ್ರಿಯಿಸಿತ್ತು. ಇದೀಗ ಮತ್ತೆ ದಂಡ ವಿಧಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ