ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿ: ದಾವೋಸ್ ಶೃಂಗಸಭೆಯ ವಿವರ ಕೊಟ್ಟ ಸಿಎಂ ಬೊಮ್ಮಾಯಿ

ಉಕ್ರೇನ್-ರಷ್ಯಾ ಯದ್ಧದಿಂದ ಹತ್ತಾರು ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.

ಬಂಡವಾಳ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿ: ದಾವೋಸ್ ಶೃಂಗಸಭೆಯ ವಿವರ ಕೊಟ್ಟ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 27, 2022 | 2:33 PM

ಬೆಂಗಳೂರು: ಸ್ವಿಟ್ಜರ್​ಲೆಂಡ್​ನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ (Davos Summit 2022) ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಭೆಯ ವಿವರಗಳನ್ನು ನಗರದಲ್ಲಿ ನೀಡಿದರು. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡ, ಎಸ್.ಎಂ.ಕೃಷ್ಣ ಮತ್ತು ಯಡಿಯೂರಪ್ಪ ಸಹ ದಾವೋಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ದೇಶಗಳ ಉದ್ಯೋಗಪತಿಗಳು ಒಂದೆಡೆ ಸೇರುವ ಶೃಂಗಸಭೆಗೆ ಈ ಬಾರಿ ಕೊವೊಡ್ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವವಿತ್ತು ಎಂದು ಹೇಳಿದರು.

ಕೊವಿಡ್​ನಿಂದಾಗಿ ಜಾಗತಿಕ ಆರ್ಥಿಕತೆಯು ಹಿಂಜರಿಕೆಯ ಸುಳಿಗೆ ಸಿಲುಕುವ ಅಪಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಶೃಂಗಸಭೆ ಎಲ್ಲರ ಗಮನ ಸೆಳೆದಿತ್ತು. ಭಾರತದ ಆರ್ಥಿಕತೆ ಬಗ್ಗೆ ವಿಶ್ವದ ವಿವಿಧ ದೇಶಗಳ ಪ್ರತಿಕ್ರಿಯೆ ಹೇಗಿರಬಹುದು ಎಂಬ ಕುತೂಹಲ ವ್ಯಕ್ತವಾಗಿತ್ತು. ಹಲವು ದೇಶಗಳ ಪ್ರತಿನಿಧಿಗಳು ಭಾರತಕ್ಕೆ ನೀಡಿದ್ದ ಪ್ರಾಮುಖ್ಯತೆ ಗಮನಿಸಿದಾಗ ಭಾರತವು ನಿಜಕ್ಕೂ ಬೆಳೆಯುತ್ತಿರುವ ಆರ್ಥಿಕತೆ ಎನ್ನುವುದು ಮನವರಿಕೆಯಾಯಿತು. ಚೀನಾದಲ್ಲಿ ಇಂದಿಗೂ ಲಾಕ್​ಡೌನ್ ಮುಂದುವರಿಯುತ್ತಿದೆ. ಉಕ್ರೇನ್-ರಷ್ಯಾ ಯದ್ಧದಿಂದ ಹತ್ತಾರು ಸಮಸ್ಯೆಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.

ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ವೈಪರಿತ್ಯಗಳು ಈ ಬಾರಿಯ ಚರ್ಚೆಯ ಮುಖ್ಯ ಅಂಶಗಳಾಗಿದ್ದವು. ಕರ್ನಾಟಕವು ಈ ಬಾರಿಯೂ ದೊಡ್ಡಮಟ್ಟದ ಬಂಡಾವಳವನ್ನು ಆಕರ್ಷಿಸಿದೆ. ಹೂಡಿಕೆದಾರರ ಆಸಕ್ತಿಯು ಉತ್ತಮವಾಗಿದೆ. ಬೆಳಿಗ್ಗೆ 10ರಿಂದ ರಾತ್ರಿ 7 ಗಂಟೆಯವರೆಗೂ ನಿರಂತರ ಚರ್ಚೆಗಳು ನಡೆಯುತ್ತಿದ್ದವು. ನಾನೂ ಎಮರ್ಜಿಂಗ್ ಇಂಡಿಯಾ ಕಾನ್​ಕ್ಲೇವ್​ನಲ್ಲಿ ಭಾಗವಹಿಸಿದ್ದೆ. ವಿಶ್ವದ ಹಲವು ದೊಡ್ಡ ಕಂಪನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಭರವಸೆ ನೀಡಿವೆ ಎಂದು ಹೇಳಿದರು.

ಜುಬಿಲಿಯೆಂಟ್ ಇಂಡಿಯಾ ಗ್ರೂಫ್​ ಆಹಾರ ಸಂಸ್ಕರಣೆ ಉದ್ಯಮದ ದೊಡ್ಡ ಸರಪಳಿಯನ್ನು ಹೊಂದಿದೆ. ಈ ಕಂಪನಿಯು ಕರ್ನಾಟಕದಲ್ಲಿ ₹ 700 ಕೋಟಿ ಹೂಡಿಕೆಗೆ ತೀರ್ಮಾನಿಸಿದ್ದು, ದೇವನಹಳ್ಳಿಯ ಬಳಿ 10 ಎಕರೆ ಭೂಮಿ ಖರೀದಿಸಿದೆ. ಹಿಟ್ಯಾಚಿ ಎನರ್ಜಿ ಕಂಪನಿಯು ಬೆಂಗಳೂರಿನಲ್ಲಿ ಉದ್ಯಮ ಸ್ಥಾಪಿಸುವುದಾಗಿ ಹೇಳಿದ್ದು, 2000 ಎಂಜಿನಿಯರ್​ಗಳಿಗೆ ಇದರಲ್ಲಿ ಕೆಲಸ ಸಿಗಲಿದೆ. ಸೀಮನ್ಸ್ ಹೆಲ್ತ್ ಕೇರ್ ಕಂಪನಿಯು ರಾಜ್ಯದಲ್ಲಿ ₹ 1300 ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಲುಲು ಗ್ರೂಪ್ ₹ 2000 ಕೋಟಿ, ನೆಸ್ಲೆ ಕಂಪನಿ ₹ 700, ಎಬಿ ಇನ್ವೇವ್ ಸಂಸ್ಥೆ ನಾನ್ ಆಲ್ಕೋಹಾಲಿಕ್ ಪಾನೀಯಕ್ಕೆ ₹ 50 ಕೋಟಿ, ದಸ್ಸಾಲ್ಸ್ ಸಿಸ್ಟಮ್ ₹ 300 ಕೋಟಿ, ಸೀಜನರ್ ಎಲೆಕ್ಟ್ರಿಕ್ ಸಂಸ್ಥೆ ₹ 300 ಕೋಟಿ, ಆರ್ಸೆಲಾರ್ ಮಿತ್ತಲ್ (ಪವನ ಶಕ್ತಿ) ₹ 2000 ಕೋಟಿ ಹೂಡಿಕೆಗೆ ನಿರ್ಧರಿಸಿದೆ ಎಂದು ಬೊಮ್ಮಾಯಿ ಹೇಳಿದರು.

ಕರ್ನಾಟಕದಲ್ಲಿ ಮೆಗಾ ಡೇಟಾ ಸೆಂಟರ್ ಆರಂಭಿಸಲು ಭಾರ್ತಿ ಎಂಟರ್ ಪ್ರೈಸಸ್ ಆಸಕ್ತಿ ತೋರಿಸಿದೆ. ಅದಾನಿ ಗ್ರೂಪ್, ದಾಲ್ಮಿಯಾ ಸಿಮೆಂಟ್, ಜಾನ್ಸನ್ ಕಂಟ್ರೋಲ್ಸ್, ಹನಿ ವೆಲ್, ಐಬಿಎಂ, ಐಕಿಯಾ ಸ್ಟೋರ್ಸ್, ಪೇ ಪಾಲ್, ಆಕ್ಸಿಸ್ ಬ್ಯಾಂಕ್ ಸೇರಿ ಹಲವು ಕಂಪನಿಗಳು ರಾಜ್ಯದಲ್ಲಿ ತಮ್ಮ ಉದ್ಯಮ ವಿಸ್ತರಣೆ ಕುರಿತು ಚರ್ಚೆ ನಡೆಸಿದವು. ಹುಬ್ಬಳ್ಳಿ, ಬೆಳಗಾವಿ, ಮೈಸೂರಿನಲ್ಲಿ ಘಟಕ ತೆರೆಯಲು ಅವಕಾಶ ನೀಡುವುದಾಗಿ ನಾವು ಭರವಸೆ ನೀಡಿದ್ದೇವೆ ಎಂದರು.

ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಸಹಾಯಧನ ನೀಡಲು ಆ್ಯಂಕರ್ ಬ್ಯಾಂಕ್ ಆಗಬೇಕು ಅಂತ ಆ್ಯಕ್ಸಿಸ್ ಬ್ಯಾಂಕ್ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ. ಹೊಸ ತಂತ್ರಜ್ಞಾನವನ್ನು ಆಧರಿಸಿದ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಉದ್ಯಮಗಳ ಆರಂಭಕ್ಕೆ ಕರ್ನಾಟಕ ಸರ್ಕಾರವು ಒತ್ತಾಸೆಯಾಗಿ ನಿಲ್ಲಲಿದೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಟೆಕ್ ಸಮಿಟ್ ಆಯೋಜನೆ ಮಾಡುವ ಏಕೈಕ ರಾಜ್ಯ ಕರ್ನಾಟಕ. ಕೋವಿಡ್ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಅದರಲ್ಲಿ ಕರ್ನಾಟಕದ ಪಾತ್ರ ಬಹಳ ದೊಡ್ಡದು. ಇಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಬೆಳವಣಿಗೆಗೆ ಇಂಬು ಕೊಡುವ ಕೆಲಸ ಆಗುತ್ತಿದೆ. ನಮ್ಮ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಿ, ಹೂಡಿಕೆ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕರ್ನಾಟಕವನ್ನು ಇತರ ರಾಜ್ಯಗಳೊಂದಿಗೆ ಹೋಲಿಸಬಾರದು ಎಂದು ಮನವಿ ಮಾಡಿದ ಬಸವರಾಜ ಬೊಮ್ಮಾಯಿ, ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರಿಗೆ ಕರ್ನಾಟಕದ ಕೆಲ ನೀತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಒಮ್ಮೆ ಅವರಿಗೆ ನಮ್ಮ ನೀತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಅವರ ಸ್ಪಂದನೆ ಸಕಾರಾತ್ಮಕವಾಗಿಯೇ ಇತ್ತು. ಲಕ್ಷ್ಮಿ ಮಿತ್ತಲ್ ಬಹಳ ಸಹಜವಾಗಿ ರಾಜಕಾರಣದ ಬಗ್ಗೆ ಕೇಳಿದ್ದರು. ಬೇರೆ ಬೇರೆ ರಾಜ್ಯದ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅವರ ಹವ್ಯಾಸ. ಅವರೊಂದಿಗೆ ಸಹಜವಾಗಿ ನಡೆದಿರುವ ಮಾತುಕತೆ ಅದು. ಇಲ್ಲಿ ಅದಕ್ಕೆ ಬಹಳ ದೊಡ್ಡ ಮಟ್ಟಿಗಿನ ಸದ್ದು ಮಾಡಲಾಗಿದೆ ಎಂದು ವಿವರಿಸಿದರು.

ಬಂಡವಾಳ ಹೂಡಿಕೆದಾರರು ಯಾರೇ ಬಂದರೂ ನಾವು ಬೇಡ ಎಂದು ಹೇಳುವುದಿಲ್ಲ. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾಳೆ ಮಾತನಾಡುತ್ತೇನೆ. ಇಲ್ಲಿನ ಬೆಳವಣಿಗೆಗಳ ಬಗ್ಗೆ ಉತ್ತರ ಕೊಡುತ್ತೇನೆ ಎಂದು ವಿನಂತಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Fri, 27 May 22