Elon Musk: 20 ಲಕ್ಷ ಕೋಟಿ ರೂ.ಗೂ ಹೆಚ್ಚು ಆಸ್ತಿಯ ವಿಶ್ವದ ನಂಬರ್ 1 ಶ್ರೀಮಂತ ಎಲಾನ್​ ಮಸ್ಕ್​ಗೆ ಒಂದು ಸ್ವಂತ ಮನೆ ಕೂಡ ಇಲ್ಲ!

| Updated By: Srinivas Mata

Updated on: Apr 20, 2022 | 11:08 AM

20.50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇರುವ ಅಪರ ಕುಬೇರ ಎನಿಸಿಕೊಂಡ ಎಲಾನ್​ ಮಸ್ಕ್​ಗೆ ಒಂದು ಸ್ವಂತ ಮನೆ ಕೂಡ ಇಲ್ಲ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಹೇಳುತ್ತಿರುವುದು ಸ್ವತಃ ಎಲಾನ್ ಮಸ್ಕ್.

Elon Musk: 20 ಲಕ್ಷ ಕೋಟಿ ರೂ.ಗೂ ಹೆಚ್ಚು ಆಸ್ತಿಯ ವಿಶ್ವದ ನಂಬರ್ 1 ಶ್ರೀಮಂತ ಎಲಾನ್​ ಮಸ್ಕ್​ಗೆ ಒಂದು ಸ್ವಂತ ಮನೆ ಕೂಡ ಇಲ್ಲ!
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us on

ಆತ ವಿಶ್ವದ ನಂಬರ್​ 1 ಶ್ರೀಮಂತ. ಪರಿಚಯದ ಅಗತ್ಯವೇ ಇಲ್ಲದ ಆತನ ಹೆಸರು ಎಲಾನ್ ಮಸ್ಕ್ (Elon Musk). ನಿಮಗೆ ಗೊತ್ತಾ, ಆತನಿಗೆ ಅಂತ ಒಂದು ಸ್ವಂತ ಮನೆಯೂ ಈಗ ಇಲ್ಲ. ಹೋಗಲಿ, ಐಷಾರಾಮಿ ಹೋಟೆಲ್ – ಬಾಡಿಗೆ ಬಂಗಲೆಗಳಲ್ಲಿ ಇರಬಹುದೇನೋ ಎಂಬ ಪ್ರಶ್ನೆಯೇನಾದರೂ ನಿಮ್ಮ ಮನಸ್ಸಿಗೆ ಬಂದಲ್ಲಿ, ಕ್ಷಮಿಸಿ ನೀವು ನೂರು ಪರ್ಸೆಂಟ್ ತಪ್ಪು. ಏಕೆಂದರೆ ಮಸ್ಕ್ ತನ್ನ ದಿನಗಳನ್ನು ದೂಡುವುದು ಸ್ನೇಹಿತರ ಮನೆಗಳಲ್ಲಿ. ಇದನ್ನು ಅವರಿವರು ಯಾರೋ ಹೇಳಿದ್ದಂಥದ್ದಲ್ಲ. ಖುದ್ದು ಅಪರ ಕುಬೇರನಂತಿರುವ ಎಲಾನ್ ಮಸ್ಕ್ ಹೇಳಿಕೊಂಡಿರುವುದು. TEDಯ ಕ್ರಿಸ್ ಆಂಡರ್ಸನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಸ್ಕ್ ಅವರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. “ನನಗೆ ಇದೀಗ ಸ್ವಂತ ಸ್ಥಳವೂ ಇಲ್ಲ. ನಾನು ಅಕ್ಷರಶಃ ಸ್ನೇಹಿತರ ಸ್ಥಳಗಳಲ್ಲಿ ಇರುತ್ತೇನೆ,” ಎಂದು ಅವರು ಹೇಳಿಕೊಂಡಿರುವುದನ್ನು ನ್ಯೂಯಾರ್ಕ್ ಪೋಸ್ಟ್‌ನಿಂದ ಉಲ್ಲೇಖಿಸಲಾಗಿದೆ.

“ಟೆಸ್ಲಾದ ಇಂಜಿನಿಯರಿಂಗ್ ಇರುವಂಥ ಹೆಚ್ಚಿನ ಬೇ ಏರಿಯಾಕ್ಕೆ ಪ್ರಯಾಣಿಸಿದರೆ ಖಾಲಿ ಇರುವ ನನ್ನ ಸ್ನೇಹಿತರ ಕೋಣೆಗಳಲ್ಲೇ ಮಲಗಿಕೊಳ್ಳುತ್ತೇನೆ,” ಎಂದು ಟೆಸ್ಲಾ ಸಿಇಒ ಹೇಳಿಕೊಂಡಿದ್ದಾರೆ. “ನನ್ನ ಬಳಿ ವಿಹಾರ ನೌಕೆ ಇಲ್ಲ, ನಾನು ರಜೆಯನ್ನು ತೆಗೆದುಕೊಳ್ಳುವುದಿಲ್ಲ,” ಅಂತಲೂ ಅವರು ತಿಳಿಸಿದ್ದಾರೆ. ಪ್ರಪಂಚದಾದ್ಯಂತ ಇರುವ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್‌ಗಳು ಖರ್ಚು ಮಾಡುವ ಹಣದ ಬಗ್ಗೆ ಕೇಳಿದ ಪ್ರಶ್ನೆಗೆ ಮಸ್ಕ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಆ ತೀರ್ಮಾನಕ್ಕೆ ಕಾರಣವಾಗುವ ಆಕ್ಸಿಯೋಮ್ಯಾಟಿಕ್ ನ್ಯೂನತೆಗಳಿವೆ ಎಂದು ನಾನು ಭಾವಿಸುತ್ತೇನೆ. ನಾನು ವೈಯಕ್ತಿಕ ಬಳಕೆಗಾಗಿ ವರ್ಷಕ್ಕೆ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದ್ದರೆ ಅದು ತುಂಬಾ ಸಮಸ್ಯೆ ಆಗಿರುತ್ತದೆ, ಆದರೆ ಅದು ಹಾಗಲ್ಲ,” ಎಂದು ಮಸ್ಕ್ ಹೇಳಿದ್ದಾರೆ. “ನನ್ನ ವೈಯಕ್ತಿಕ ಬಳಕೆ ಹೆಚ್ಚು ಎಂದು ಅಲ್ಲ, ಅದಕ್ಕೆ ಒಂದು ಅಪವಾದ ಅಂದರೆ ವಿಮಾನವಾಗಿದೆ. ನಾನು ವಿಮಾನವನ್ನು ಬಳಸದಿದ್ದರೆ ಕೆಲಸ ಮಾಡಲು ಕಡಿಮೆ ಸಮಯ ಇರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಮಸ್ಕ್ ಟ್ವೀಟ್​ ಮಾಡಿದಂತೆ, ತನ್ನ ಪ್ರಾಥಮಿಕ ನಿವಾಸವು ಸ್ಪೇಸ್‌ಎಕ್ಸ್‌ನಿಂದ ಯುಎಸ್​ಡಿ 50,000ಕ್ಕೆ ಬಾಡಿಗೆಗೆ ಪಡೆದದ್ದು. ಅದೇ ಟ್ವೀಟ್‌ನಲ್ಲಿ, ಬೇ ಏರಿಯಾದಲ್ಲಿ “ಈವೆಂಟ್‌ಗಳ ಮನೆ” ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಫೋರ್ಬ್ಸ್ ಪ್ರಕಾರ, ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯ 26,950 ಕೋಟಿ ಅಮೆರಿಕನ್ ಡಾಲರ್. ಸದ್ಯಕ್ಕೆ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ಟ್ವಿಟ್ಟರ್ ಖರೀದಿಸುವ ಪ್ರಸ್ತಾವ ಮುಂದಿಡುವ ಮೂಲಕ ಅವರು ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಈಗಾಗಲೇ ಟ್ವಿಟ್ಟರ್‌ನಲ್ಲಿ ಶೇ 9.1ರಷ್ಟು ಪಾಲನ್ನು ಹೊಂದಿರುವ ಅವರು, ಈ ಕಂಪೆನಿಯ ಎರಡನೇ ಅತಿದೊಡ್ಡ ಷೇರುದಾರರಾಗಿದ್ದಾರೆ. ಈ ವಾರದ ಆರಂಭದಲ್ಲಿ ಮಸ್ಕ್​ 43 ಶತಕೋಟಿ ಡಾಲರ್​ಗೆ ಟ್ವಿಟ್ಟರ್​ ಇಂಕ್. ಖರೀದಿಸಲು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Elon Musk: ಇನ್ನೆರಡು ವರ್ಷದಲ್ಲಿ ಎಲಾನ್ ಮಸ್ಕ್ ಆಸ್ತಿ 1 ಲಕ್ಷ ಕೋಟಿ ಯುಎಸ್​ಡಿ, ಅಂದರೆ 76 ಲಕ್ಷ ಕೋಟಿ ರೂ. ಅಂತಿದೆ ಈ ವರದಿ