ಬೆಂಗಳೂರು: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB- Silicon Valley Bank) ಪತನಗೊಂಡ ಬೆನ್ನಲ್ಲೇ ಭಾರತದಲ್ಲಿ ಯೆಸ್ ಬ್ಯಾಂಕ್ (Yes Bank) ಸದ್ದು ಮಾಡುತ್ತಿದೆ. ಷೇರುಪೇಟೆಯಲ್ಲಿ ಯೆಸ್ ಬ್ಯಾಂಕ್ನ ಷೇರುಗಳು ಮನಬಂದ ಬೆಲೆಗೆ ಬಿಕರಿಯಾಗುತ್ತಿವೆ. 3 ವರ್ಷದ ಲಾಕ್–ಇನ್ ಅವಧಿ (Lock-in Period) ಮುಗಿಯುತ್ತಿದ್ದಂತೆಯೇ ಹೂಡಿಕೆದಾರರು ಪಂಜರದಿಂದ ಹಕ್ಕಿ ಬಿಡುಗಡೆ ಆದ ರೀತಿಯಲ್ಲಿ ವರ್ತಿಸುತ್ತಿರುವಂತೆ ತೋರುತ್ತಿದೆ. ಎನ್ಎಸ್ಇ ಷೇರುಪೇಟೆಯಲ್ಲಿ ಯೆಸ್ ಬ್ಯಾಂಕ್ನ 46 ಕೋಟಿ ಷೇರುಗಳ ವಹಿವಾಟುಗಳಾಗಿವೆ. ಕಳೆದ 6 ತಿಂಗಳಲ್ಲಿ ಸರಾಸರಿ ವಹಿವಾಟು ಆದ ಷೇರುಗಳ ಸಂಖ್ಯೆ 18.7 ಕೋಟಿ. ಅಂದರೆ ನಿನ್ನೆ ಒಂದೇ ದಿನದಲ್ಲಿ ಯೆಸ್ ಬ್ಯಾಂಕ್ ಷೇರು ಮೂರು ಪಟ್ಟು ಹೆಚ್ಚು ವಹಿವಾಟು ಕಂಡಿದೆ. ಸೋಮವಾರ ಒಂದು ಹಂತದಲ್ಲಿ ಯೆಸ್ ಬ್ಯಾಂಕ್ ಷೇರು 14.40 ರುಪಾಯಿಗೆ ಕುಸಿದಿತ್ತು. ಇದು ಕಳೆದ 6 ತಿಂಗಳಲ್ಲೇ ಅತ್ಯಂತ ಕನಿಷ್ಠ ಬೆಲೆ ಎನಿಸಿದೆ. ಇಂದು ಮಂಗಳವಾರ ಅದರ ಷೇರಿಗೆ ತುಸು ಜೀವ ಬಂದಿದ್ದು, 15.70 ರುಪಾಯಿಗೆ ವಹಿವಾಟು ಕಾಣುತ್ತಿದೆ.
ಯಾಕೆ ಈ ನೂಕುನುಗ್ಗುಲು?
ಯೆಸ್ ಬ್ಯಾಂಕ್ ಷೇರು ಕುಸಿತ ಕಾಣಲು ಹಲವು ಕಾರಣಗಳಿವೆ. ಯೆಸ್ ಬ್ಯಾಂಕ್ನಲ್ಲಿ ಕೆಟ್ಟ ಸಾಲ ಬಹಳ ಹೆಚ್ಚಿದ್ದು, ಅದರ ಕಾರ್ಯನಿರ್ವಹಣೆಯೇ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ಇರುವುದು ಆರ್ಬಿಐನ ಗಮನಕ್ಕೆ ಬಂದಿತ್ತು. ಯೆಸ್ ಬ್ಯಾಂಕ್ ಯಾವಾಗ ಬೇಕಾದರೂ ಕುಸಿದುಬೀಳುವ ಹಂತದಲ್ಲಿತ್ತು. ಸಾಮಾನ್ಯ ಗ್ರಾಹಕರ ಠೇವಣಿಗಳನ್ನು ಉಳಿಸುವ ದೃಷ್ಟಿಯಿಂದ ಆರ್ಬಿಐ ಯೆಸ್ ಬ್ಯಾಂಕ್ಗೆ ಪುನಶ್ಚೇತನ ಕೊಡಲು ಮರುರಚನೆ ಯೋಜನೆ ಹಾಕಿತು. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಇತರ 9 ಬ್ಯಾಂಕುಗಳು ಯೆಸ್ ಬ್ಯಾಂಕ್ಗೆ ಬಂಡವಾಳ ಹಾಕಿ ಅದರ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಬೇಕೆಂದು ನಿರ್ಧರಿಸಲಾಯಿತು. ಈ 9 ಬ್ಯಾಂಕುಗಳ ಕನ್ಸಾರ್ಟಿಯಂ ಯೆಸ್ ಬ್ಯಾಂಕ್ನಲ್ಲಿ ಶೇ. 49ರಷ್ಟು ಷೇರುಗಳನ್ನು ಹೊಂದಿರಬೇಕು. ಕನ್ಸಾರ್ಟಿಯಂ ಮುಖಂಡ ಎಸ್ಬಿಐ ಈ ಯೆಸ್ ಬ್ಯಾಂಕಲ್ಲಿ ಕನಿಷ್ಠ 26ರಷ್ಟಾದರೂ ಷೇರು ಹೊಂದಿರಬೇಕು ಎಂದು ಅಪ್ಪಣೆ ಮಾಡಲಾಯಿತು.
10 ರುಪಾಯಿಯಂತೆ ಯೆಸ್ ಬ್ಯಾಂಕ್ನ ಷೇರುಗಳು ಮಾರಾಟವಾದವು. ಇದು ಆಗಿದ್ದು 2020ರಲ್ಲಿ. 3 ವರ್ಷಗಳ ಲಾಕ್–ಇನ್ ಪೀರಿಯಡ್ ಎಂದು ಘೋಷಿಸಲಾಯಿತು. ಅಂದರೆ ಯೆಸ್ ಬ್ಯಾಂಕ್ನ ಯಾವುದೇ ಷೇರುದಾರ 3 ವರ್ಷದವರೆಗೆ ಷೇರುಗಳನ್ನು ಸೆಕೆಂಡರಿ ಮಾರುಕಟ್ಟೆಯಲ್ಲಿ (ಷೇರುಪೇಟೆ) ಮಾರಾಟ ಮಾಡುವಂತಿಲ್ಲ. ಈಗ ಮಾರ್ಚ್ 13ಕ್ಕೆ ಲಾಕ್–ಇನ್ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ, ಯೆಸ್ ಬ್ಯಾಂಕ್ ಷೇರು ಮಾರಾಟಕ್ಕೆ ನೂಕು ನುಗ್ಗುಲು ಆಗುತ್ತಿದೆ.
ಇದನ್ನೂ ಓದಿ: Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್
ಯೆಸ್ ಬ್ಯಾಂಕ್ ಷೇರುದಾರರ ವಿವರ:
ಹೂಡಿಕೆದಾರರ ಮುಂದಿನ ದಾರಿ?
ಈಗ ಎಸ್ಬಿಐ ಬಳಿ ಅಪಾರ ಪ್ರಮಾಣದಲ್ಲಿ ಯೆಸ್ ಬ್ಯಾಂಕ್ ಷೇರುಗಳಿವೆ. ಪ್ರತೀ ಷೇರಿಗೆ 10 ರೂನಂತೆ ಖರೀದಿಸಿರುವ ಎಸ್ಬಿಐ ಈಗ ಅದನ್ನು ಮಾರಿದರೂ ಬಹಳ ಲಾಭ ಮಾಡಿಕೊಳ್ಳಬಹುದು. ಆದರೆ, ಎಸ್ಬಿಐ ಮೊದಲಾದ ಇತರ ಹಣಕಾಸು ಸಂಸ್ಥೆಗಳು ಒಮ್ಮೆಗೇ ಷೇರುಗಳನ್ನು ಬಿಕರಿ ಮಾಡುವ ಬದಲು ಹಂತ ಹಂತವಾಗಿ ಮಾಡಲು ನಿರ್ಧರಿಸಿವೆ ಎಂಬಂತಹ ಸುದ್ದಿ ಇದೆ. ಯೆಸ್ ಬ್ಯಾಂಕ್ ಮೇಲೆ ಜನರ ವಿಶ್ವಾಸ ಮರಳಿ ಬಂದು ಅದರ ಷೇರು ಬೆಲೆ ಇನ್ನಷ್ಟು ಉತ್ತಮಗೊಳ್ಳುತ್ತಿದೆ ಎನ್ನುವಂತಹ ಸಂದರ್ಭದಲ್ಲಿ ಇವುಗಳ ಮಾರಾಟಕ್ಕೆ ಎಸ್ಬಿಐ ಮುಂದಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Bank Sale: ಕೇವಲ 100 ರುಪಾಯಿಗೆ ಎಚ್ಎಸ್ಬಿಸಿಗೆ ಮಾರಾಟವಾಯ್ತು ಈ ಬ್ಯಾಂಕ್
ಆದರೆ, ಸಾರ್ವಜನಿಕ ಷೇರುದಾರರು ಷೇರುಗಳ ಬಿಕರಿಗೆ ಆಸಕ್ತಿ ತೋರುತ್ತಿದ್ದಾರೆ. ಯೆಸ್ ಬ್ಯಾಂಕ್ ಸದ್ಯ ಅನಾರೋಗ್ಯ ಸ್ಥಿತಿಯಿಂದ ಹೊರಗೆ ಬಂದಿದೆ. ಅದರ ಎನ್ಪಿಎ ಪ್ರಮಾಣ ಶೇ. 2 ಮಾತ್ರವೇ ಇರುವುದು. 2020ರಲ್ಲಿ ಇದ್ದ ಶೇ. 16.8ರಷ್ಟು ಕೆಟ್ಟ ಸಾಲ ಪ್ರಮಾಣಕ್ಕೆ ಹೋಲಿಸಿದರೆ ಈಗ ಯೆಸ್ ಬ್ಯಾಂಕ್ ಎಷ್ಟೋ ಉತ್ತಮ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಬಹಳ ಮಂದಿ ವಿಶ್ಲೇಷಕರು ಯೆಸ್ ಬ್ಯಾಂಕ್ನ ಷೇರುಗಳನ್ನು ಕೊಳ್ಳಲು ಇದು ಸಕಾಲ ಎಂದು ಶಿಫಾರಸು ಮಾಡುತ್ತಿದ್ದಾರೆ.
ಇನ್ನೂ ಕೆಲ ತಜ್ಞರು, ಈಗ ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡುವ ಸಮಯವಲ್ಲ. ಬ್ಯಾಂಕಿಂಗ್ ಮಾರುಕಟ್ಟೆ ಡೋಲಾಯಮಾನ ಸ್ಥಿತಿಯಲ್ಲಿದೆ. ಇದು ಸ್ಥಿರತೆಗೆ ಬಂದ ಬಳಿಕ ಯೆಸ್ ಬ್ಯಾಂಕ್ ಷೇರು ಖರೀದಿಸುವುದು ಉತ್ತಮ ಐಡಿಯಾ ಎಂದು ಸಲಹೆ ಕೊಡುತ್ತಿದ್ದಾರೆ.