AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Sale: ಕೇವಲ 100 ರುಪಾಯಿಗೆ ಎಚ್​ಎಸ್​ಬಿಸಿಗೆ ಮಾರಾಟವಾಯ್ತು ಈ ಬ್ಯಾಂಕ್

HSBC Acquires SVB UK Fore 1 Pound: ಸಿಲಿಕಾನ್ ವ್ಯಾಲಿ ಬ್ಯಾಂಕ್​ನ ಯುಕೆ ವಿಭಾಗದ ಬ್ಯಾಂಕು ಕೇವಲ 1 ಪೌಂಡ್ ಹಣಕ್ಕೆ ಎಚ್​ಎಸ್​ಬಿಸಿಗೆ ಮಾರಾಟವಾಗಿದೆ. ಆದರೆ, ಎಸ್​ವಿಬಿಯ ವ್ಯವಹಾರ ಮೊದಲಿನ ರೀತಿಯಲ್ಲೇ ಮುಂದುವರಿಯುತ್ತದೆ ಎಂದು ಬ್ರಿಟನ್​ನ ಸೆಂಟ್ರಲ್ ಬ್ಯಾಂಕ್ ಸ್ಪಷ್ಟಪಡಿಸಿದೆ.

Bank Sale: ಕೇವಲ 100 ರುಪಾಯಿಗೆ ಎಚ್​ಎಸ್​ಬಿಸಿಗೆ ಮಾರಾಟವಾಯ್ತು ಈ ಬ್ಯಾಂಕ್
ಎಚ್​ಎಸ್​ಬಿಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 13, 2023 | 5:09 PM

Share

ಲಂಡನ್: ಅಮೆರಿಕದಲ್ಲಿ ದಿವಾಳಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್​ನ ಬ್ರಿಟನ್ ವಿಭಾಗವನ್ನು ಎಚ್​ಎಸ್​ಬಿಸಿ (HSBC Acquires SVB UK) ಖರೀದಿ ಮಾಡಿದೆ. ಅದೂ ಕೇವಲ 1 ಬ್ರಿಟಿಷ್ ಪೌಂಡ್ ಮೊತ್ತಕ್ಕೆ ಈ ಸೇಲ್ ನಡೆದಿದೆ. ಅಂದರೆ 100 ರುಪಾಯಿಗೆ ಎಸ್​ವಿಬಿ ಯುಕೆಯನ್ನು ಎಚ್​ಎಸ್​ಬಿಸಿ ಖರೀದಿಸಿದೆ. ಯುಕೆ ವಿಭಾಗದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಬ್ರಿಟನ್​ನಲ್ಲಿ ದಿವಾಳಿ ಪ್ರಕ್ರಿಯೆಗೆ ಒಳಪಡಿಸುವಂತೆ ಕೋರಿ 3 ದಿನಗಳ ಹಿಂದೆ, ಮಾರ್ಚ್ 10ರಂದು ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಈ ಬ್ಯಾಂಕನ್ನು ಮಾರಾಟ ಮಾಡಲಾಗಿದೆ. ಬ್ರಿಟನ್​ನ ಸೆಂಟ್ರಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದು ವಿವಿಧ ಪ್ರಾಧಿಕಾರಗಳೊಂದಿಗೆ ಸಮಾಲೋಚಿಸಿ ಎಸ್​ವಿಬಿ ಯುಕೆ ಬ್ಯಾಂಕನ್ನು ಮಾರಲು ನಿರ್ಧರಿಸಲಾಯಿತು ಎಂದು ಹೇಳಿದೆ.

ಪ್ರುಡೆನ್ಷಿಯಲ್ ರೆಗ್ಯುಲೇಶನ್ ಅಥಾರಿಟಿ, ಎಚ್​ಎಂ ಟ್ರೆಷರಿ ಮತ್ತು ಫೈನಾನ್ಷಿಯಲ್ ಕಂಡಕ್ಟ್ ಅಥಾರಿಟಿ (ಎಫ್​ಸಿಎ) ಜೊತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಸಮಾಲೋಚನೆ ನಡೆಸಿತು. ಆ ಬಳಿಕ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್​ನ ಅಂಗಸಂಸ್ಥೆ ಎಸ್​ವಿಬಿ ಯುಕೆ ಲಿ (ಎಸ್​ವಿಬಿಯುಕೆ) ಅನ್ನು ಎಚ್​ಎಸ್​ಬಿಸಿ ಯುಕೆ ಬ್ಯಾಂಕ್​ಗೆ ಮಾರುವ ನಿರ್ಧಾರಕ್ಕೆ ಬರಲಾಯಿತು. ಎಸ್​ವಿಬಿ ಯುಕೆ ಅನ್ನು ಸಂಕಷ್ಟದಿಂದ ಪಾರು ಮಾಡಲು ಮತ್ತು ಅದರ ಬ್ಯಾಂಕಿಂಗ್ ಸೇವೆಗಳು ಮುಂದುವರಿಯುವಂತೆ ಮಾಡಲು ಮತ್ತು ಬ್ರಿಟನ್​ನ ಹಣಕಾಸು ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಅಫ್ ಇಂಗ್ಲೆಂಡ್ ಹೇಳಿಕೆ ನೀಡಿದೆ.

ಎಸ್​ವಿಬಿ ಯುಕೆ ಮಾರಾಟವಾದರೂ ಅದರ ಬ್ಯಾಂಕಿಂಗ್ ನಿರ್ವಹಣೆ ಎಲ್ಲವೂ ಅದೇ ಬ್ಯಾಂಕ್ ಕೈಯಲ್ಲಿ ಇರುತ್ತದೆ. ಅದರ ಎಲ್ಲಾ ಸೇವೆಗಳು ಯಥಾ ರೀತಿಯಲ್ಲಿ ಮುಂದುವರಿಯಲಿವೆ. ಎಸ್​ವಿಬಿ ಯುಕೆಯ ಗ್ರಾಹಕರ ಖಾತೆ ಇತ್ಯಾದಿ ಯಾವುದೂ ಕೂಡ ಬದಲಾಗುವುದಿಲ್ಲ. ಗ್ರಾಹಕರು ಎಸ್​ವಿಬಿ ಯುಕೆ ಜೊತೆ ಈ ಮೊದಲಿಂದಲೂ ಹೊಂದಿರುವ ರೀತಿಯಲ್ಲೇ ವ್ಯವಹಾರ ಮುಂದುವರಿಸಬಹುದು. ಸಾಲದ ಕಂತು ಕಟ್ಟುವ ಪ್ರಕ್ರಿಯೆ ಇತ್ಯಾದಿ ಎಲ್ಲವೂ ಮೊದಲಿನಂತೆಯೇ ನಡೆಯಲಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿBank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್

ಲಾಭದಲ್ಲಿ ಎಸ್​ವಿಬಿ ಯುಕೆ

ಬ್ರಿಟನ್ ವಿಭಾಗದ ಸಿಲಿಕಾನ್ ವ್ಯಾಲಿ ಬ್ಯಾಂಕ್ ತಕ್ಕಮಟ್ಟಿಗೆ ಲಾಭದಲ್ಲಿರುವ ಸಂಸ್ಥೆ. 2022ರ ವರ್ಷದ ತನ್ನ ವರದಿಯಲ್ಲಿ 88 ಮಿಲಿಯನ್ ಸ್ಟರ್ಲಿಂಗ್ ಪೌಂಡ್​ನಷ್ಟು (ಸುಮಾರು 872 ಕೋಟಿ ರುಪಾಯಿ) ಲಾಭ ತೋರಿಸಿತ್ತು. ಮಾರ್ಚ್ 10ರವರೆಗೆ ಈ ಬ್ಯಾಂಕ್ ಬಳಿ 5.5 ಬಿಲಿಯನ್ ಪೌಂಡ್ (54,000 ಕೋಟಿ ರುಪಾಯಿ) ಮೊತ್ತದಷ್ಟು ಸಾಲ ಇದೆ. 6.7 ಬಿಲಿಯನ್ ಪೌಂಡ್ (ಸುಮಾರು 66,000 ಕೋಟಿ ರುಪಾಯಿ) ಮೊತ್ತದಷ್ಟು ಗ್ರಾಹಕರ ಠೇವಣಿಗಳಿವೆ. ಅದರ ಭೌತಿಕವಲ್ಲದ ಆಸ್ತಿಯ ಮೊತ್ತವೇ 1.40 ಬಿಲಿಯನ್ ಪೌಂಡ್ (ಸುಮಾರು 13.9 ಸಾವಿರ ಕೋಟಿ ರುಪಾಯಿ) ನಷ್ಟು ಇದೆ.

ಈ ಹಿನ್ನೆಲೆಯಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿದ್ದು ಎಚ್​ಎಸ್​ಬಿಸಿಗೆ ವರದಾನವೆಂಬಂತಾಗಬಹುದು. ಆದರೆ, ಎಸ್​ವಿಬಿ ಯುಕೆಯ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ತಮ್ಮ ಹಣವನ್ನು ಹಿಂಪಡೆಯಲು ಮುಂದಾದರೆ ಎಚ್​ಎಸ್​ಬಿಸಿ ಏನು ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಎಚ್​ಎಸ್​ಬಿಸಿಯಲ್ಲಿರುವ ನಿಧಿಯನ್ನು ಇದಕ್ಕಾಗಿ ಉಪಯೋಗಿಸಬಹುದು. ಆದರೆ, ಅಮೆರಿಕನ್ ಬ್ಯಾಂಕುಗಳಿಗೆ ಅಂಟುತ್ತಿರುವ ದಿವಾಳಿ ಜಾಢ್ಯ ಎಚ್​ಎಸ್​ಬಿಸಿಗೂ ಸೋಂಕಿಬಿಟ್ಟರೆ ಕಷ್ಟ. ಒಂದು ವೇಳೆ ಯಾವುದೇ ಪ್ರಮಾದವಾಗದೇ ಈ ಬಿಕ್ಕಟ್ಟು ಶಮನವಾದರೆ ಎಸ್​ವಿಬಿ ಯುಕೆಯ ಖರೀದಿಯಿಂದ ಎಚ್​ಎಸ್​ಬಿಸಿಗೆ ಹೊಸ ಶಕ್ತಿಯಂತೂ ಸಿಕ್ಕಂತಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Mon, 13 March 23