Housing Sales: 2022ರಲ್ಲಿ ಹೊಸ ಎತ್ತರಕ್ಕೇರಿದ ವಸತಿ ಮಾರಾಟ, ಬೆಂಗಳೂರಿನಲ್ಲೂ ಹೆಚ್ಚಳ
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ದೇಶದ ಪ್ರಮುಖ 7 ನಗರಗಳಲ್ಲಿ ವಸತಿ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ದೇಶದ ಪ್ರಮುಖ 7 ನಗರಗಳಲ್ಲಿ ವಸತಿ ಮಾರಾಟ (Housing Sales) ಗಣನೀಯವಾಗಿ ಹೆಚ್ಚಾಗಿದೆ. ಈ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿದೆ ಎಂದು ವರದಿಯಾಗಿದೆ. ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ (ANAROCK Property Consultants) ದತ್ತಾಂಶಗಳ ಪ್ರಕಾರ, ದೇಶದ ಪ್ರಮುಖ 7 ನಗರಗಳಲ್ಲಿ 2022ರ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ವಸತಿ ಮಾರಾಟ 3.6 ಲಕ್ಷ ದಾಟಿದೆ. 2014ರಲ್ಲಿ ಇದು 3.43 ಲಕ್ಷ ಇತ್ತು ಎನ್ನಲಾಗಿದೆ.
2022ರ ಜನವರಿ – ಸೆಪ್ಟೆಂಬರ್ ಅವಧಿಯಲ್ಲಿ ವಸತಿ ಮಾರಾಟವು 2019ರ ಇಡೀ ವರ್ಷದ ಅಂದಾಜು ಮಾರಾಟವನ್ನು ಮೀರಿತ್ತು. 2022ರಲ್ಲಿ ಈಗಾಗಲೇ 2.73 ಲಕ್ಷ ಯೂನಿಟ್ ಮಾರಾಟವಾಗಿದ್ದು, 2.65 ಲಕ್ಷ ಯೂನಿಟ್ ಸಿದ್ಧವಾಗುತ್ತಿವೆ. 2019ರಲ್ಲಿ ಇಡೀ ವರ್ಷದಲ್ಲಿ 2.61 ಲಕ್ಷ ಯೂನಿಟ್ ಮಾರಾಟವಾಗಿದ್ದರೆ ಈ ವರ್ಷದ ಹೊಸ ಪೂರೈಕೆಯು 2.34 ಲಕ್ಷ ಯೂನಿಟ್ ತಲುಪಿದೆ ಎಂದು ಅನರಾಕ್ ದತ್ತಾಂಶಗಳನ್ನು ಉಲ್ಲೇಖಿಸಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿ: CCI Fine on Google: ಬಳಕೆದಾರರು, ಡೆವಲಪರ್ಗಳಿಗೆ ಬದ್ಧರಾಗಿದ್ದೇವೆ; ಸಿಸಿಐ ದಂಡಕ್ಕೆ ಗೂಗಲ್ ಪ್ರತಿಕ್ರಿಯೆ
ವಸತಿ ಮಾರಾಟ ವಿಚಾರದಲ್ಲಿ ಮುಂಬೈ ಮೆಟ್ರೋಪಾಲಿಟನ್ ರೀಜನ್ (MMR) ಹಾಗೂ ನ್ಯಾಷನಲ್ ಕ್ಯಾಪಿಟಲ್ ರೀಜನ್ಗಳು (NCR) 2022ರ ಮೊದಲ 9 ತಿಂಗಳುಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿವೆ. ಈ ಎರಡು ನಗರ ಪ್ರದೇಶಗಳಲ್ಲಿ ಅಂದಾಜು 1,30,450 ಯೂನಿಟ್ಗಳು ಮಾರಾಟವಾಗಿವೆ. ಇದು ಒಟ್ಟು ಏಳು ನಗರಗಳಲ್ಲಿ ಮಾರಾಟವಾದ ಯೂನಿಟ್ಗಳ ಪೈಕಿ ಶೆಕಡಾ 48ರಷ್ಟಾಗಿದೆ.
ಬೆಂಗಳೂರಿನಲ್ಲೂ ಹೆಚ್ಚಿದ ಮಾರಾಟ
ವಸತಿ ಯೂನಿಟ್ಗಳು ಹೆಚ್ಚು ಮಾರಾಟವಾದ ಇತರ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಬೆಂಗಳೂರು, ಪುಣೆ, ಹೈದರಾಬಾದ್ಗಳಲ್ಲಿ ಶೇಕಡಾ 42ರಷ್ಟು ಮಾರಾಟವಾಗಿದೆ. 2022 ರಲ್ಲಿ ಸರಾಸರಿ ಪ್ರಾಪರ್ಟಿ ಬೆಲೆಗಳಲ್ಲಿ ಏರಿಕೆಯಾಗಿದ್ದರೂ ವಸತಿ ಮಾರಾಟವು ಮೇಲ್ಮುಖವಾಗಿಯೇ ಸಾಗಿದೆ.
2022ನೇ ವರ್ಷವು ಭಾರತದ ವಸತಿ ಮಾರಾಟ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲಿದೆ. ಈಗಾಗಲೇ ಈ ಹಿಂದಿನ ದಾಖಲೆಗಳನ್ನು ಹಿಂದಿಕ್ಕಲಾಗಿದ್ದು, ಹಬ್ಬದ ಅವಧಿಯಲ್ಲಿ ಮಾರಾಟ ಹೆಚ್ಚಿದೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಗೃಹ ಮಾಲೀಕರಾಗುವ ಪ್ರಮಾಣ ಸಹಜ ಸ್ಥಿತಿಗೆ ಮರಳಿದೆ. ಆರ್ಬಿಐ ರೆಪೊ ದರ ಹೆಚ್ಚಳ ಮಾಡಿದ ಹೊರತಾಗಿಯೂ ಜನ ಖರೀದಿಗೆ ಮುಂದಾಗುತ್ತಿದ್ದಾರೆ ಎಂದು ಅನರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ








