Pre-approved Personal Loan: ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್, ಅನಿವಾರ್ಯವಿದ್ದರಷ್ಟೇ ಪಡೆಯಿರಿ
ಯಾರಿಗೆ ಸಿಗುತ್ತದೆ ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್? ಇದರ ಪ್ರಯೋಜನಗಳೇನು? ಈ ಸಾಲವನ್ನು ತೆಗೆದುಕೊಳ್ಳಲೇಬೇಕೆ? ಇಲ್ಲಿದೆ ಮಾಹಿತಿ
ಹಬ್ಬದ ಸಂದರ್ಭದಲ್ಲಿ (Festive Season) ಖರೀದಿಯ ಭರಾಟೆ ಜೋರಾಗಿರುತ್ತದೆ. ಬೇಕೆನಿಸಿದ ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಬೇಕೆಂಬ ಬಯಕೆಯೂ ಹೆಚ್ಚಾಗಿರುತ್ತದೆ. ಇದಕ್ಕೆ ಹಣಕಾಸಿನ ಅಗತ್ಯವೂ ಅಷ್ಟೇ ಇರುತ್ತದಲ್ಲ? ಇಂಥ ಸಂದರ್ಭವನ್ನೇ ಬ್ಯಾಂಕ್ಗಳು (Banks) ಅಥವಾ ಹಣಕಾಸು ಸಂಸ್ಥೆಗಳು (Finance Institutions) ಬಂಡವಾಳ ಮಾಡಿಕೊಂಡಿರುತ್ತವೆ. ಉತ್ತಮ ಮರುಪಾವತಿ ಹಿನ್ನೆಲೆಯುಳ್ಳ ಗ್ರಾಹಕರಿಗೆ ಪ್ರಿ ಅಪ್ರೂವ್ಡ್ ಪರ್ಸನಲ್ ಲೋನ್ (Pre-approved Personal Loan) ಅಥವಾ ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಆಫರ್ ನೀಡುತ್ತವೆ. ನಿಮಗೆ ಅಗತ್ಯವೆನಿಸಿದ ಯಾವುದಕ್ಕಾದರೂ ನೀವು ಈ ಸಾಲವನ್ನು ಉಪಯೋಗಿಸಬಹುದು.
ಯಾರಿಗೆ ಸಿಗುತ್ತದೆ ಪೂರ್ವ ಅನುಮೋದಿತ ವೈಯಕ್ತಿಕ ಸಾಲ?
ಬ್ಯಾಂಕ್ ಖಾತೆಯಲ್ಲಿ ಉತ್ತಮ ಹಣಕಾಸು ದಾಖಲೆಗಳನ್ನು ಹೊಂದಿರುವುದು ಮತ್ತು ಈಗಾಗಲೇ ಸಾಲ ಪಡೆದಿದ್ದರೆ ಅದರ ಮರುಪಾವತಿಯ ಹಿನ್ನೆಲೆ ಪೂರ್ವ ಅನುಮೋದಿತ ವೈಯಕ್ತಿಕ ಸಾಲ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಿರ್ದಿಷ್ಟ ಸಮಯದೊಳಗೆ ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವುದೂ ಮುಖ್ಯವಾಗುತ್ತದೆ. ಪೂರ್ವ ಅನುಮೋದಿತ ಸಾಲವನ್ನು ನಿಗದಿಪಡಿಸುವ ಮೊದಲು ಬ್ಯಾಂಕ್ಗಳು ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಬಹುದು. ಹೀಗಾಗಿ ನಿಮ್ಮ ಆದಾಯದ ಮಟ್ಟ ಮತ್ತು ಮರುಪಾವತಿ ಹಿನ್ನೆಲೆ ಪ್ರಮುಖ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: Banking Frauds: ದೂರವಾಣಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಹಾಕಬಹುದು ಕನ್ನ; ತಪ್ಪಿಸಲು ಏನು ಮಾಡಬೇಕು?
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಹೆಚ್ಚಾಗಿ ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಕೊಡುಗೆ ನೀಡಲಾಗುತ್ತದೆ. ಈ ಆಫರ್‌ಗಳಿದ್ದಾಗ ಸಾಲಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿರುವುದಿಲ್ಲ. ಆದರೆ ಮರುಪಾವತಿಯನ್ನು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಬ್ಯಾಂಕ್ ಬಜಾರ್ ಡಾಟ್ ಕಾಂನ ಸಿಇಒ ಅದಿಲ್ ಶೆಟ್ಟಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಪ್ರಯೋಜನಗಳು
ಈ ಸಾಲದಲ್ಲಿ ನೀವು ಅನುಮೋದನೆಗಾಗಿ ಕಾಯಬೇಕಿರುವುದಿಲ್ಲ. ಸಾಲದಾತನಿಗೆ ನಿಮ್ಮ ಕ್ರೆಡಿಟ್ ಪ್ರೊಫೈಲ್ ಮತ್ತು ಕೆವೈಸಿ ದಾಖಲೆಗಳು ಈಗಾಗಲೇ ತಿಳಿದಿರುತ್ತವೆ. ಈ ಸಾಲದಲ್ಲಿ ಸಾಮನ್ಯವಾಗಿ ಇತರ ಸಾಲಗಳಿಗೆ ಹೋಲಿಸಿದರೆ ಆಕರ್ಷಕ ಬಡ್ಡಿ ದರ ನಿಗದಿಪಡಿಸಲಾಗಿರುತ್ತದೆ. ಕೆಲವೊಮ್ಮೆ ಪ್ರೊಸೆಸಿಂಗ್ ಶುಲ್ಕದಿಂದ ವಿನಾಯಿತಿ, ಶೂನ್ಯ ಮರುಪಾವತಿ ಶುಲ್ಕ ಹೀಗೆ ಅನೇಕ ಆಫರ್ಗಳನ್ನೂ ನೀಡಲಾಗುತ್ತದೆ. ಇನ್ನೊಂದು ಮುಖ್ಯ ಪ್ರಯೋಜನವೆಂದರೆ ಸಾಲಕ್ಕೆ ಅರ್ಜಿ ಸಲ್ಲಿಸಲು ಬ್ಯಾಂಕ್ಗೆ ತೆರಳುವ ಅಗತ್ಯವೇ ಇರುವುದಿಲ್ಲ. ಮೊಬೈಲ್ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಬಹುದು.
ಸಾಲದ ಆಫರನ್ನು ನೀವು ಒಪ್ಪಲೇಬೇಕೆ?
ಇಂಥ ಆಫರ್ ಬಗ್ಗೆ ಖಚಿತ ಮಾಹಿತಿ ಇದ್ದಾಗ ಮತ್ತು ಸಾಲದ ಮೊತ್ತವನ್ನು ಯಾವುದಕ್ಕಾಗಿ ಬಳಸಿಕೊಳ್ಳಬೇಕು ಎಂಬ ಸ್ಪಷ್ಟ ಕಲ್ಪನೆ ಇದ್ದಾಗ ಮಾತ್ರ ಸಾಲ ತೆಗೆದುಕೊಳ್ಳುವುದು ಒಳ್ಳೆಯದು. ಸಾಲವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕಿರುತ್ತದೆ ಎಂಬುದು ನೆನಪಿರಲಿ. ನೀವು ನಿರ್ದಿಷ್ಟ ಉದ್ದೇಶಕ್ಕಾಗಿ ಸಾಲ ಪಡೆಯಲು ಯೋಚಿಸುತ್ತಿದ್ದ ಸಂದರ್ಭದಲ್ಲೇನಾದರೂ ಇಂಥ ಆಫರ್ ಬಂದರೆ ಆವಾಗ ಖಂಡಿತ ಪೂರ್ವ ಅನುಮೋದಿತ ವೈಯಕ್ತಿಕ ಸಾಲವನ್ನು ನೀವು ಪಡೆಯಬಹುದು. ಆದರೆ, ಸಾಲ ಪಡೆಯಲು ಒಪ್ಪಿಗೆ ಸೂಚಿಸುವ ಮೊದಲು ಸಾಲದ ಮೊತ್ತ ನೀವು ಉದ್ದೇಶಿಸಿರುವ ಚಟುವಟಿಕೆಗೆ ಸೂಕ್ತವೇ ಎಂಬುದನ್ನು ಪರಿಶೀಲಿಸಿ. ನಿಯಮಗಳು, ಷರತ್ತುಗಳು, ಬಡ್ಡಿ ದರ ಹಾಗೂ ಇತರ ಶುಲ್ಕಗಳ ಬಗ್ಗೆಯೂ ಸರಿಯಾಗಿ ತಿಳಿದುಕೊಂಡ ಬಳಿಕವಷ್ಟೇ ಸಾಲ ಪಡೆಯಲು ಮುಂದುವರಿಯಿರಿ.
ನಿರ್ದಿಷ್ಟ ಅವಧಿಗೆ ಮಾತ್ರ ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಆಫರ್ ನೀಡುತ್ತಾರೆ. ಹೀಗಾಗಿ ನಿರ್ಧಾರ ಕೈಗೊಳ್ಳುವಲ್ಲಿ ತೀರಾ ವಿಳಂಬ ಮಾಡಬಾರದು ಎಂಬುದು ಗಮನದಲ್ಲಿರಲಿ. ಒಂದು ವೇಳೆ ಸಾಲ ಪಡೆಯುವುದೇ ಆಗಿದ್ದಲ್ಲಿ ನಿಮಗೆ ಸಾಧ್ಯವೆನಿಸುವ ಮರುಪಾವತಿ ಅವಧಿಯನ್ನು ಆಯ್ದುಕೊಳ್ಳಿ.
ಇನ್ನಷ್ಟು ಅಂಶಗಳು…
- ಸಾಮಾನ್ಯ ವೈಯಕ್ತಿಕ ಅಥವಾ ಪರ್ಸನಲ್ ಲೋನ್ ಬಡ್ಡಿ ದರಗಳಿಗೆ ಹೋಲಿಸಿದರೆ ಪೂರ್ವ ಅನುಮೋದಿತ ವೈಯಕ್ತಿಕ ಸಾಲದ ಬಡ್ಡಿ ದರಗಳು ಆಕರ್ಷಕವಾಗಿರುತ್ತವೆ.
- ಈ ಆಫರ್ಗಳು ನಿರ್ದಿಷ್ಟ ಅವಧಿಗೆ ಮಾತ್ರ ಲಭ್ಯವಿರುತ್ತವೆ.
- ಆದಾಯ, ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಹಿನ್ನೆಲೆ ಈ ಸಾಲದ ಆಫರ್ಗೆ ನೀವು ಅರ್ಹತೆ ಪಡೆಯಲು ಪ್ರಮುಖ ಮಾನದಂಡಗಳಾಗಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 26 October 22