ಕೊಲೆಯನ್ನೂ ಮೀರಿಸೋ ರೀತಿಯಲ್ಲಿ ವ್ಯಕ್ತಿ ಸೂಸೈಡ್; ಚಾಕುವಿನಿಂದ ಎರ್ರಾಬಿರ್ರಿ ಇರಿದುಕೊಂಡು ಆತ್ಮಹತ್ಯೆ
ಪ್ರಭಾಕರ್ ಗುಪ್ತ (32) ಎಂಬಾತ ದೇಹದ ವಿವಿಧ ಭಾಗಕ್ಕೆ ತಾನೆ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಾಜರಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು: ನಗರದ ವಾಜರಹಳ್ಳಿಯಲ್ಲಿ ಮತ್ತೊಂದು ಡೆಡ್ಲಿ ಸೂಸೈಡ್ ನಡೆದಿದೆ. ಪ್ರಭಾಕರ್ ಗುಪ್ತ (32) ಎಂಬಾತ ದೇಹದ ವಿವಿಧ ಭಾಗಕ್ಕೆ ತಾನೆ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಉತ್ತರ ಪ್ರದೇಶದವನಾದ ಪ್ರಭಾಕರ್, ಪತ್ನಿ ಹಾಗೂ ಮಕ್ಕಳ ಜೊತೆ ವಾಜರಹಳ್ಳಿಯಲ್ಲಿ ವಾಸವಾಗಿದ್ದು, ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ. ಈ ಮಧ್ಯೆ ಪಡೆದ ಸಾಲ ತೀರಿಸಲಾಗದೆ, ಪತ್ನಿ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮನೆಯಲ್ಲೇ ಚಾಕುವಿನಿಂದ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕಾಗಮಿಸಿದ ತಲಘಟ್ಟಪುರ ಪೊಲೀಸರು ಯುಡಿಆರ್ ಪ್ರಕರಣ ದಾಖಲು ಮಾಡಿದ್ದಾರೆ.
ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ
ಮೈಸೂರು: ಮಚ್ಚಿನಿಂದ ಕೊಚ್ಚಿ ಯುವಕನನ್ನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ. ಮಹೇಶ್ ಎಂಬಾತ ಕೊಲೆಯಾದ ಯುವಕ, ಮಳೆಯೂರು ಗ್ರಾಮದ ಆರೋಪಿ ಗಿರೀಶ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಹೇಶ್ ಹಾಗೂ ಗಿರೀಶ್ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಗಿರೀಶ್ ಮಚ್ಚಿನಿಂದ ತಲೆಗೆ ಹೊಡೆದಿದ್ದಾನೆ. ಹಲ್ಲೆಗೊಳಗಾಗಿ ಕುಸಿದು ಬಿದ್ದ ಮಹೇಶ್ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಸಾವನ್ನಪ್ಪಿದ್ದಾನೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಓಡಿ ಹೋದ ಪ್ರೇಮಿಗಳ ಕುಟುಂಬದ ನಡುವೆ ಗಲಾಟೆ; ನ್ಯಾಯ ಪಂಚಾಯ್ತಿ ಮಾಡಲು ಹೋಗಿ ಕೊಲೆಯಾದ
ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು ಮದುವೆಯಾಗಿದ್ದ ಪ್ರಕರಣ; ಅಪರಾಧಿಗಳಿಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ
ಚಾಮರಾಜನಗರ: 2018 ರಲ್ಲಿ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರಚಂಗೂರು ತಾಲೂಕಿನ ಇಬ್ಬರು ಅಪರಾಧಿಗಳಿಗೆ ಚಾಮರಾಜನಗರ ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ ನೊಂದ ಬಾಲಕಿಗೆ ಕಾನೂನುಸೇವಾ ಪ್ರಾಧಿಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಮಗ ಶರಣ್ ರಾಜ್ ಹಾಗೂ ತಾಯಿ ಸೆಲ್ವಿ ಎಂಬ ಅಪರಾಧಿಗಳಿಗೆ ಶಿಕ್ಷೆ ನೀಡಲಾಗಿದೆ.
2018 ರಲ್ಲಿ ಹನೂರು ತಾಲೂಕಿನ 14 ವರ್ಷದ ಬಾಲಕಿಯನ್ನು ಶರಣ್ ರಾಜ್ ಹಾಗೂ ಈತನ ತಾಯಿ ಸೆಲ್ವಿ ಬಲವಂತವಾಗಿ ಕರೆದೊಯ್ದಿದ್ದರು. ಈ ವೇಳೆ ಬಾಲಕಿಯ ಇಷ್ಟಕ್ಕೆ ವಿರುದ್ದವಾಗಿ ಅತ್ಯಾಚಾರ ಎಸಗಿದ್ದ ಶರಣ್‌ರಾಜ್ ವಿರುದ್ದ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:36 am, Sun, 5 March 23