ದೆಹಲಿ ಕ್ರೀಡಾಂಗಣದಲ್ಲಿ ನಾಯಿ ವಾಕಿಂಗ್ ಅಷ್ಟೇ ಅಲ್ಲ; ವಿಐಪಿ ಸಂಸ್ಕೃತಿಯಿಂದ ಬೆಂಗಳೂರು ಆ್ಯಂಬುಲೆನ್ಸ್​​ನಲ್ಲಿದ್ದ ಜೀವಗಳಿಗೂ ಕುತ್ತು ಬಂದಿತ್ತು

ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯಗಳು ಹಲವು ಬಾರಿ ತಾಕೀತು ಮಾಡಿದ್ದರೂ ಈ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ.

ದೆಹಲಿ ಕ್ರೀಡಾಂಗಣದಲ್ಲಿ ನಾಯಿ ವಾಕಿಂಗ್ ಅಷ್ಟೇ ಅಲ್ಲ; ವಿಐಪಿ ಸಂಸ್ಕೃತಿಯಿಂದ ಬೆಂಗಳೂರು ಆ್ಯಂಬುಲೆನ್ಸ್​​ನಲ್ಲಿದ್ದ ಜೀವಗಳಿಗೂ ಕುತ್ತು ಬಂದಿತ್ತು
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಮಧ್ಯೆ ಸಿಲುಕಿದ್ದ ಆ್ಯಂಬುಲೆನ್ಸ್ (ಸಂಗ್ರಹ ಚಿತ್ರ)
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 27, 2022 | 12:07 PM

ವಿಐಪಿ ಸಂಸ್ಕೃತಿಯಿಂದಾಗಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವವರಿಗೆ ತೊಂದರೆಯಾಗಿದ್ದಷ್ಟೇ ಅಲ್ಲ, ಸಕಾಲಕ್ಕೆ ಆ್ಯಂಬುಲೆನ್ಸ್​ಗಳು ಆಸ್ಪತ್ರೆ ತಲುಪಲು ಸಾಧ್ಯವಾಗದೇ ಎಷ್ಟೋ ಜನರು ಸಾವನ್ನಪ್ಪಿದ್ದಾರೆ. ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಬೇಕು ಎಂದು ನ್ಯಾಯಾಲಯಗಳು ಹಲವು ಬಾರಿ ತಾಕೀತು ಮಾಡಿದ್ದರೂ ಈ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಟ್ರಾಫಿಕ್ ಜಾಮ್, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಅಡಚಣೆ, ದೇಗುಲಗಳಲ್ಲಿ ಭಕ್ತರಿಂದ ಆಕ್ರೋಶ ಸೇರಿದಂತೆ ಹಲವು ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ. ಆದರೆ ಈ ಬಾರಿ ದೆಹಲಿಯಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಬೇಕೆಂದು ಐಎಎಸ್ ಅಧಿಕಾರಿ ದಂಪತಿ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ ಕಾರಣಕ್ಕೆ ವಿಐಪಿ ಸಂಸ್ಕೃತಿಯು ಇಡೀ ದೇಶದ ಗಮನ ಸೆಳೆದಿದೆ.

ಇದನ್ನೂ ಓದಿ: ಕ್ರೀಡಾಂಗಣದಲ್ಲಿ ತರಬೇತಿ ನಿಲ್ಲಿಸಿ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಐಎಎಸ್​ ಅಧಿಕಾರಿ ಲಡಾಖ್​ಗೆ ವರ್ಗ, ಪತ್ನಿ ಅರುಣಾಚಲ ಪ್ರದೇಶಕ್ಕೆ

ವಿಐಪಿ ಸಂಸ್ಕೃತಿಯಿಂದ ಆಗಿದ್ದ ಅನಾಹುತಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವರದಿಯಾಗಿದ್ದ 10 ಅಂಶಗಳಿವು…

  1. ದೇಶದಲ್ಲಿ ಲಾಕ್​ಡೌನ್ ಹೇರಿದಾಗ ಎಷ್ಟೋ ಜನರು ತಾವು ಇದ್ದ ಊರುಗಳಲ್ಲಿಯೇ ಸಿಲುಕಿಕೊಂಡರು. ಈ ಸಂದರ್ಭದಲ್ಲಿ ಬಿಹಾರದ ಬಿಜೆಪಿ ಶಾಸಕರೊಬ್ಬರು ರಾಜಸ್ಥಾನದ ಕೋಟಾ ನಗರದಲ್ಲಿ ಓದುತ್ತಿದ್ದ ತಮ್ಮ ಮಗಳನ್ನು ಕರೆತರಲು ತಮ್ಮ ಪ್ರಭಾವ ಬಳಸಿ ವಿಶೇಷ ಅನುಮತಿ ಪಡೆದುಕೊಂಡಿದ್ದರು. ಬಿಗಿ ಲಾಕ್​ಡೌನ್ ಸಂದರ್ಭದಲ್ಲಿ ಶಾಸಕರು ಹೀಗೆ ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನು ಜನರು ಕೇಳಿದ್ದರು.
  2. ದೇವಾಲಯಗಳಲ್ಲಿ ವಿಐಪಿ ಸಂಸ್ಕೃತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಹಲವು ಬಾರಿ ನ್ಯಾಯಾಲಯಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿವೆ. ತಮಿಳುನಾಡಿನ ತಿರುಚೆಂಡೂರ್​ನಲ್ಲಿರುವ ಅರುಳ್​ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಐಪಿಗಳಿಗೆ ಸಿಗುತ್ತಿರುವ ವಿಶೇಷ ಸವಲತ್ತುಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಪ್ರಸ್ತಾಪಿಸಿ, ಅದನ್ನು ಸರಿಪಡಿಸುವ ಬಗ್ಗೆ ಮದ್ರಾಸ್ ಹೈಕೋರ್ಟ್​ ವಿಸ್ತೃತ ಆದೇಶ ಹೊರಡಿಸಿತ್ತು. ‘ದೇವರೊಬ್ಬನೇ ವಿಐಪಿ’ ಎಂದು ತನ್ನ ನಿಲುವು ಸಾರಿತ್ತು.
  3. ಚಂಡಿಗಡ ರೈಲು ನಿಲ್ದಾಣದಲ್ಲಿ ವಿಐಪಿ ಲೇನ್ ಎನ್ನುವ ಪ್ರತ್ಯೇಕ ಮಾರ್ಗವೇ ಇವೆ. ಸಾರ್ವಜನಿಕರು ಸಂಚರಿಸುವ ಮಾರ್ಗವನ್ನು ಕಿರಿದಾಗಿಸಿ ರೂಪಿಸಿರುವ ಈ ಮಾರ್ಗದಿಂದ ದಿನನಿತ್ಯ ರೈಲು ನಿಲ್ದಾಣಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ.
  4. ಕೈಲಾಶ್ ಚಾಂದ್ ಎನ್ನುವ ದೆಹಲಿ ನಿವಾಸಿಗೆ 2016ರಲ್ಲಿ ಹೃದಯಾಘಾತವಾಗಿತ್ತು. ಅವರ ಮಗ ಅರವಿಂದ್ ತಕ್ಷಣ ತನ್ನ ತಂದೆಯನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು. ಆದರೆ ವಿಐಪಿ ಸಂಚಾರದ ನೆಪವೊಡ್ಡಿ ಪೊಲೀಸರು ಆಟೊ ತಡೆದು, ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದರು. 10 ನಿಮಿಷಕ್ಕೆ ಆಸ್ಪತ್ರೆ ತಲುಪಬೇಕಿದ್ದವರು ಬರೋಬ್ಬರಿ ಒಂದೂವರೆಗೆ ಗಂಟೆ ತಡವಾಗಿ ಆಸ್ಪತ್ರೆ ತಲುಪಿದ್ದರು. ಮಾರ್ಗಮಧ್ಯೆಯೇ ಕೈಲಾಶ್ ಚಾಂದ್ ಮೃತಪಟ್ಟಿದ್ದರು.
  5. ರಕ್ತಸೋರಿಕೆಯಿಂದ 2017ರಲ್ಲಿ ತೀವ್ರವಾಗಿ ಬಳಲುತ್ತಿದ್ದ ಮಗುವೊಂದನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್​ ಅನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ ಹಲವರು, ‘ವಿಐಪಿ ಸಂಚಾರಕ್ಕಿಂತಲೂ ಮಗುವಿನ ಜೀವ ಮುಖ್ಯ’ ಎಂದು ತಾಕೀತು ಮಾಡಿದ್ದರು. ಜನಾಕ್ರೋಶ ಹೆಚ್ಚಾದ ನಂತರ ಪೊಲೀಸರು ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
  6. ತೀವ್ರ ಎದೆನೋವಿನಿಂದ 2010ರಲ್ಲಿ ಬಳಲುತ್ತಿದ್ದ ಅನಿಲ್ ಜೈನ್ ಅವರಿದ್ದ ಆ್ಯಂಬುಲೆನ್ಸ್​ ಅನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಪ್ರಧಾನಿ ಸಾಗುವ ಮಾರ್ಗ ಎನ್ನುವ ಕಾರಣಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದಿದ್ದರು. ಪ್ರಧಾನಿಯ ಬೆಂಗಾವಲು ವಾಹನಗಳು ಸಾಗಿದ ನಂತರ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಆದರೆ ಅಷ್ಟರಲ್ಲಿ ಅನಿಲ್ ಜೈನ್ ಮೃತಪಟ್ಟಿದ್ದರು.
  7. ಈ ತಿಂಗಳ 3ನೇ ತಾರೀಖು ಕೇಂದ್ರ ಗೃಹ ಸಚಿವ ಅಮಿತ್​ ಶಾ ಬೆಂಗಳೂರಿಗೆ ಬಂದಿದ್ದರು. ವಿಐಪಿ ಸಂಚಾರದ ಹಿನ್ನೆಲೆಯಲ್ಲಿ ಸದಾ ಟ್ರಾಫಿಕ್​ನಿಂದ ಗಿಜಿಗುಡುವ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಬದಲಿಸಲು ಪೊಲೀಸರು ನಿರ್ಧರಿದ್ದರು. ಅಂದು ಮುಂಜಾನೆ ಟ್ವೀಟ್ ಮಾಡಿದ್ದ ಬೆಂಗಳೂರು ಪೊಲೀಸರು, ‘ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರ ಅವಧಿಯಲ್ಲಿ ಸಂಚಾರ ವ್ಯವಸ್ಥೆ ಬದಲಾಗಲಿದೆ. ನಿಮ್ಮ ಟ್ರಾವೆಲ್ ಪ್ಲಾನ್ ಮಾರ್ಪಾಡು ಮಾಡಿಕೊಳ್ಳಿ’ ಎಂದು ಹೇಳಿದ್ದರು. ಪೊಲೀಸರ ಈ ಸಲಹೆಗೆ ಆನ್​ಲೈನ್​ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
  8. ಕಳೆದ ಜುಲೈ ತಿಂಗಳಲ್ಲಿ ಹೈದರಾಬಾದ್​ನ ಮಸಾಬ್ ಟ್ಯಾಂಕ್ ಜಂಕ್ಷನ್​ನಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ವಿಐಪಿ ಸಂಚಾರಕ್ಕಾಗಿ ಟ್ರಾಫಿಕ್ ಸ್ಥಗಿತಗೊಳಿಸಲಾಗಿತ್ತು. ವಿಐಪಿ ಸಂಸ್ಕೃತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
  9. ಹೃದಯಾಘಾತದಿಂದ ತೀವ್ರ ಅಸ್ವಸ್ಥಗೊಂಡಿದ್ದ 60 ವರ್ಷದ ರೋಗಿಯನ್ನು ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್​ ಒಂದನ್ನು 2017ರಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದರು. ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಾಪಸ್ ಹಿಂದಿರುಗುವರೆಗೂ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದೂ ಸಹ ಜನರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿತ್ತು.
  10. ಸಚಿವರೊಬ್ಬರ ಜಂಟಿ ಕಾರ್ಯದರ್ಶಿಯ ಪ್ರಯಾಣದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಆಂಬುಲೆನ್ಸ್​ನಲ್ಲಿದ್ದ ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮದರಿಪುರದ ಕಥಲ್​ಬಾರಿ ಫೆರಿ ಘಾಟ್ ಪ್ರದೇಶದಲ್ಲಿ ವರದಿಯಾಗಿತ್ತು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada