ಆನ್‌ಲೈನ್ ಬ್ರೋಕರೇಜ್ ಸ್ಟಾರ್ಟ್ ಅಪ್ ಝೆರೋಧಾ (Zerodha) ಸಂಸ್ಥಾಪಕ-ಸಿಇಒ ನಿತಿನ್ ಕಾಮತ್ ಅವರು ಟ್ವಿಟರ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ ತಮಾಷೆಯ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಆರೋಗ್ಯಕರವಾಗಿ ಉಳಿಯುವ ಮತ್ತು ಬಾಡಿ ಮಾಸ್ ಇಂಡೆಕ್ಸ್ (BMI)ನಲ್ಲಿ ಉತ್ತಮ ತೂಕ ಹೊಂದಿರುವವರಿಗೆ ಬೋನಸ್ ಪಾವತಿಸುವುದಾಗಿ ಸ್ವಯಂ ಫಿಟ್‌ನೆಸ್ ಉತ್ಸಾಹಿಯಾದ ಅವರು ಏಪ್ರಿಲ್ 7, 2022ರಂದು ಘೋಷಿಸಿದ್ದಾರೆ. ಆರಂಭಿಕ ಟ್ವೀಟ್‌ನಲ್ಲಿ, “ನಾವು @zerodhaonlineನಲ್ಲಿ ಮೋಜಿನ ಆರೋಗ್ಯ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. BMI <25 ಹೊಂದಿರುವ ನಮ್ಮ ತಂಡದಲ್ಲಿ ಇರುವ ಯಾರಾದರೂ ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ. ನಮ್ಮ ತಂಡದ ಸರಾಸರಿ BMI 25.3 ಆಗಿದೆ ಮತ್ತು ನಾವು <24ಗೆ ತಲುಪಲು ಸಾಧ್ಯವಾದರೆ ಆಗಸ್ಟ್ನಲ್ಲಿ ಎಲ್ಲರಿಗೂ ಇನ್ನೊಂದು ಅರ್ಧ ತಿಂಗಳು ಬೋನಸ್ ಆಗಿ ಸಿಗುತ್ತದೆ. ಇತರ ಕಂಪೆನಿಗಳೊಂದಿಗೆ ಸ್ಪರ್ಧಿಸಲು ಇದರಿಂದ ಸಂಭ್ರಮ ಇರುತ್ತದೆ,” ಎಂದಿದ್ದಾರೆ.
ನ್ಯೂಸ್ 9 ಜತೆ ಮಾತನಾಡಿದ ಕಾಮತ್, “ಆರೋಗ್ಯಕರ ಜೀವನಶೈಲಿಯತ್ತ ಜನರನ್ನು ಪ್ರೇರೇಪಿಸುವ ಕಾರ್ಯಕ್ರಮವನ್ನು ನಾವು ನಡೆಸುತ್ತಿರುವುದು ಇದೇ ಮೊದಲಲ್ಲ. ಜನರು ಸರಿಯಾದ ದಿಕ್ಕಿನಲ್ಲಿ ಸಾಗುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಇದು ಕೇವಲ ಉದ್ಯೋಗಿಗಳಿಗೆ ಫಿಟ್ ಆಗಿರುವುದು ಮಾತ್ರವಲ್ಲ, ದಿನದ ಅಂತ್ಯದಲ್ಲಿ ಆರೋಗ್ಯವು ಎಲ್ಲಕ್ಕಿಂತ ಹೆಚ್ಚು ಪ್ರಾಧಾನ್ಯವನ್ನು ಪಡೆಯುತ್ತದೆ. ಇಲ್ಲಿನ ಕಲ್ಪನೆಯು ಜನರು ತಮ್ಮ ಆರೋಗ್ಯದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನೀವು ಹೇಳದಿದ್ದರೆ ಜನರು ಮರೆತುಬಿಡುತ್ತಾರೆ. ಕಳೆದ ವರ್ಷ ನಾವು ವರ್ಚುವಲ್ ಯೋಗ ತರಗತಿಗಳನ್ನು ನಡೆಸಿದ್ದೇವೆ. ಆರೋಗ್ಯವಂತ ವ್ಯಕ್ತಿಗೆ ಲಾಟರಿ ವ್ಯವಸ್ಥೆ ಮಾಡಿ, ಉದ್ಯೋಗಿಗಳೇ ಗುರಿ ನಿಗದಿ ಮಾಡಿಕೊಂಡು ತೂಕ ಇಳಿಸಿಕೊಂಡಿದ್ದಾರೆ. ನಾವು ನೌಕರರಿಗೆ 10 ಲಕ್ಷ ರೂಪಾಯಿ ನೀಡಿದ್ದೇವೆ,” ಎಂದು ಕಾಮತ್ ಹೇಳಿದ್ದಾರೆ.
ಆತ್ಮಾವಲೋಕನ ಮಾಡಿಕೊಳ್ಳುತ್ತಾ, ಬಹುಶಃ ಇದನ್ನು ಪೋಸ್ಟ್ ಮಾಡಬಾರದಿತ್ತು ಎಂದು ಹೇಳಿದ್ದಾರೆ. “ಆದರೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಕ್ಕೆ ಅರ್ಹರಾಗಿದ್ದಾರೆ. ಒಂದು ವರ್ಗದ ಜನರು ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಅವರು ಇಡೀ ವಿಷಯವನ್ನು ತಪ್ಪಾದ ಸಂದರ್ಭದಲ್ಲಿ ಮತ್ತು ಪ್ರತ್ಯೇಕವಾಗಿ ತೆಗೆದುಕೊಂಡಿದ್ದಾರೆ ಎಂದು ತೋರುತ್ತದೆ. ಈ ಸಮಯದಲ್ಲಿ ಮಾಡುತ್ತಿರುವುದು ಈಗಾಗಲೇ ಮಾಡಿರುವುದು ಹಾಗೂ ಮಾಡುತ್ತಿರುವುದಕ್ಕಿಂತ ಮೇಲ್ಮಟ್ಟದ ಆರೋಗ್ಯ ಕಾರ್ಯಕ್ರಮ,” ಎಂದು ಕ್ಯಾಥಮ್ ಹೇಳಿದ್ದಾರೆ. ತೂಕ ಇಳಿಕೆಯನ್ನು ಬಿಎಂಐ ಜತೆ ಹೋಲಿಕೆ ಮಾಡಬಾರದು ಎನ್ನುತ್ತಾರೆ.
ಬಿಎಂಐ ವಿಶ್ವಾದ್ಯಂತ ಪ್ರಮಾಣಿತ ಮಾನದಂಡ
ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡಾ.ಪಂಕಜ್ ಕುಮಾರ್ ಹನ್ಸ್ ಅವರು ಮಾತನಾಡಿ, ಬಿಎಂಐ ವಿಶ್ವಾದ್ಯಂತ ಪ್ರಮಾಣಿತ ಮಾನದಂಡವಾಗಿದ್ದು, ವ್ಯಕ್ತಿಯು ಅಪೌಷ್ಟಿಕತೆ ಅಥವಾ ಬೊಜ್ಜು ಹೊಂದಿದ್ದಾರೆಯೇ ಎಂಬುದನ್ನು ವೈದ್ಯರು ಪರಿಶೀಲಿಸುತ್ತಾರೆ. “ಆದರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ, ವ್ಯಕ್ತಿಯ ಆರೋಗ್ಯವನ್ನು ಪರೀಕ್ಷಿಸಲು ಬಿಎಂಐ ಏಕೈಕ ಮಾನದಂಡವಲ್ಲ. ಒಬ್ಬರು ಪರಿಶೀಲಿಸಬೇಕಾದ ಹಲವಾರು ಇತರ ಮಾನದಂಡಗಳಿವೆ. ಒಬ್ಬ ವ್ಯಕ್ತಿಯು 65 ಕೆಜಿ ತೂಕವನ್ನು ಹೊಂದಬಹುದು. ಆದರೆ ಬಹಳಷ್ಟು ಸ್ನಾಯುಗಳನ್ನು ಹೊಂದಿದ್ದರೆ ಆ ವ್ಯಕ್ತಿಯ ಬಿಎಂಐ ಹೆಚ್ಚಿನದಾಗಿರಬಹುದು. ಆದರೆ ಅದು ಆತ ಅಥವಾ ಆಕೆಯನ್ನು ಅಸ್ವಸ್ಥರನ್ನಾಗಿ ಮಾಡುವುದಿಲ್ಲ,” ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಫೋರ್ಟಿಸ್ ಆಸ್ಪತ್ರೆ ಮತ್ತು ಕಿಡ್ನಿ ಇನ್‌ಸ್ಟಿಟ್ಯೂಟ್‌ನ ಡಯೆಟಿಷಿಯನ್ ಸೋಹಿನಿ ಬ್ಯಾನರ್ಜಿ ಅವರು ಮಾತನಾಡಿ, ಬಿಎಂಐ ಕ್ಯಾಲ್ಕುಲೇಟರ್ ಎಂಬುದು ವೈದ್ಯರು ಅಥವಾ ಡಯೆಟಿಷಿಯನ್‌ಗೆ ವ್ಯಕ್ತಿಯು ಕಡಿಮೆ ತೂಕದವರೋ ಅಥವಾ ಬೊಜ್ಜು ಇದೆಯೇ ಎಂಬುದನ್ನು ಕಂಡುಹಿಡಿಯಲು ಎನ್ನುತ್ತಾರೆ. “ಬಿಎಂಐ ಎನ್ನುವುದು ವ್ಯಕ್ತಿಯ ತೂಕ ಅಥವಾ ಸ್ಥೂಲಕಾಯತೆ ಪರೀಕ್ಷಿಸಲು ಕೇವಲ ಒಂದು ಮಾನದಂಡವಾಗಿದೆ. ಅದರ ಆಧಾರದಲ್ಲಿ ಆಹಾರ ತಜ್ಞರು ಅಥವಾ ವೈದ್ಯರು ಆಹಾರ ಯೋಜನೆಯನ್ನು ನೀಡುತ್ತಾರೆ. ಆ ಅರ್ಥದಲ್ಲಿ ಸಾಮಾನ್ಯ ವ್ಯಕ್ತಿಗೆ ಬಿಎಂಐ ಎಂಬುದು ತೂಕ ಹೆಚ್ಚಳ ಅಥವಾ ನಷ್ಟಕ್ಕೆ ಮಾನದಂಡ ಅಲ್ಲ,” ಎಂದು ಹೇಳಿದ್ದಾರೆ.
ಪುರುಷ ಮತ್ತು ಮಹಿಳೆಯ ದೇಹದ ರಚನೆಯು ವಿಭಿನ್ನ
ಬ್ಯಾನರ್ಜಿ ವಿವರಿಸುವಂತೆ, ಪುರುಷರು ಮತ್ತು ಮಹಿಳೆಯರು ತೂಕದ ಸಮಸ್ಯೆಗಳೊಂದಿಗೆ ವಿಭಿನ್ನವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ತೂಕ ನಷ್ಟದ ಪ್ಲಾನಿಂಗ್ ಎಲ್ಲರಿಗೂ ಸರಿಹೊಂದುವುದಕ್ಕಿಂತ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರಬೇಕು ಎಂದು ಅವರು ಹೇಳುತ್ತಾರೆ. “ಪುರುಷ ಮತ್ತು ಮಹಿಳೆಯ ದೇಹದ ರಚನೆಯು ವಿಭಿನ್ನವಾಗಿದೆ. ಇಬ್ಬರ ತೂಕ ನಷ್ಟವೂ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಸಂಯೋಜನೆ ಮತ್ತು ದೇಹದ ಆಕಾರವನ್ನು ಹೊಂದಿರುವುದರಿಂದ ತೂಕ ನಷ್ಟ ಯೋಜನೆಯು ವಿಭಿನ್ನವಾಗಿರಬೇಕು. ಅವರ ತೂಕ ನಷ್ಟವೂ ಸಹ ವಿಭಿನ್ನವಾಗಿರುತ್ತದೆ,” ಎಂದು ಬ್ಯಾನರ್ಜಿ ಹೇಳಿದ್ದಾರೆ. “ನೀವು ಹೆಚ್ಚಿನ/ಕಡಿಮೆ ಬಿಎಂಐ ಅನ್ನು ಬೋನಸ್‌ನೊಂದಿಗೆ ಸಮೀಕರಿಸುವ ಯಾವುದೇ ಕಾರ್ಯಕ್ರಮ ಖಂಡಿತವಾಗಿಯೂ ತಪ್ಪು. ಕೆಲವು ಜನರು ತಮ್ಮ ತೂಕದ ಸಮಸ್ಯೆಗಳನ್ನು ಎದುರಿಸಬಹುದು. ಇದಕ್ಕೆ ಅನಾರೋಗ್ಯಕರ ಆಹಾರ ಪದ್ಧತಿಯ ಜೊತೆಗೆ ಹಲವಾರು ಇತರ ಅಂಶಗಳೂ ಕಾರಣಗಳಾಗಿರಬಹುದು. ಅವರ ತೂಕ ಹೆಚ್ಚಾಗಬಹುದು, ಇತರ ಆರೋಗ್ಯ ಪರಿಸ್ಥಿತಿಗಳು ಕಾರಣ ಇರಬಹುದು; ಅವರನ್ನು ಸಂಕೋಚಕ್ಕೆ ದೂಡುವುದು ತುಂಬಾ ತಪ್ಪು,” ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
“ಅಲ್ಲದೆ, ಬಿಎಂಐ ತುಂಬ ಕಡಿಮೆಯಿದ್ದರೆ ಆ ವ್ಯಕ್ತಿಯು ಆರೋಗ್ಯವಾಗಿರುವುದಿಲ್ಲ. ತೂಕ-ಎತ್ತರದ ಅನುಪಾತ ಹೊಂದಿಕೆ ಆಗದಿದ್ದರೆ ಆ ವ್ಯಕ್ತಿಯು ಆರೋಗ್ಯವಾಗಿರುವುದಿಲ್ಲ; ವ್ಯಕ್ತಿಯು ಅಪೌಷ್ಟಿಕತೆಯಿಂದ ಕೂಡಿರಬಹುದು,” ಎಂದು ಡಾ ಹನ್ಸ್ ಹೇಳುತ್ತಾರೆ. ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಉತ್ತಮ ಮಾನದಂಡ ಯಾವುದು? ವ್ಯಕ್ತಿಯು ಆರೋಗ್ಯವಾಗಿದ್ದಾರೆಯೇ ಎಂದು ಪರೀಕ್ಷಿಸಲು ವೈದ್ಯರು ಹಲವಾರು ವಿಷಯಗಳನ್ನು ನೋಡುತ್ತಾರೆ ಎಂದು ಡಾ ಹನ್ಸ್ ಹೇಳುತ್ತಾರೆ.
ಆರೋಗ್ಯವಂತರು ಯಾರು ತಿಳಿಯುವುದು ಹೇಗೆ?
“ಒಬ್ಬ ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಿರ್ವಹಿಸಲು ಸಾಧ್ಯವಾದರೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸದೆ 45 ನಿಮಿಷಗಳ ಕಾಲ ನಡೆದಾಡಲು ಸಾಧ್ಯವಾದರೆ ಅವರು ಆರೋಗ್ಯವಂತರು. ಒಂದು ಉದಾಹರಣೆ ತೆಗೆದುಕೊಳ್ಳಿ. ಹೆಚ್ಚಿನ ತಾಯಂದಿರು ನನ್ನ ಮಗ ದುರ್ಬಲ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಹೌದಾ ಎಂದು ಒಂದು ಸರಳವಾದ ಪ್ರಶ್ನೆಯನ್ನು ಕೇಳಿ: ಮಗು ಆಟವಾಡುತ್ತಿಲ್ಲವೇ? ಮಗುವು ಸಕ್ರಿಯವಾಗಿರುವಂತೆಯೇ ಎಲ್ಲವೂ ಒಳ್ಳೆಯದು. ಹೆಚ್ಚಿನ ಬಿಎಂಐ ಇದ್ದರೂ ವ್ಯಕ್ತಿಯು ಸಕ್ರಿಯವಾಗಿದ್ದರೆ ನಾವು ಬಿಎಂಐ ಅನ್ನು ಬೆನ್ನಟ್ಟುವುದಿಲ್ಲ,” ಎಂದು ಡಾ ಹನ್ಸ್ ಹೇಳಿದ್ದಾರೆ.
ವ್ಯಕ್ತಿಯು ಆರೋಗ್ಯವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಸರಿಯಾದ ಮಾರ್ಗವನ್ನು ಎತ್ತರ ಮತ್ತು ತೂಕದ ಆಧಾರದ ಮೇಲೆ ಮಾಡಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿಯ ಎತ್ತರವು 150 ಸೆಂ.ಮೀ ಆಗಿದ್ದರೆ ಆದರ್ಶ ತೂಕವು 45-56 ಕೇಜಿ (ಪ್ಲಸ್-ಮೈನಸ್ 5 ಕೆಜಿ) ಆಗಿರಬೇಕು. “ಅಂತಹ ಪರಿಸ್ಥಿತಿಯಲ್ಲಿ, ಈ ತೂಕವು ಆದರ್ಶ ಬಿಎಂಐ ಒಳಗೆ ಬರುವುದಿಲ್ಲ. ಆದರೆ ಇದು ವ್ಯಕ್ತಿಯನ್ನು ಆರೋಗ್ಯಕರ ಅಥವಾ ಅನಾರೋಗ್ಯಕರವನ್ನಾಗಿ ಮಾಡುವುದಿಲ್ಲ,” ಎಂದು ಬ್ಯಾನರ್ಜಿ ಹೇಳಿದ್ದಾರೆ. ಆರೋಗ್ಯವಂತ ಉದ್ಯೋಗಿಗಳನ್ನು ಹುಟ್ಟುಹಾಕಲು ಉತ್ತಮ ಮಾರ್ಗವೆಂದರೆ ಆರೋಗ್ಯಕರ ಆಹಾರ ಪದ್ಧತಿಯ ಕುರಿತು ಮಾತುಕತೆ ನಡೆಸುವುದು, ಜೀವನಶೈಲಿಗೆ ಸಂಬಂಧಿಸಿದ ಹಲವಾರು ರೋಗಗಳನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ ಎಂದು ಅವರು ಹೇಳಿದ್ದಾರೆ. “ಒಬ್ಬರು ಜಿಮ್‌ಗೆ ಸೇರಲು ಉದ್ಯೋಗಿಗಳನ್ನು ಪ್ರೋತ್ಸಾಹಿಸಬಹುದು ಮತ್ತು ಆದರ್ಶ ಬಿಎಂಐಗಾಗಿ ಅವರಿಗೆ ಬೋನಸ್ ನೀಡುವ ಬದಲು ಜಿಮ್ ಸಬ್ಸ್ಕ್ರಿಪ್ಷನ್ಗೆ ಪಾವತಿಸಬಹುದು,” ಎಂದಿದ್ದಾರೆ.
ಇದನ್ನೂ ಓದಿ: Apple Inc. Stock Bonus: ಆಪಲ್ ಇಂಕ್ ಸಿಬ್ಬಂದಿಗೆ 75 ಲಕ್ಷದಿಂದ 1.5 ಕೋಟಿ ರೂಪಾಯಿ ಸ್ಟಾಕ್ ಬೋನಸ್