
ನವದೆಹಲಿ, ಏಪ್ರಿಲ್ 15: ತಾಳಿದವನು ಬಾಳಿಯಾನು ಎನ್ನುವ ನಾಣ್ನುಡಿ ಕೇಳಿರಬಹುದು. ಹೆಚ್ಚಿನ ಸಂದರ್ಭಗಳಿಗೆ ಈ ನುಡಿ ಅನ್ವಯ ಆಗುತ್ತದೆ. ವ್ಯಾಪಾರಿಗಳಿಗೆ ಇದು ಒಂದು ರೀತಿಯಲ್ಲಿ ವೇದವಾಕ್ಯ. ವ್ಯಾಪಾರದಲ್ಲಿ ತಾಳ್ಮೆ ಬಹಳ ಮುಖ್ಯ. ದೆಹಲಿಯಲ್ಲಿ ಶಿಶುಗಳ ಉಡುಪುಗಳನ್ನು (baby clothes) ಮಾರುವ ಕಂಪನಿಯ ಮುಖ್ಯಸ್ಥರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅನುಭವದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. 50 ಕೋಟಿ ರೂ ಮೌಲ್ಯದ ಬಂಗಲೆಯಲ್ಲಿ ವಾಸಿಸುವ ಮಹಿಳೆಯೊಬ್ಬಳು, ಆಕೆಗೆ ಜುಜುಬಿ ಎನಿಸುವ 5,000 ರೂ ಹಣಕ್ಕಾಗಿ ಹೇಗೆ ವಂಚನೆಗೆ ಇಳಿದಿದ್ದಳು ಎಂಬುದನ್ನು ವರುಣ್ ಘಾಯ್ (Varun Ghai) ವಿವರಿಸಿದ್ದಾರೆ. ಹಾಗೆಯೇ, ತಾನು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ ಬಳಿಕ ಆ ಮಹಿಳೆಯನ್ನೇ ತನ್ನ ರೆಗ್ಯುಲರ್ ಕಸ್ಟಮರ್ ಆಗಿ ಮಾಡಿಕೊಂಡಿದ್ದನ್ನೂ ಅವರು ತಿಳಿಸಿದ್ದಾರೆ.
ವರುಣ್ ಘಾಯ್ ಅವರು ದೆಹಲಿಯಲ್ಲಿ ‘ಮಮಾ ಅಂಡ್ ಪೀಚಸ್’ ಎನ್ನುವ ಕ್ಲೋತಿಂಗ್ ಸೇಲ್ ಬ್ಯುಸಿನೆಸ್ ಹೊಂದಿದ್ದಾರೆ. ಆನ್ಲೈನ್ನಲ್ಲಿ ಮಹಿಳೆಯು 5,000 ರೂ ಮೌಲ್ಯದ ವಸ್ತುಗಳಿಗೆ ಆರ್ಡರ್ ಪ್ಲೇಸ್ ಮಾಡಿದ್ದಾಳೆ. ಬಳಿಕ ಹಣ ಪಾವತಿಯಾಗಿದೆ ಎನ್ನುವ ರೀತಿಯಲ್ಲಿ ಸ್ಕ್ರೀನ್ಶಾಟ್ ಎಡಿಟ್ ಮಾಡಿ ಕಳುಹಿಸಿದ್ದಾಳೆ. ಅದು ವರುಣ್ ಘಾಯ್ ಅವರ ಗಮನಕ್ಕೆ ಬರುತ್ತದೆ. ಆಕೆಯನ್ನು ಎಡಿಟೆಡ್ ಸ್ಕ್ರೀನ್ಶಾಟ್ ಬಗ್ಗೆ ವಿಚಾರಿಸಿದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನೂ ಮುಂದುವರಿದು, ಆಕೆ ತನಗೆ ಆರ್ಡರ್ ಬರಲೇ ಇಲ್ಲ ಎಂದು ಹೇಳಿ, ಕಂಪನಿಯನ್ನು ಕಳ್ಳರ ಗುಂಪು ಎಂದು ಜರೆದಳಂತೆ.
ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ
ವರುಣ್ ಘಾಯ್ ಈ ಪ್ರಸಂಗವನ್ನು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. 50 ಕೋಟಿ ರೂ ಮೌಲ್ಯದ ಬಂಗಲೆಯಲ್ಲಿ ವಾಸಿಸುವ ಆ ಮಹಿಳೆ ಈ ರೀತಿ 5,000 ರೂಗೆ ವಂಚನೆ ಮಾಡುವುದು ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ, ವರುಣ್ ಘಾಯ್ ಆ ಸಂದರ್ಭವನ್ನು ನಿರ್ವಹಿಸಿದ ರೀತಿ ಗಮನಾರ್ಹ ಎನಿಸುತ್ತದೆ. ತಾನು ಖುದ್ದಾಗಿ ಮನೆಗೆ ಬಂದು ಕ್ಷಮೆ ಕೋರುತ್ತೇನೆ ಎಂದು ಆ ಮಹಿಳೆಗೆ ಹೇಳಿದ್ದಾರೆ. ಇದರಿಂದ ಆ ಮಹಿಳೆಗೆ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪ ಆಗಬಹುದು ಎಂಬುದು ಘಾಯ್ ಅವರಿಗಿದ್ದ ತಂತ್ರ.
ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
ಘಾಯ್ ಅವರ ಈ ತಂತ್ರ ವರ್ಕೌಟ್ ಆಯಿತು. ಅವರು ಕರೆ ಮಾಡಿದ 10 ನಿಮಿಷದಲ್ಲಿ ಆ ಮಹಿಳೆ, ತನಗೆ ಪ್ಯಾಕೇಜ್ ಸಿಕ್ಕಿದೆ ಎಂದು ಹೇಳಿ ಪೇಮೆಂಟ್ ಮಾಡಿದ್ದಾಳೆ. ಈ ಘಟನೆ ಬಳಿಕ ಈ ಮಹಿಳೆ ಮಮಾ ಅಂಡ್ ಪೀಚಸ್ನ ರೆಗ್ಯುಲರ್ ಕಸ್ಟಮರ್ ಆಗಿದ್ದಾರಂತೆ.
ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ವರುಣ್ ಘಾಯ್ ನಿರೂಪಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ