ಆನೇಕಲ್, ನವೆಂಬರ್ 02: ಆಕೆ ಎಂಟು ತಿಂಗಳ ತುಂಬು ಗರ್ಭಿಣಿ ಮಹಿಳೆ (pregnant woman). ಹೊಟ್ಟೆಯಲ್ಲಿದ್ದ ಮಗುವಿಗೆ ಹೃದಯಸಂಬಂಧಿ ಕಾಯಿಲೆ ಇದೇ ಎಂದು ತಿಳಿದು ಕರುಳಿನ ಕುಡಿ ಉಳಿಸಿಕೊಳ್ಳಲು ದೂರದ ಊರಿನಿಂದ ಓಡೋಡಿ ಬಂದಿದ್ದಳು. ಪರಿಚಯಸ್ಥ ಮಹಿಳೆ ಜೊತೆಗೆ ಆಸ್ಪತ್ರೆಗೆಂದು ಹೆದ್ದಾರಿ ದಾಟಿ ಹೋಗುವಾಗ ಯಮಸ್ವರೂಪಿಯಂತೆ ಬಂದ ಲಾರಿಯೊಂದು ಒಡಲಿನಲ್ಲಿದ್ದ ಕಂದಮ್ಮನ ಜೊತೆಗೆ ಇಬ್ಬರನ್ನ ಬಲಿ ಪಡೆದಿರುವಂತಹ ದಾರುಣ ಘಟನೆಯೊಂದು ನಡೆದಿದೆ.
ಬೆಂಗಳೂರು- ಹೊಸೂರು ರಾಷ್ಟೀಯ ಹೆದ್ದಾರಿ 44 ರಲ್ಲಿನ ಬೊಮ್ಮಸಂದ್ರ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಕಂದಮ್ಮ ಕೂಡ ಅಸುನೀಗಿದೆ. ಎಂಟು ತಿಂಗಳ ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಮೃತ ದುರ್ದೈವಿಗಳು.
ಆಂಧ್ರ ಮೂಲದ ಮದನಪಲ್ಲಿ ನಿವಾಸಿಯಾಗಿರುವ ರುಕಿಯಾ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವಿಗೆ ಹೃದಯದಲ್ಲಿ ರಂಧ್ರ ಇರುವುದು ಗೊತ್ತಾಗಿತ್ತು. ಹೊಟ್ಟೆಯಲ್ಲಿರುವ ಕರುಳಿನ ಕುಡಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಹೆಚ್ಚಿನ ಚಿಕಿತ್ಸೆಗಾಗಿ ಮದನಪಲ್ಲಿಯಿಂದ ತನ್ನ ಅಕ್ಕ ರಾಬಿಯಾ ಜೊತೆಗೆ ಬಂದಿದ್ದರು. ವರ್ತೂರಿನ ಪರಿಚಯಸ್ಥರಾದ ಲಕ್ಷ್ಮಮ್ಮ ಜೊತೆಗೆ ಬೊಮ್ಮಸಂದ್ರಕ್ಕೆ ಬಂದಿದ್ದರು.
ಇದನ್ನೂ ಓದಿ: ಹಾಸನ: ಹಾವು ಕಚ್ಚಿ ಯುವಕ ಸಾವು; ಕೆಣಕಿದವನ ಮೇಲೆ ಸೇಡು ತೀರಿಸಿಕೊಂಡಿತಾ ನಾಗರಹಾವು?
ಎಂಟು ತಿಂಗಳು ಗರ್ಭಿಣಿಯಾದ್ದರಿಂದ ಸ್ಕೈವಾಕ್ ಹತ್ತಲಾಗದೆ ಬಸ್ ಇಳಿದವರೇ ನೇರ ಹೆದ್ದಾರಿ ದಾಟಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಹೋಗಲು ಮುಂದಾಗಿದ್ದರು. ಈ ವೇಳೆ ಬೆಂಗಳೂರಿನ ಕಡೆಯಿಂದ ಅತ್ತಿಬೆಲೆ ಮಾರ್ಗವಾಗಿ ಬಂದ ಲಾರಿಯೊಂದು ಹೆದ್ದಾರಿ ದಾಟುತ್ತಿದ್ದ ಗರ್ಭಿಣಿ ಸೇರಿದಂತೆ ಜೊತೆಯಲ್ಲಿ ಬಂದಿದ್ದ ಪರಿಚಯಸ್ಥ ಮಹಿಳೆಯ ಮೇಲೆಯೂ ಲಾರಿ ಹರಿದು ಎರಡು ದೇಹಗಳು ಛಿದ್ರ ಛಿದ್ರಗೊಂಡಿವೆ.
ಆಂಧ್ರ ಮೂಲದ ಮದನಪಲ್ಲಿಯ ರುಕಿಯಾಗೆ ಮದುವೆಯಾಗಿ ಹತ್ತು ವರ್ಷದ ಬಳಿಕ ಗರ್ಭಿಣಿಯಾಗಿದ್ದಳು. ಇದರಿಂದ ಕುಟುಂಬದಲ್ಲಿಯೂ ಸಹ ಸಂತೋಷ ಮನೆ ಮಾಡಿತ್ತು. ಆಸ್ಪತ್ರೆಗೆ ಸ್ಕ್ಯಾನಿಂಗ್ಗೆಂದು ಹೋದಾಗ ಹೊಟ್ಟೆಯಲ್ಲಿರುವ ಕಂದಮ್ಮನ ಹೃದಯದಲ್ಲಿ ರಂಧ್ರವೊಂದು ಇರುವುದು ತಿಳಿದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸೆಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದರು.
ಇದನ್ನೂ ಓದಿ: ಬ್ಯಾಂಕ್ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು: ಕೆವಿಜಿ ಬ್ಯಾಂಕ್ ಮ್ಯಾನೇಜರ್ ಬಂಧನ
ವರ್ತೂರಿನಲ್ಲಿನ ರುಕಿಯಾ ಚಿಕ್ಕಪ್ಪನ ಮನೆಗೆ ನಿನ್ನೇಯ ದಿನ ಸಂಜೆ ರುಕಿಯಾ ಹಾಗೂ ಆಕೆಯ ಅಕ್ಕ ರಾಬಿಯಾ ಬಂದಿದ್ದರು. ಚಿಕ್ಕಪ್ಪನ ಮನೆಯ ಪಕ್ಕದ ಮನೆ ನಿವಾಸಿ ಲಕ್ಷ್ಮಮ್ಮ ಜೊತೆಗೆ ಇಂದು ಬೆಳಿಗ್ಗೆ ಆಸ್ಪತ್ರೆಗೆ ಬರುವಾಗ ಇದೊಂದು ದುರ್ಘಟನೆ ನಡೆದಿದೆ. ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗವೇ ಈ ಅಪಘಾತ ನಡೆದಿದ್ದು, ಹೆದ್ದಾರಿ ಪ್ರಾಧಿಕಾರದಿಂದ ಆಸ್ಪತ್ರೆಯ ಸ್ಥಳದಲ್ಲಿ ಲಿಫ್ಟ್ ವ್ಯವಸ್ಥೆ ಮಾಡದೆ ಅವೈಜ್ಞಾನಿಕ ಸ್ಕೈವಾಕ್ ನಿರ್ಮಾಣ ಮಾಡಿರುವುದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಪ್ರತಿ ನಿತ್ಯ ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯ ವಾಹನಗಳು ಓಡಾಡುತ್ತವೆ. ಬೊಮ್ಮಸಂದ್ರ ಸಮೀಪ ಹೆದ್ದಾರಿ ಪ್ರಾಧಿಕಾರದಿಂದ ಅವೈಜ್ಞಾನಿಕ ಸ್ಕೈವಾಕ್ ನಿರ್ಮಾಣ ಮಾಡಿದ್ದು, ಲಿಫ್ಟ್ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ಸಮಸ್ಯೆ ಎದುರಾಗಿದೆ. ಇದೇ ರೀತಿ ಸ್ಕೈವಾಕ್ ಮೆಟ್ಟಿಲು ಹತ್ತಲು ಸಾಧ್ಯವಾಗದೆ ರಸ್ತೆ ದಾಟಲು ಹೋದ ಮಹಿಳೆಯರಿಬ್ಬರು ಹಾಗೂ ಪ್ರಪಂಚವನ್ನೇ ನೋಡದ ಮಗು ತಾಯಿ ಗರ್ಭದಲ್ಲೇ ಮೃತಪಟ್ಟಿದೆ. ಸದ್ಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.