ಮಾಜಿ ಮಾಡಲ್ ಗ್ರೇಷಿಯಾಳನ್ನು ಮದುವೆಯಾದ ಜೊಮಾಟೋ ಸಿಇಒ ದೀಪಿಂದರ್ ಗೋಯಲ್
Zomato CEO marries ex Mexican model: ಜೋಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು ಮೆಕ್ಸಿಕನ್ನ ಮಾಜಿ ಮಾಡಲ್ ಗ್ರೇಷಿಯಾ ಮುನೋಜ್ ಎಂಬಾಕೆಯನ್ನು ಮದುವೆಯಾಗಿರುವ ಸುದ್ದಿ ಇದೆ. ಜನವರಿ ಅಥವಾ ಫೆಬ್ರುವರಿಯಲ್ಲಿ ಇವರ ಮದುವೆ ಜರುಗಿದ್ದು, ಫೆಬ್ರುವರಿಯಲ್ಲಿ ಹನಿಮೂನ್ ಮುಗಿಸಿ ಭಾರತಕ್ಕೆ ಇವರು ವಾಪಸ್ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿನ ಸುದ್ದಿಗಳು ಹೇಳುತ್ತಿವೆ. ಆದರೆ, ಇಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಒಮ್ಮೆಯೂ ಕೂಡ ಜೊತೆಗಿರುವ ಫೋಟೋ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ನವದೆಹಲಿ, ಮಾರ್ಚ್ 22: ಸಸ್ಯಾಹಾರವನ್ನು (Zomato Pure Veg Fleet) ಪ್ರತ್ಯೇಕವಾಗಿ ಸರಬರಾಜು ಮಾಡುವ ಸೌಲಭ್ಯ ಘೋಷಿಸಿ ವಿವಾದಕ್ಕೆ ಕಾರಣವಾಗಿದ್ದ ಆನ್ಲೈನ್ ಫೂಡ್ ಬುಕಿಂಗ್ ಪ್ಲಾಟ್ಫಾರ್ಮ್ ಜೊಮಾಟೋದ ಸಿಇಒ ದೀಪಿಂದರ್ ಗೋಯಲ್ (Deepinder Goyal) ಎರಡನೇ ಮದುವೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಗೋಯಲ್ ಅವರು ಮೆಕ್ಸಿಕೋದ ಗ್ರೇಷಿಯಾ ಮುನೋಜ್ ಎಂಬಾಕೆಯನ್ನು ವರಿಸಿದ್ದಾರೆ. ಒಂದು ತಿಂಗಳ ಹಿಂದೆ ಈ ವಿವಾಹ ಜರುಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಿಂದೆ ಮಾಡಲ್ ಕ್ಷೇತ್ರದಲ್ಲಿ ಇದ್ದ ಗ್ರೇಷಿಯಾ ಮುನೋಜ್ (Grecia Munoz) ಈಗ ತನ್ನದೇ ಲಕ್ಷುರಿ ಉತ್ಪನ್ನಗಳ ಸ್ಟಾರ್ಟಪ್ವೊಂದನ್ನು ಆರಂಭಿಸುವ ಹಾದಿಯಲ್ಲಿದ್ದಾರೆ.
ದೀಪಿಂದರ್ ಗೋಯಲ್ ಆಗಲೀ ಗ್ರೇಷಿಯಾ ಮುನೋಜ್ ಆಗಲೀ ವಿವಾಹದ ಸಂಗತಿಯನ್ನು ಬಹಿರಂಗಪಡಿಸಿಲ್ಲ. ಇಬ್ಬರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ ಒಮ್ಮೆಯೂ ಜೊತೆಗಿದ್ದ ಫೋಟೋಗಳನ್ನು ಹಂಚಿಕೊಂಡಿಲ್ಲ. ಮಾಜಿ ಮಾಡಲ್ ಆಗಿರುವ ಗ್ರೇಷಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಲಿಂಗ್ ಫೋಟೋಶೂಟ್ನ ಚಿತ್ರಗಳನ್ನು ಇನ್ಸ್ಟಾಗೆ ಹಂಚಿದ್ದಾರೆಯೇ ಹೊರತು ಮದುವೆಯ ಸುಳಿವು ನೀಡುವ ಯಾವ ಫೋಟೋವೂ ಇಲ್ಲ. ಗೋಯಲ್ ಜೊತೆಗಿನ ಒಂದೂ ಫೋಟೋ ಕೂಡ ಇಲ್ಲ. ಆದರೆ, ತಮ್ಮ ಇನ್ಸ್ಟಾಗ್ರಾಮ್ನ ಬಯೋದಲ್ಲಿ ಅವರು ಭಾರತದಲ್ಲಿನ ಮನೆಯಲ್ಲಿ ಇರುವುದಾಗಿ ಮಾತ್ರ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿರೋಧದ ಬಳಿಕ ಪ್ಯೂರ್ ವೆಜ್ ಡೆಲಿವರಿ ಹಿಂಪಡೆಯಲು ಜೊಮಾಟೋ ನಿರ್ಧಾರ; ಪ್ರತ್ಯೇಕ ಹಸಿರು ಸಮವಸ್ತ್ರವೂ ಇಲ್ಲ
ಮಾಧ್ಯಮಗಳಲ್ಲಿ ಬಂದಿರುವ ವರದಿ ಪ್ರಕಾರ ಜನವರಿ ಅಥವಾ ಫೆಬ್ರುವರಿಯಲ್ಲಿ ಅವರ ಮದುವೆ ಜರುಗಿದೆ. ಫೆಬ್ರುವರಿಯಲ್ಲಿ ಈ ಜೋಡಿ ಹನಿಮೂನ್ ಮುಗಿಸಿ ಭಾರತಕ್ಕೆ ವಾಪಸ್ಸಾಗಿದ್ದಾರೆ.
ಈ ಸುದ್ದಿ ನಿಜವೇ ಆಗಿದ್ದರೆ 41 ವರ್ಷದ ದೀಪಿಂದರ್ ಗೋಯಲ್ ಅವರಿಗೆ ಇದು ಎರಡನೇ ಮದುವೆಯಾಗುತ್ತದೆ. ಐಐಟಿಯಲ್ಲಿ ಇವರಿಗೆ ಸಹಪಾಠಿಯಾಗಿದ್ದ ಕಾಂಚಲ್ ಜೋಷಿ ಅವರನ್ನು ಈ ಹಿಂದೆ ಮದುವೆ ಆಗಿದ್ದರು.
ಇದನ್ನೂ ಓದಿ: ಮೈಕ್ರೋಸಾಫ್ಟ್ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ
ದೀಪಿಂದರ್ ಗೋಯಲ್ ಮತ್ತು ಪಂಕಜ್ ಚಡ್ಡಾ ಸೇರಿ 2008ರಲ್ಲಿ ಸ್ಥಾಪಿಸಿದ್ದ ಜೊಮಾಟೋ ಬಹಳ ವೇಗದಲ್ಲಿ ಬೆಳೆದ ಸ್ಟಾರ್ಟಪ್ ಆಗಿದೆ. ಷೇರು ಮಾರುಕಟ್ಟೆಗೆ ಮೂರು ವರ್ಷಗಳ ಹಿಂದೆ ಲಿಸ್ಟ್ ಆಗಿದೆ. ಇದಾದ ಬಳಿಕ ದೀಪಿಂದರ್ ಗೋಯಲ್ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ಗಳ ಸಾಲಿಗೆ ಸೇರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ