2022ರ ಜುಲೈ 1ರಿಂದ ಕಚೇರಿ ಕೆಲಸದ ಸಮಯ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಕೊಡುಗೆಗಳು ಮತ್ತು ಕೈಗೆ ಬರುವ ವೇತನದಲ್ಲಿ ಗಮನಾರ್ಹ ಬದಲಾವಣೆಗಳಾಗುವ ಸಾಧ್ಯತೆಯಿದೆ. ಕಚೇರಿ ಸಮಯ ಮತ್ತು ಪಿಎಫ್ ಕೊಡುಗೆಗಳು ಹೆಚ್ಚಾಗಲಿದ್ದು, ಕೈಗೆ ಬರುವ ವೇತನ ಕಡಿಮೆ ಆಗುವ ಸಾಧ್ಯತೆಯಿದೆ. ಆದಷ್ಟು ಬೇಗ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಆದರೆ ಕೆಲವು ರಾಜ್ಯಗಳು ಇನ್ನೂ ನಿಯಮಗಳನ್ನು ರೂಪಿಸದ ಕಾರಣ ಈ ಬದಲಾವಣೆಯು ಜುಲೈ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಹೊಸ ಕಾರ್ಮಿಕ ಕಾನೂನುಗಳು ದೇಶದಲ್ಲಿ ಹೂಡಿಕೆಗಳನ್ನು ಹೆಚ್ಚಿಸುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಎಂದು ಸರ್ಕಾರ ಹೇಳಿದೆ.
ಈ ಹೊಸ ಕಾನೂನುಗಳು ಕಂಪೆನಿಗಳು ಕಚೇರಿ ಕೆಲಸದ ಸಮಯವನ್ನು ಗಮನಾರ್ಹವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಕಚೇರಿ ಕೆಲಸದ ಸಮಯವನ್ನು 8-9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಬಹುದು. ಆದರೆ ಅವರು ತಮ್ಮ ಉದ್ಯೋಗಿಗಳಿಗೆ ವಾರದಲ್ಲಿ ಮೂರು ರಜಾ ನೀಡುವ ಮೂಲಕ ಪರಿಹಾರ ನೀಡಬೇಕು. ಒಂದು ವಾರದಲ್ಲಿ ಒಟ್ಟು ಕೆಲಸದ ಸಮಯವನ್ನು ಬದಲಾಯಿಸಬಾರದು ಎಂಬುದು ಇದರ ಉದ್ದೇಶ. ಕೈಗೆ ಬರುವ ಸಂಬಳ ಮತ್ತು ಪಿಎಫ್ಗೆ ಉದ್ಯೋಗದಾತರ ಕೊಡುಗೆಯಲ್ಲಿ ಮತ್ತೊಂದು ಗಮನಾರ್ಹ ಬದಲಾವಣೆ ಆಗುವ ಸಾಧ್ಯತೆಯಿದೆ. ಹೊಸ ಸಂಹಿತೆಗಳು ಉದ್ಯೋಗಿಯ ಮೂಲ ವೇತನವನ್ನು ಒಟ್ಟು ಸಂಬಳದ ಶೇಕಡಾ 50ಕ್ಕೆ ನಿಗದಿಪಡಿಸಬಹುದು.
ಇದರಿಂದ ಉದ್ಯೋಗಿಗೆ ಸಹಾಯ ಆಗಲಿದ್ದು, ಇದು ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆಗಳನ್ನು ಹೆಚ್ಚಿಸುತ್ತದೆ. ಕೆಲವು ಉದ್ಯೋಗಿಗಳಿಗೆ, ವಿಶೇಷವಾಗಿ ಖಾಸಗಿ ವಲಯದಲ್ಲಿರುವವರಿಗೆ ಕೈಗೆ ಬರುವ ಸಂಬಳ ಕಡಿಮೆ ಆಗುತ್ತದೆ. ನಿವೃತ್ತಿಯ ನಂತರ ಪಡೆಯುವ ಹಣ ಮತ್ತು ಗ್ರಾಚ್ಯುಟಿ ಮೊತ್ತವೂ ಹೆಚ್ಚಾಗುತ್ತದೆ. ಇದರಿಂದ ನೌಕರರು ನಿವೃತ್ತಿಯ ನಂತರ ಉತ್ತಮ ಜೀವನ ನಡೆಸಲು ಸಾಧ್ಯ ಆಗುತ್ತದೆ. ಇಲ್ಲಿಯವರೆಗೆ, 23 ರಾಜ್ಯಗಳು ಕಾರ್ಮಿಕ ಸಂಹಿತೆ ನಿಯಮಗಳನ್ನು ರೂಪಿಸಿವೆ ಎಂದು ವರದಿಯಾಗಿದೆ. ಉಳಿದ ಏಳು ರಾಜ್ಯಗಳು ಇನ್ನೂ ರೂಪಿಸಿಲ್ಲ. ಸಂವಿಧಾನದ ಅತ್ಯಗತ್ಯ ಭಾಗ, ಭಾರತದಲ್ಲಿ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ವಿಂಗಡಿಸಲಾಗಿದೆ: ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು, ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಹೀಗೆ.
ಸಂಸತ್ತಿನಿಂದ ಈ ಸಂಹಿತೆಗಳನ್ನು ಅಂಗೀಕರಿಸಲಾಗಿದೆ. ಆದರೆ ಕಾರ್ಮಿಕ ಸಂಗತಿಗಳು ಒಂದೇ ಸಲಕ್ಕೆ ಜಾರಿ ಆಗಬೇಕು. ಆದ್ದರಿಂದ ರಾಜ್ಯಗಳು ಈ ನಿಯಮಗಳನ್ನು ಒಂದೇ ಬಾರಿಗೆ ಜಾರಿಗೆ ತರಲು ಕೇಂದ್ರವು ಬಯಸುತ್ತದೆ.
ಇದನ್ನೂ ಓದಿ: ಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ: ಇಪಿಎಫ್ಒ ಚಿಂತನೆ