Whatsapp: ಈ ಬಿಲ್ ಬಂದರೆ ವಾಟ್ಸಾಪ್ ಸರ್ವಿಸ್ ನಿಲ್ಲಿಸಬೇಕಾಗುತ್ತೇನೋ..! ಬ್ರಿಟನ್ ವಿದ್ಯಮಾನಕ್ಕೆ ಮೆಟಾ ಕಂಗಾಲು

UK Online Safety Bill: ಬ್ರಿಟನ್ ದೇಶದ ಸಂಸತ್ತು ಆನ್​ಲೈನ್ ಸೇಫ್ಟಿ ಕಾನೂನಿನ ಕರಡು ಮಸೂದೆಗೆ ಅನುಮೋದನೆ ಕೊಟ್ಟಿದೆ. ಈ ಬೆಳವಣಿಗೆಯಿಂದ ವಾಟ್ಸಾಪ್ ಸೇರಿದಂತೆ ಎಲ್ಲಾ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳು ಆತಂಕಗೊಂಡಿವೆ. ಅಂಥದ್ದೇನಿದೆ ಈ ಬಿಲ್​ನಲ್ಲಿ...? ವಿವರ ಓದಿ...

Whatsapp: ಈ ಬಿಲ್ ಬಂದರೆ ವಾಟ್ಸಾಪ್ ಸರ್ವಿಸ್ ನಿಲ್ಲಿಸಬೇಕಾಗುತ್ತೇನೋ..! ಬ್ರಿಟನ್ ವಿದ್ಯಮಾನಕ್ಕೆ ಮೆಟಾ ಕಂಗಾಲು
ವಾಟ್ಸಾಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2023 | 1:11 PM

ಲಂಡನ್: ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಎನಿಸಿರುವ ವಾಟ್ಸಾಪ್ (Whatsapp Messaging Platform) ಇದೀಗ ಬ್ರಿಟನ್ ದೇಶದಲ್ಲಿ ಆಗುತ್ತಿರುವ ವಿದ್ಯಮಾನಗಳಿಂದ ತಲೆಕೆಡಿಸಿಕೊಂಡಂತಿದೆ. ಅಲ್ಲಿನ ಸಂಸತ್ತಿನಲ್ಲಿ ಆನ್​ಲೈನ್ ಸೇಫ್ಟಿಯ ಕರಡು ಮಸೂದೆಗೆ (Online Safety Draft Bill) ಅನುಮೋದನೆ ಸಿಕ್ಕಿರುವುದು ವಾಟ್ಸಾಪ್​ಗೆ ಚಿಂತೆಗೀಡು ಮಾಡಿದೆ. ಯುಕೆಯಲ್ಲಿ ಈ ಕಾನೂನು ಜಾರಿಗೆ ಬಂದರೆ ವಾಟ್ಸಾಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ಮೆಟಾ ಸಂಸ್ಥೆ (Meta Platforms) ಹೇಳಿದೆ. ಮಾರ್ಚ್ 9ರಂದು ಲಂಡನ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೆಟಾ ಮಾಲಕತ್ವದ ವಾಟ್ಸಾಪ್​ನ ಮುಖ್ಯಸ್ಥ ವಿಲ್ ಕ್ಯಾತ್​ಕಾರ್ಟ್, ಈ ದೇಶದಲ್ಲಿ ಸೇಫ್ಟಿ ಬಿಲ್ ಜಾರಿಗೆ ಬಂದರೆ ವಾಟ್ಸಾಪ್​ನ ಪ್ರೈವಸಿ ಫೀಚರ್​ಗಳು ಅಕ್ರಮ ಎನಿಸುತ್ತವೆ ಎಂದು ವಿವರಿಸಿದ್ದಾರೆ.

ಏನಿದೆ ಬಿಲ್​ನಲ್ಲಿ?

ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದಾಗ ಆನ್​ಲೈನ್ ಸೇಫ್ಟಿ ಮಸೂದೆ ರೂಪಿಸಿದ್ದರು. ಮಕ್ಕಳ ಲೈಂಗಿಕ ದುರ್ಬಳಕೆ, ಭಯೋತ್ಪಾದನೆ, ಆತ್ಮಹತ್ಯೆ ಪ್ರಚೋದನೆ ಇತ್ಯಾದಿ ಅನೈತಿಕ ಮತ್ತು ಕಾನೂನುಬಾಹಿರವೆನಿಸುವ ಕಂಟೆಂಟ್​ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಆಗದಂತೆ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಇವು ಪೋಸ್ಟ್ ಆದರೂ, ಗಮನಕ್ಕೆ ಬಂದ ತತ್​ಕ್ಷಣದಲ್ಲಿ ತೆಗೆದುಹಾಕಬೇಕು ಎಂದು ಈ ಬಿಲ್ ತಾಕೀತುಪಡಿಸುತ್ತದೆ. ಒಂದು ವೇಳೆ ಸರ್ಕಾರದ ಫರ್ಮಾನು ಪಾಲಿಸದಿದ್ದರೆ ಕಂಪನಿ ತನ್ನ ಜಾಗತಿಕ ಆದಾಯದಲ್ಲಿ ಶೇ. 10ರಷ್ಟು ಮೊತ್ತವನ್ನು ದಂಡವಾಗಿ ಕಟ್ಟಬೇಕು ಎಂದು ಹೇಳುತ್ತದೆ ಆ ಕಾನೂನು. ಈಗ ಈ ಮಸೂದೆಗೆ ಮರುಜೀವ ಬಂದಿದ್ದು, ಸಂಸತ್​ನಲ್ಲೂ ಅನುಮೋದನೆ ಪಡೆದಿದೆ. ಈಗ ಕಾನೂನು ಜಾರಿಯಷ್ಟೇ ಬಾಕಿ ಉಳಿದಿದೆ.

ವಾಟ್ಸಾಪ್ ಯಾಕೆ ಹಿಂದೇಟು?

ಮಕ್ಕಳ ಲೈಂಗಿಕ ಶೋಷಣೆಯಂತಹ ಅಪರಾಧ ವಿಡಿಯೋ ಮತ್ತು ಪೋಸ್ಟ್​​ಗಳನ್ನು ಪ್ಲಾಟ್​ಫಾರ್ಮ್​ನಿಂದ ತೆಗೆದುಹಾಕಲು ವಾಟ್ಸಾಪ್ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಅನಿಸಬಹುದು. ಆದರೆ, ವಾಟ್ಸಾಪ್​ನ ಮುಖ್ಯ ಫೀಚರ್​ಗಳಲ್ಲಿ ಅದರ ಪ್ರೈವಸಿ ಅಂಶ ಒಂದು. ಮೇಲಾಗಿ ವಾಟ್ಸಾಪ್ ಒಂದು ಜಾಗತಿಕ ಉತ್ಪನ್ನವಾಗಿದ್ದು ಬ್ರಿಟನ್ ದೇಶಕ್ಕೆ ಮಾತ್ರ ಫೀಚರ್ ಬದಲಿಸಲು ಆಗಲ್ಲ. ಈ ದೇಶದಿಂದ ನಿರ್ಗಮಿಸುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ವಾಟ್ಸಾಪ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿFoxconn: ಮಹಿಳೆಯರಿಗೆ ರಾತ್ರಿಪಾಳಿ, 12ಗಂಟೆ ಶಿಫ್ಟ್; ಆ್ಯಪಲ್, ಫಾಕ್ಸ್​ಕಾನ್ ಬೇಡಿಕೆಗೆ ಮಣಿಯಿತಾ ಕರ್ನಾಟಕ? ಕಾನೂನು ತಿದ್ದಿದ ಸರ್ಕಾರ

ಇತ್ತೀಚೆಗೆ ಇರಾನ್​ನಲ್ಲಿ ನಮ್ಮ ಸೇವೆಯನ್ನು ಬ್ಲಾಕ್ ಮಾಡಲಾಗಿದೆ. ಆದರೆ, ಉದಾರಿ ಪ್ರಜಾಪ್ರಭುತ್ವ ದೇಶದಿಂದ ಈ ರೀತಿ ಆಗುತ್ತದೆ ಎಂದು ನಾವು ಎಣಿಸಿಲ್ಲ. ನಾವು ಬ್ರಿಟನ್​ನಲ್ಲಿ ವಾಪ್ಸಪ್ ಸೇವೆಯನ್ನೇ ನಿಲ್ಲಿಸಬೇಕಾದೀತು ಎಂದು ವಿಲ್ ಕ್ಯಾತ್​ಕಾರ್ಟ್ ಹೇಳಿದ್ದಾರೆ.

ವಾಟ್ಸಾಪ್ ಮಾತ್ರವಲ್ಲ, ಅಂಥದ್ದೇ ರೀತಿಯ ಮತ್ತೊಂದು ಮೆಸೇಜಿಂಗ್ ಕಂಪನಿ ಸಿಗ್ನಲ್ ಫೌಂಡೇಶನ್ ಕೂಡ ಬ್ರಿಟನ್​ನಲ್ಲಿ ಸೇವೆ ನಿಲ್ಲಿಸುವ ಆಲೋಚನೆ ಮಾಡುತ್ತಿದೆ.

ಈ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳು ಎನ್​ಕ್ರಿಪ್ಟೆಡ್ ಮೆಸೇಜಿಂಗ್ ಫೀಚರ್ ಹೊಂದಿವೆ. ಅಂದರೆ, ಒಬ್ಬರು ಇನ್ನೊಬ್ಬರಿಗೆ ಕಳುಹಿಸಿದ ಸಂದೇಶವನ್ನು ಇತರರು ಕದ್ದುನೋಡಲು ಸಾಧ್ಯವಾಗುವುದಿಲ್ಲ. ಇದು ಗ್ರಾಹಕರ ಖಾಸಗಿತನ ರಕ್ಷಣೆಗೆಂದು ಮಾಡಲಾದ ಫೀಚರ್. ವಾಟ್ಸಾಪ್ ಮುಖ್ಯಸ್ಥರು ಹೇಳುವ ಪ್ರಕಾರ, ಈ ಪ್ರೇವಸಿ ಫೀಚರ್ ಇರುವವರೆಗೂ ಜನರ ಸಂದೇಶಗಳ ಮೇಲೆ ಕಂಪನಿಯಿಂದಲೇ ಕಣ್ಣಿಡಲು ಸಾಧ್ಯವಿಲ್ಲವಂತೆ. ಈ ಪ್ರೈವಸಿ ಫೀಚರ್ ಅನ್ನು ತೆಗೆದುಹಾಕಿದರೆ ವ್ಯಕ್ತಿಗತ ಗೌಪ್ಯತೆಗೆ ಧಕ್ಕೆ ತಂದಂತಾಗುತ್ತದೆ ಎಂಬುದು ಇವರ ವಾದ.

ಬ್ರಿಟನ್ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳು ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಮಟ್ಟಗಳಲ್ಲಿ ನಿರ್ಬಂಧಗಳನ್ನು ಹಾಕುತ್ತವೆ. ಸರ್ಕಾರದ ವಿರುದ್ಧ ಬರುವ ಪೋಸ್ಟ್​​ಗಳು, ಲೈಂಗಿಕ ಶೋಷಣೆಯ ಪೋಸ್ಟ್​ಗಳು, ದೇಶವಿರೋಧಿ ಪೋಸ್ಟ್​ಗಳನ್ನು ತೆಗೆದುಹಾಕುವಂತೆ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ವಿವಿಧ ಸರ್ಕಾರಗಳು ಪಟ್ಟಿ ಕೊಡುತ್ತಿರುತ್ತವೆ. ಆದರೆ, ಈ ಬಗ್ಗೆ ಕಠಿಣ ಕಾನೂನು ರೂಪಿಸುತ್ತಿರುವುದು ಬ್ರಿಟನ್ ಮೊದಲ ದೇಶ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Published On - 1:11 pm, Fri, 10 March 23