ನವದೆಹಲಿ, ಜುಲೈ 26: ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಆಗುವುದು ಬಿಯರ್. ಆದರೆ, ಲಿಕ್ಕರ್ ಮಾರುಕಟ್ಟೆಯಲ್ಲಿ ವಿಸ್ಕಿಯೇ ಕಿಂಗ್. ಐಡಬ್ಲ್ಯುಎಸ್ಆರ್ ಏಜೆನ್ಸಿಯ ಇತ್ತೀಚಿನ ಮಾಹಿತಿ ಪ್ರಕಾರ ಭಾರತದಲ್ಲಿ ಆಲ್ಕೋಹಾಲ್ ಮಾರುಕಟ್ಟೆಯಲ್ಲಿ ವಿಸ್ಕಿ (Whiskey) ಪ್ರಾಬಲ್ಯ ಬಹಳ ಹೆಚ್ಚಾಗಿದೆ. ಒಟ್ಟು ಲಿಕ್ಕರ್ ಸೇಲ್ನಲ್ಲಿ ಶೇ. 66ರಷ್ಟು ವಿಸ್ಕಿಯೇ ಇದೆಯಂತೆ. ಅದರಲ್ಲೂ 750ರೂ ಒಳಗಿನ ವಿಸ್ಕಿ ಬಾಟಲ್ಗಳಂತೂ ಬಹಳ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತವೆ. ಒಟ್ಟಾರೆ ಮದ್ಯ ಮಾರುಕಟ್ಟೆ ಪರಿಗಣಿಸಿದರೆ ಬಿಯರ್ ನಂಬರ್ ಒನ್ ಎನಿಸಿದೆ.
ಇದನ್ನೂ ಓದಿ: Alcohol: ಮದ್ಯ ಸೇವಿಸುವವರ ಕಣ್ಣು ಕೆಂಪಾಗುವುದು ಯಾಕೆ? ಇದರ ಹಿಂದಿನ ಕಾರಣ ಏನು? ಇಲ್ಲಿದೆ ಮಾಹಿತಿ
ವಿಸ್ಕಿ, ಬ್ರಾಂದಿ, ಬಿಯರ್ ಎಲ್ಲವೂ ಮದ್ಯಗಳೇ ಆದರೂ ಬಿಯರ್ ಮತ್ತು ವೈನ್ ಅನ್ನು ಸ್ಪಿರಿಟ್ ಎಂದು ವರ್ಗೀಕರಿಸಲಾಗುವುದಿಲ್ಲ. ಎಲ್ಲವೂ ಕೂಡ ಹಣ್ಣು, ತರಕಾರಿ, ಕಾಳುಗಳ ಮೂಲಕ ತಯಾರು ಮಾಡಲಾಗುತ್ತದಾದರೂ ವಿಧಾನಗಳಲ್ಲಿ ವ್ಯತ್ಯಾಸ ಇರುತ್ತದೆ.
ವಿಸ್ಕಿ, ಬ್ರಾಂಡಿ, ರಮ್, ವೋಡ್ಕಾ , ಜಿನ್ ಇತ್ಯಾದಿಗಳನ್ನು ಸ್ಪಿರಿಟ್ಗಳೆಂದು ಕರೆಯಲಾಗುತ್ತದೆ. ಹಣ್ಣ, ಕಾಲು, ತರಕಾರಿಗಳನ್ನು ಡಿಸ್ಟಿಲ್ ಮಾಡಿ, ಅಥವಾ ಭಟ್ಟಿ ಇಳಿಸಿ ತಯಾರಿಸಲಾಗುತ್ತದೆ. ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಅಧಿಕವಾಗಿರುತ್ತದೆ.
ಇನ್ನು, ಬಿಯರ್ ಮತ್ತು ವೈನ್ ಅನ್ನು ಫೆರ್ಮೆಂಟೇಶನ್ ಪ್ರೋಸಸ್ ಮೂಲಕ ತಯಾರಿಸಲಾಗುತ್ತದೆ.
ಮದ್ಯ ಮಾರುಕಟ್ಟೆಯಲ್ಲಿ ಭಾರತ ವಿಶ್ವದಲ್ಲೇ ಐದನೇ ಅತಿದೊಡ್ಡದು. ಇಲ್ಲಿಯದ್ದು 53 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಿದೆ. ಇಂಪೋರ್ಟೆಡ್ ಆಲ್ಕೋಹಾಲ್ ಲಭ್ಯ ಇದೆಯಾದರೂ ಭಾರತೀಯ ಸಂಸ್ಥೆಗಳು ತಯಾರಿಸಿದ ಮದ್ಯಗಳೇ ಅತಿಹೆಚ್ಚು ಸೇಲ್ ಆಗುವುದು. ಸ್ಪಿರಿಟ್ಗಳ ಪೈಕಿ ವಿಸ್ಕಿ ಅತಿ ಹೆಚ್ಚು ಮಾರಾಟವಾಗುತ್ತದೆ. ಇದರಲ್ಲಿ ಭಾರತೀಯ ವಿಸ್ಕಿಯೇ ಹೆಚ್ಚು. ಭಾರತದ 10 ವಿಸ್ಕಿ ಬ್ರಾಂಡ್ಗಳೇ ಶೇ. 85ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿವೆ. ಅದರಲ್ಲೂ ಕಡಿಮೆ ಬೆಲೆಯ ವಿಸ್ಕಿಗೆ ಭಾರತದಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ.
ಆಮದಿತ ವಿಸ್ಕಿ ಇದೆಯಾದರೂ ಅದರ ಪ್ರಮಾಣ ಶೇ. 3.3 ಮಾತ್ರವೇ. ಈ ಸ್ಕಾಚ್ ವಿಸ್ಕಿಯ ಮೇಲೆ ಕೇಂದ್ರ ಸರ್ಕಾರ ಶೇ. 150ರಷ್ಟು ಆಮದು ಸುಂಕ ವಿಧಿಸಿದೆ. ಇದರಿಂದ ಇಂಪೋರ್ಟೆಡ್ ವಿಸ್ಕಿಯ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇಲ್ಲ.
ಇದನ್ನೂ ಓದಿ: Health Tips: ಆಲ್ಕೋಹಾಲ್ ಸೇವನೆಯು ದೇಹದ ದೀರ್ಘಕಾಲ ನೋವಿಗೆ ಕಾರಣವಾಗುತ್ತದೆ: ಅಧ್ಯಯನ
ಸ್ಕಾಚ್ ವಿಸ್ಕಿ ಜಗತ್ತಿನೆಲ್ಲೆಡೆ ಭಾರೀ ಬೇಡಿಕೆಯಲ್ಲಿರುವ ವಿಸ್ಕಿಯ ವಿಧ. ಯುಕೆ ಭಾಗವಾಗಿರುವ ಸ್ಕಾಟ್ಲೆಂಡ್ನ ಕೆಲ ಪ್ರದೇಶಗಳಲ್ಲಿ ಈ ವಿಸ್ಕಿ ತಯಾರಾಗುತ್ತದೆ. ಉತ್ಕೃಷ್ಟ ಗುಣಮಟ್ಟಕ್ಕೆ ಇದು ಹೆಸರುವಾಸಿ. ಕಡಿಮೆ ಬೆಲೆಗೆ ಇದು ಭಾರತದ ಮಾರುಕಟ್ಟೆಗೆ ಸಿಕ್ಕರೆ ಇಲ್ಲಿ ಸಂಚಲನವನ್ನೇ ಸೃಷ್ಟಿಸಬಹುದು. ಈ ಕಾರಣಕ್ಕೆ ಭಾರತ ಇದಕ್ಕೆ ಶೇ. 150ರಷ್ಟು ಆಮದು ಸುಂಕ ಹಾಕಿದೆ.
ಸ್ಕಾಚ್ ವಿಸ್ಕಿಯ ತಯಾರಕರಲ್ಲಿ ಒಂದಾದ ಚಿವಾಸ್ ಬ್ರದರ್ಸ್, ಈ ಆಮದು ಸುಂಕವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದೆ. ಭಾರತದ ವಿಸ್ಕಿಗಳಿಗೆ ಬ್ರಿಟನ್ ಯಾವ ಆಮದು ಸುಂಕ ವಿಧಿಸುವುದಿಲ್ಲ. ಆದರೆ, ಸ್ಕಾಚ್ಗೆ ಭಾರತದಲ್ಲಿ ಅಧಿಕ ಸುಂಕ ಇದೆ. ಎರಡಕ್ಕೂ ಸಮಾನ ವೇದಿಕೆ ಒದಗಿಸಬೇಕು ಎಂದು ಚಿವಾಸ್ ಬ್ರದರ್ಸ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
(ಗಮನಿಸಿ: ಯಾವುದೇ ಮದ್ಯ ಸೇವನೆಯು ಆರೋಗ್ಯಕ್ಕೆ ಹಾನಿಕರ.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ