ದಾವೋಸ್: ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಭಾರತವು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಮುಂದಿನ 10-20 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂಬ ಅಭಿಪ್ರಾಯ ಸ್ವಿಜರ್ಲೆಂಡ್ನ (Switzerland) ದಾವೋಸ್ನಲ್ಲಿ (Davos) ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ (World Economic Forum) ವ್ಯಕ್ತವಾಗಿದೆ. ಮುಂದಿನ 10ರಿಂದ 20 ವರ್ಷಗಳಲ್ಲಿ ಭಾರತವು (India) ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿ ಕಾಣಿಸಿಕೊಳ್ಳಲಿದೆ ಎಂದು ಫೈನಾನ್ಶಿಯಲ್ ಟೈಮ್ಸ್ನ ಮುಖ್ಯ ಅರ್ಥಶಾಸ್ತ್ರ ನಿರೂಪಕ ಮಾರ್ಟಿನ್ ವುಲ್ಫ್ (Martin Wolf) ಅಭಿಪ್ರಾಯಪಟ್ಟಿದ್ದಾರೆ. ಸುದೀರ್ಘ ಅವಧಿಯಿಂದ, ಸುಮಾರು 70ನೇ ದಶಕದಿಂದಲೂ ಭಾರತವನ್ನು ಗಮನಿಸುತ್ತಿದ್ದೇನೆ. ಮುಂದಿನ 10ರಿಂದ 20 ವರ್ಷಗಳು ಬಹಳ ಮಹತ್ವದ್ದಾಗಿರಲಿದೆ. ಈ ಅವಧಿಯಲ್ಲಿ ಭಾರತವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅದರ ಆರ್ಥಿಕತೆಯ ವ್ಯಾಪ್ತಿಯು ಅಗಾಧವಾಗಿರಲಿದೆ ಎಂದು ಅವರು ಹೇಳಿದ್ದಾರೆ.
ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆ ಸಾಧಿಸಲಿದೆ ಎಂಬುದನ್ನು ಒಪ್ಪದವರು ಪ್ರಸ್ತುತ ಜಗತ್ತು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೋಡಬೇಕು. ಹೆಚ್ಚಿನವರಿಗೆ ಈಗ ನನ್ನ ಮಾತಿನ ಮರ್ಮ ಅರ್ಥವಾಗಿರಬಹದು. ಪಾವತಿ ವ್ಯವಸ್ಥೆಯಲ್ಲಂತೂ ಭಾರತ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: World Economic Forum: ಭಾರತ ಬಲೂನ್ನಂತೆ ಬಡ್ಡಿ ದರ ಹೆಚ್ಚಿಸಿಲ್ಲ, ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ; ಅಶ್ವಿನಿ ವೈಷ್ಣವ್
Exactly right!
Over the next 10-20 years, it is overwhelmingly certain that India will be the fastest-growing economy.– Martin Wolf, Chief economics commentator at the Financial Times
— Erik Solheim (@ErikSolheim) January 20, 2023
2022-23ನೇ ಸಾಲಿನ ಭಾರತದ ಜಿಡಿಪಿ ಮುನ್ಸೂಚನೆಯನ್ನು ಡಿಸೆಂಬರ್ನಲ್ಲಿ ವಿಶ್ವಬ್ಯಾಂಕ್ ಪರಿಷ್ಕರಿಸಿ ಶೇ 6.9ಕ್ಕೆ ಹೆಚ್ಚಿಸಿತ್ತು. ಅದಕ್ಕೂ ಮೊದಲು ಶೇ 6.5 ಇರಲಿದೆ ಎಂದು ಅಂದಾಜಿಸಲಾಗಿತ್ತು.
ಈ ಮಧ್ಯೆ, 2022ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ವಾರ್ಷಿಕ 1.5 ಟ್ರಿಲಿಯನ್ ಡಾಲರ್ ಡಿಜಿಟಲ್ ಪಾವತಿ ವಹಿವಾಟು ನಡೆದಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು. ಅಮೆರಿಕ, ಯುಕೆ, ಜರ್ಮನಿ ಹಾಗೂ ಫ್ರಾನ್ಸ್ನ ಡಿಜಿಟಲ್ ವಹಿವಾಟಿನ ಜತೆ ಹೋಲಿಸಿದರೆ ಇದು ಬಹಳಷ್ಟು ಹೆಚ್ಚು. ಈ ನಾಲ್ಕು ದೇಶಗಳ ಡಿಜಿಟಲ್ ವಹಿವಾಟಿನ ಮೊತ್ತವನ್ನು ಕೂಡಿಸಿ ನಾಲ್ಕು ಪಟ್ಟು ಹೆಚ್ಚಿಸಿದರೆ ಭಾರತದ ವಹಿವಾಟಿನ ಮೊತ್ತ ಅದಕ್ಕಿಂತಲೂ ಹೆಚ್ಚಿದೆ ಎಂದು ಸಚಿವರು ಹೇಳಿದರು.
ಭಾರತೀಯ ಮಂತ್ರಿಗಳ ನಿಯೋಗ ಮತ್ತು ಅನೇಕ ಉನ್ನತ ಉದ್ಯಮಿಗಳನ್ನು ಭೇಟಿಯಾಗಿರುವುದು ಸಂತಸ ತಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ಸ್ಥಾಪಕ ಕ್ಲೌಸ್ ಶ್ವಾಬ್ ಹೇಳಿದ್ದಾರೆ. ಈ ವಿಚಾರವಾಗಿ ವಿಶೇಷ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನವೀಕರಿಸಬಹುದಾದ ಇಂಧನ, ಹವಾಮಾನದ ಬದಲಾವಣೆಯಂಥ ವಿಚಾರಗಳಲ್ಲಿ ಭಾರತದ ನಿರ್ಣಾಯಕ ಕ್ರಮಗಳು, ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಡಿಜಿಟಲ್ ಮೂಲಸೌಕರ್ಯದಲ್ಲಿ ಆ ದೇಶದ ನಾಯಕತ್ವವನ್ನು ನಾನು ಪ್ರಶಂಸಿಸುತ್ತೇನೆ. ಜಾಗತಿಕ ಅರ್ಥಶಾಸ್ತ್ರ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ನಡುವೆ ಭಾರತವು ಪ್ರಕಾಶಮಾನವಾಗಿ ಕಾಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Fri, 20 January 23