Oxfam Report: ವಿಶ್ವದ 400 ಕೋಟಿ ಜನರದ್ದಕ್ಕೆ ಸಮ ಈ 12 ಮಂದಿಯ ಶ್ರೀಮಂತಿಕೆ

Billionaires count crosses 3,000: 2025ರಲ್ಲಿ ಜಗತ್ತಿನಾದ್ಯಂತ ಬಿಲಿಯನೇರ್​ಗಳ ಸಂಖ್ಯೆ 3,000 ದಾಟಿದೆ. ಶತಕೋಟ್ಯಾಧಿಪತಿಗಳ ಸಂಖ್ಯೆ ಅತಿಹೆಚ್ಚು ಹೆಚ್ಚಳ ಆಗಿರುವುದು ಅಮೆರಿಕದಲ್ಲಿ. ಆಕ್ಸ್​ಫ್ಯಾಮ್ ವರದಿ ಪ್ರಕಾರ ವಿಶ್ವದ ಟಾಪ್-12 ಶ್ರೀಮಂತರ ಬಳಿ ಇರುವ ಆಸ್ತಿಯು ಕೆಳಗಿನ ಶೇ. 50ಕ್ಕಿಂತಲೂ ಹೆಚ್ಚು ಜನರ ಆಸ್ತಿಗಿಂತ ದೊಡ್ಡದು.

Oxfam Report: ವಿಶ್ವದ 400 ಕೋಟಿ ಜನರದ್ದಕ್ಕೆ ಸಮ ಈ 12 ಮಂದಿಯ ಶ್ರೀಮಂತಿಕೆ
ಬಿಲಿಯನೇರ್​ಗಳು

Updated on: Jan 20, 2026 | 4:29 PM

ನವದೆಹಲಿ, ಜನವರಿ 20: ಕಳೆದ ವರ್ಷ (2025) ಜಗತ್ತಿನಲ್ಲಿ ಬಿಲಿಯನೇರ್​ಗಳ (Billionaires) ಸಂಖ್ಯೆ 3,000 ಗಡಿ ದಾಟಿದೆ. ಇದು ಹೊಸ ದಾಖಲೆಯಾಗಿದೆ. ಈ ಇಷ್ಟೂ ಬಿಲಿಯನೇರ್​ಗಳ ಒಟ್ಟೂ ಸಂಪತ್ತು 18.3 ಟ್ರಿಲಿಯನ್ ಡಾಲರ್​ನಷ್ಟು ಇರಬಹುದು ಎನ್ನಲಾಗಿದೆ. ಸ್ವಿಟ್ಜರ್​ಲ್ಯಾಂಡ್​ನ ಡಾವೊಸ್​ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂ ವಾರ್ಷಿಕ ಸಭೆಗೆ ಮುನ್ನ ಆಕ್ಸ್​ಫ್ಯಾಮ್ (Oxfam) ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಬಿಲಿಯನೇರ್​ಗಳ ಮಾಹಿತಿ ಕೊಡಲಾಗಿದೆ.

ಈ ಮೂರು ಸಾವಿರ ಬಿಲಿಯನೇರ್​ಗಳಿರುವ ಒಟ್ಟೂ ಆಸ್ತಿಯು ಚೀನಾದಂತಹ ದೈತ್ಯ ದೇಶದ ಜಿಡಿಪಿಗೆ ಸಮವಾಗಿದೆ. 2025ರಲ್ಲಿ ಇವರ ಒಟ್ಟಾರೆ ಸಂಪತ್ತು ಶೇ. 16ರಷ್ಟು ವೃದ್ಧಿಯಾಗಿದೆ. 2020ರಲ್ಲಿ ಜಾಗತಿಕ ಬಿಲಿಯನೇರ್​ಗಳು ಹೊಂದಿದ್ದ ಸಂಪತ್ತಿಗೆ ಹೋಲಿಸಿದರೆ ಈಗ ಅದು ಶೇ. 81ರಷ್ಟು ಹೆಚ್ಚಿದೆ ಎಂದು ಆಕ್ಸ್​ಫ್ಯಾಮ್ ವರದಿಯಿಂದ ತಿಳಿದುಬರುತ್ತದೆ.

ಬಿಲಿಯನೇರ್​ಗಳೆಂದರೆ ಯಾರು?

ಒಂದು ಬಿಲಿಯನ್ ಅಮೆರಿಕನ್ ಡಾಲರ್​ನಷ್ಟು ಮೌಲ್ಯದ ಸಂಪತ್ತು ಹೊಂದಿರುವವರನ್ನು ಬಿಲಿಯನೇರ್​ಗಳೆಂದು ಪರಿಗಣಿಸಲಾಗುತ್ತದೆ. ಒಂದು ಬಿಲಿಯನ್ ಎಂದರೆ ನೂರು ಕೋಟಿ. ಭಾರತೀಯ ರುಪಾಯಿ ಲೆಕ್ಕದಲ್ಲಿ ಒಂದು ಬಿಲಿಯನ್ ಡಾಲರ್ ಎಂದರೆ ಸುಮಾರು 9,000 ಕೋಟಿ ರೂ.

ಇದನ್ನೂ ಓದಿ: ಬಜೆಟ್​ನಲ್ಲಿ ಫ್ಯಾಮಿಲಿ ಭಾಗ್ಯ; ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ತರಲು ಯೋಜನೆ; ಯಾರಿಗೆ ಲಾಭ?

ವಿಶ್ವದ ಅತಿಶ್ರೀಮಂತ 12 ಮಂದಿಯ ಕೈಲಿ ಇರುವ ಸಂಪತ್ತು ಎಷ್ಟು?

ಜಾಗತಿಕವಾಗಿ ಸಂಪತ್ತು ಹೆಚ್ಚುತ್ತಿದೆ. ಶ್ರೀಮಂತರು ಹೆಚ್ಚುತ್ತಿದ್ದಾರೆ. ಹಾಗೆಯೇ, ಆರ್ಥಿಕ ಅಸಮಾನತೆಯೂ ಹೆಚ್ಚುತ್ತಿರುವ ಟ್ರೆಂಡ್ ಮುಂದುವರಿಯುತ್ತಿದೆ. ಆಕ್ಸ್​ಫ್ಯಾಮ್ ವರದಿ ಪ್ರಕಾರ ವಿಶ್ವದ ಅತೀ ಶ್ರೀಮಂತ 12 ಮಂದಿಯ ಬಳಿ ಇರುವ ಆಸ್ತಿಯ ಮೌಲ್ಯವು ಜಗತ್ತಿನ ಶೇ. 50ಕ್ಕಿಂತ ಹೆಚ್ಚು ಜನರ ಸಂಪತ್ತಿಗೆ ಸಮ ಎನ್ನಲಾಗುತ್ತಿದೆ.

ಅಂದರೆ, ಕೆಳಸ್ತರದಲ್ಲಿರುವ 400 ಕೋಟಿಗೂ ಅಧಿಕ ಜನರು ಹೊಂದಿರುವ ಒಟ್ಟೂ ಸಂಪತ್ತಿಗಿಂತ ಹೆಚ್ಚಿನದು ಅಗ್ರ 12 ಜನರ ಬಳಿ ಇದೆಯಂತೆ. ಎನ್​ವಿಡಿಯಾ, ಟೆಸ್ಲಾ ಇತ್ಯಾದಿ ಕಂಪನಿಗಳ ವ್ಯಾಲ್ಯುಯೇಶನ್ ಗಣನೀಯವಾಗಿ ಹೆಚ್ಚಿರುವುದು ಶ್ರೀಮಂತರನ್ನು ಇನ್ನೂ ದೊಡ್ಡ ಶ್ರೀಮಂತರನ್ನಾಗಿಸಿದೆ. ವರ್ಷದ ಹಿಂದೆ 200-300 ಬಿಲಿಯನ್ ಡಾಲರ್ ಹಣವಂತರಾಗಿದ್ದ ಇಲಾನ್ ಮಸ್ಕ್ ಇದೀಗ ಜಗತ್ತಿನ ಮೊದಲ ಟ್ರಿಲಿಯನೇರ್ ಆಗುವತ್ತ ದಾಪುಗಾಲಿಕ್ಕಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಟಾಪ್-10 ಬಿಲಿಯನೇರ್ಸ್

  1. ಇಲಾನ್ ಮಸ್ಕ್: 779.6 ಬಿಲಿಯನ್ ಡಾಲರ್
  2. ಲ್ಯಾರಿ ಪೇಜ್: 270 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್: 249.1 ಬಿಲಿಯನ್ ಡಾಲರ್
  4. ಸೆರ್ಗೀ ಬ್ರಿನ್: 249.1 ಬಿಲಿಯನ್ ಡಾಲರ್
  5. ಲ್ಯಾರಿ ಎಲಿಸನ್: 240.6 ಬಿಲಿಯನ್ ಡಾಲರ್
  6. ಮಾರ್ಕ್ ಜುಕರ್ಬರ್ಗ್: 212.8 ಬಿಲಿಯನ್ ಡಾಲರ್
  7. ಬರ್ನಾರ್ಡ್ ಆರ್ನಾಲ್ಟ್: 182.4 ಬಿಲಿಯನ್ ಡಾಲರ್
  8. ಜೆನ್ಸೆನ್ ಹುವಾಂಗ್: 161.7 ಬಿಲಿಯನ್ ಡಾಲರ್
  9. ವಾರನ್ ಬಫೆಟ್: 146.1 ಬಿಲಿಯನ್ ಡಾಲರ್
  10. ಅಮಾನ್ಷಿಯೋ ಆರ್ಟೆಗಾ: 143.1 ಬಿಲಿಯನ್ ಡಾಲರ್

ಇದನ್ನೂ ಓದಿ: ಇದು ವಿದ್ಯುತ್ ಕ್ರಾಂತಿ..! ವೈಫೈ ಇಂಟರ್ನೆಟ್ ರೀತಿ ವೈರ್ಲೆಸ್ ಎಲೆಕ್ಟ್ರಿಸಿಟಿ ರವಾನಿಸಿದ ಫಿನ್​ಲ್ಯಾಂಡ್ ವಿಜ್ಞಾನಿಗಳು

ಭಾರತೀಯ ಬಿಲಿಯನೇರ್​ಗಳ ಪೈಕಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮೊದಲೆರಡು ಸ್ಥಾನದಲ್ಲಿ ಮುಂದುವರಿಯುತ್ತಾರೆ. ಅಂಬಾನಿ 104.6 ಟ್ರಿಲಿಯನ್ ಡಾಲರ್, ಅದಾನಿ 89.6 ಬಿಲಿಯನ್ ಡಾಲರ್ ಮೌಲ್ಯದ ಕುಬೇರರಾಗಿದ್ದಾರೆ. ಸಾವಿತ್ರಿ ಜಿಂದಾಲ್ 40.2 ಬಿಲಿಯನ್ ಡಾಲರ್​ನೊಂದಿಗೆ ಮೂರನೇ ಸ್ಥಾನ ಪಡೆಯುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ