ನವದೆಹಲಿ, ಅಕ್ಟೋಬರ್ 31: ಭಾರತ ಒಂದು ಕಾಲಘಟ್ಟದಲ್ಲಿ ಹೆಚ್ಚು ಜಾಗತೀಕರಣಗೊಂಡಿತ್ತು. ರೋಮನ್ ಸಾಮ್ರಾಜ್ಯಕ್ಕೆ ಚೀನಾಗಿಂತಲೂ ದೊಡ್ಡ ಟ್ರೇಡ್ ಪಾರ್ಟ್ನರ್ ಆಗಿದ್ದು ಭಾರತವೇ. ಆದರೆ ಕಾಲಾನಂತರದಲ್ಲಿ ಇತಿಹಾಸವನ್ನು ಚೀನಾ ಭಾರತಕ್ಕಿಂತ ಚೆನ್ನಾಗಿ ಬಳಸಿಕೊಂಡಿತು ಎಂದು ಖ್ಯಾತ ಇತಿಹಾಸಕಾರ ವಿಲಿಯಮ್ ಡ್ಯಾಲ್ರಿಂಪಲ್ ಹೇಳಿದ್ದಾರೆ. ಭಾರತದ ಭವ್ಯ ವ್ಯಾಪಾರ ಇತಿಹಾಸದ ಕಥೆ ಹೇಳುವ ‘ಗೋಲ್ಡನ್ ರೋಡ್’ ಎನ್ನುವ ಪುಸ್ತಕದ ಕರ್ತೃವಾದ ವಿಲಿಯಮ್ ಡಾಲ್ರಿಂಪಲ್ ಅವರು, ಕ್ರಿಸ್ತಪೂರ್ವ 250ರಿಂದ ಕ್ರಿಸ್ತಶಕ 1200ರವರೆಗಿನ ಕಾಲದಲ್ಲಿ ಭಾರತ ಜಾಗತಿಕ ಶಕ್ತಿಯಾಗಿತ್ತು ಎಂದು ಹೇಳಿದ್ದಾರೆ.
ಭಾರತದಲ್ಲಿರುವ ಅಜಂತಾ ಗುಯೆಯ ಪೇಂಟಿಂಗ್ಸ್ ಗಮನಿಸಿ ನೋಡಿ. ಗ್ರೀಕರು, ರೋಮನ್ನರು, ಈಜಿಟ್ಟಿಯನ್ನರು ಮೊದಲಾದ ಇತರ ರಾಷ್ಟ್ರೀಯರ ಚಿತ್ರಗಳನ್ನು ನೋಡಬಹುದು. ಭಾರತದ ಜ್ಞಾನ ಸ್ವಂತವಾಗಿ ನಿರ್ಮಿಸಿಕೊಂಡಿದ್ದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬೇರೆಡೆಯಿಂದಲೂ ಜ್ಞಾನ ಸಂಪಾದಿಸಿ, ತಮ್ಮದೇ ಸ್ವಂತ ಜ್ಞಾನವನ್ನೂ ಸೇರಿಸಿ ಅದಕ್ಕೆ ಹೊಸ ರೂಪ ಕೊಡುತ್ತಾ ಹೋದವರು ಭಾರತೀಯರು ಎಂದು ಸ್ಕಾಟ್ಲ್ಯಾಂಡ್ ಮೂಲದ ವಿಲಿಯಂ ಡಾಲ್ರಿಂಪಲ್ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಮೇಲೆ ಕೆನಡಾ ‘ವಕ್ರ’ ದೃಷ್ಟಿ; ಉತ್ತರಕೊರಿಯಾ, ಇರಾನ್, ಚೀನಾ ಪಟ್ಟಿಗೆ ಭಾರತವನ್ನೂ ಸೇರಿಸಿದ ಕೆನಡಾ
ಭಾರತದ ಆರ್ಯಭಟ ಮತ್ತು ಬ್ರಹ್ಮಗುಪ್ತ ಅವರು ಪರ್ಷಿಯನ್ನರು, ಗ್ರೀಕರ ಕೃತಿಗಳನ್ನು ಓದಿದ್ದರು. ವೇದ ಗಣಿತವನ್ನೂ ತಿಳಿದಿದ್ದರು. ನೀವು ಹೆಚ್ಚು ಮುಕ್ತರಿದ್ದಾಗ, ಇತರರ ವಿಚಾರಗಳಿಗೆ ಹೆಚ್ಚು ತೆರೆದುಕೊಂಡಿದ್ದಾಗ ಅತಿಬೇಗನೇ ಬೆಳೆಯಬಹುದು. ಭಾರತಕ್ಕೆ ಇದು ಸಾಧ್ಯವಾಗುವುದಾದರೆ ಭಾರತವು ಆರ್ಥಿಕವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಪ್ರಬಲ ಪಾತ್ರ ವಹಿಸಲು ಸಾಧ್ಯ ಎಂದವರು ಹೇಳಿದ್ದಾರೆ.
‘ಈ ಶತಮಾನದ ಅಂತ್ಯದೊಳಗೆ ಈ ವಿಶ್ವದ ಮೂರು ದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ, ಅಮೆರಿಕ ಮತ್ತು ಚೀನಾ ಈ ಮೂರು ಬಿಟ್ಟು ಬೇರೆ ದೇಶಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಈ ಮೂರರಲ್ಲಿ ಯಾವುದು ಅತಿದೊಡ್ಡ ಆರ್ಥಿಕತೆಯ ದೇಶವಾಗಬಹುದು ಎಂಬುದು ಪ್ರಶ್ನೆ.
ಇದನ್ನೂ ಓದಿ: ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್ಗಳ ಮೈಲಿಗಲ್ಲು; ಷೇರುಮಾರುಕಟ್ಟೆಗೊಂದು ಹೊಸ ಗರಿ
‘ಹತ್ತು ವರ್ಷದ ಹಿಂದೆ ನನ್ನನ್ನು ಕೇಳಿದ್ದರೆ ಚೀನಾ ಎಂದೇ ಹೇಳುತ್ತಿದ್ದೆ. ಯಾಕೆಂದರೆ ಚೀನಾ ಅಷ್ಟು ವೇಗವಾಗಿ ಬೆಳೆಯುತ್ತಿತ್ತು. ಆ ವೇಗ ಈಗ ಉಳಿದಿಲ್ಲ. ಚೀನಾದಿಂದ ಬಂಡವಾಳ ವಿಯೆಟ್ನಾಂ, ಭಾರತ, ಸಿಂಗಾಪುರ ಮೊದಲಾದ ದೇಶಗಳತ್ತ ಹೋಗುತ್ತಿದೆ. ಭಾರತದ ಆರ್ಥಿಕ ಶಕ್ತಿ ಬಗ್ಗೆ ನನಗೆ ಬಹಳ ದೊಡ್ಡ ಭರವಸೆ ಇದೆ’ ಎಂದು ವಿಲಿಯಮ್ ಡಾಲ್ರಿಂಪಲ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ