ಹಾಡಹಗಲೇ ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಕೊಲೆ! ಅನುಮಾನಾಸ್ಪದ ಓರ್ವ ವ್ಯಕ್ತಿ ಅರೆಸ್ಟ್
ಆತ ಗ್ರಾಮ ಪಂಚಾಯ್ತಿ ಸದಸ್ಯ.ವಯಸ್ಸು ಚಿಕ್ಕದಿದ್ರು ಊರಿನಲ್ಲಿ ಒಳ್ಳೆಯ ಹೆಸರು ಗಳಿಸಿದ್ದ.ಗ್ರಾಮದ ಸಮಸ್ಯೆ ಏನೇ ಇದ್ರು ಪರಿಹರಿಸುತ್ತಾ ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿದ್ದ ಆತನ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.ನಡು ರಸ್ತೆಯಲ್ಲಿ ಬರ್ಬರವಾಗಿ ಹಾಡಹಗಲೇ ಕೊಲೆಯಾಗಿ ಹೋಗಿದ್ದಾನೆ ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ನೋಡಿ.

ಕೋಲಾರ, ಅ.22: ಹಾಡಹಗಲೇ ಗ್ರಾಮ ಪಂಚಾಯತಿ ಸದಸ್ಯ(Member)ನನ್ನು ರಸ್ತೆಯಲ್ಲೇ ಬರ್ಬರವಾಗಿ ಕೊಲೆ ಮಾಡಲಾದ ಘಟನೆ ಕೋಲಾರ(Kolar) ಜಿಲ್ಲೆಯ ಮಾಲೂರು(Malur) ತಾಲೂಕಿನ ಕೋಡಿಹಳ್ಳಿ ಕ್ರಾಸ್ ನ ಬಳಿ ನಡೆದಿದೆ. ಅನಿಲ್ ಕುಮಾರ್ (38) ಮೃತ ರ್ದುದೈವಿ. ಮಾಲೂರು ತಾಲೂಕಿನ ಮೀಣಸಂದ್ರ ಗ್ರಾಮದವನಾಗಿರುವ ಅನಿಲ್, ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ. ವಯಸ್ಸಿನ್ನು ಚಿಕ್ಕದಾದರೂ ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ. ಮಾಲೂರು ಶಾಸಕ ಕೆ.ವೈ ನಂಜೇಗೌಡ ಆಪ್ತನಾಗಿದ್ದ ಅನಿಲ್, ಗ್ರಾಮದ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡುವ ಮೂಲಕ ಗ್ರಾಮದಲ್ಲಿದ ಕೆಲ ರಾಜಕೀಯ ವಿರೋಧಿಗಳ ಕೋಪಕ್ಕೆ ಕಾರಣವಾಗಿದ್ದ.
ನಿನ್ನೆ(ಅ.21) ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಾಲೂರು ಪಟ್ಟಣದ ಕಡೆಗೆ ಅನಿಲ್ ಬರುವಾಗ ಹಿಂಬಾಲಿಸಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಅನಿಲ್ ತಲೆಗೆ ಮಚ್ಚಿನಿಂದ ಹೊಡೆದು ಕೊಚ್ಚಿ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಕೋಲಾರ-ಹೊಸೂರು ಹೈವೇ ಆಗಿರುವುದರಿಂದ ಎಲ್ಲಿ ಜನ ಸೆರುತ್ತಾರೋ ಎಂದು ಗಾಬರಿಗೊಂಡ ದುಷ್ಕರ್ಮಿಗಳು, ಕೊಲೆಗೆ ಬಳಸಿದ್ದ ಮಚ್ಚನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ವಿಷಯ ತಿಳಿದ ಕೂಡಲೇ ಕೊಲೆ ನಡೆದ ಸ್ಥಳಕ್ಕೆ ಬಂದ ಕೋಲಾರ ಎಸ್ಪಿ ನಾರಾಯಣ್ ಹಾಗೂ ಮಾಲೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನುಮಾನಾಸ್ಪದ ಓರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:Kalaburagi News: ಮಾರಕಾಸ್ತ್ರದಿಂದ ಕೊಚ್ಚಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಬರ್ಬರ ಹತ್ಯೆ
ಕೊಲೆಯ ಹಿಂದೆ ನಾನಾ ಕಾರಣಗಳು
ಇನ್ನು ಅನಿಲ್ನ ಕೊಲೆಯ ಹಿಂದೆ ನಾನಾ ಕಾರಣಗಳು ಕೇಳಿ ಬರುತ್ತಿದೆ. ಇಡೀ ಸಂಸಾರದ ಹೊಣೆಯನ್ನು ಹೊತ್ತಿದ್ದ ಅನಿಲ್ ಕುಟುಂಬಕ್ಕೂ ಗ್ರಾಮದ ಒಂದು ಕುಟುಂಬಕ್ಕೂ ಆಗಾಗ್ಗೆ ಜಗಳ ಆಗುತ್ತಿತ್ತಂತೆ.ಇದರ ಜೊತೆಗೆ ಮೊನ್ನೆ ನಡೆದ ಗಣೇಶ ಹಬ್ಬದ ದಿನ ಗ್ರಾಮದಲ್ಲಿ ಅದ್ದೂರಿಯಾಗಿ ಆರ್ಕೆಸ್ಟ್ರ ಆಯೋಜನೆ ಮಾಡಿದ್ದ ವೇಳೆ ಅನಿಲ್ ಹಾಗೂ ಗ್ರಾಮದ ಕೆಲವರ ನಡುವೆ ಗಲಾಟೆ ಆಗಿತ್ತಂತೆ. ಇವೆಲ್ಲದರ ಮಧ್ಯೆ ಅನಿಲ್ ಕೊಲೆ ಆಗುವ ಕೆಲ ಹೊತ್ತಿನ ಹಿಂದೆಯಷ್ಟೇ ಸಾಕಷ್ಟು ವರ್ಷಗಳಿಂದ ಮಾತನಾಡದೆ ಇದ್ದ ಓರ್ವ ವ್ಯಕ್ತಿ, ಅನಿಲ್ ಜೊತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಈ ವೇಳೆ ಬೈಕ್ನಲ್ಲಿ ಬಂದಿದ್ದ ಕೆಲ ವ್ಯಕ್ತಿಗಳು ಅನಿಲ್ನ ಗುರಾಯಿಸಿಕೊಂಡು ಅನುಮಾನಾಸ್ಪದವಾಗಿ ಗ್ರಾಮದಲ್ಲಿ ಸುತ್ತಾಡಿದ್ದಾರೆ. ಇದಾದ ಬಳಿಕ ತನ್ನ ಬೈಕ್ನಲ್ಲಿ ಮಾಲೂರು ಕಡೆಗೆ ಹೊರಟ ಅನಿಲ್ ರಸ್ತೆ ಮಧ್ಯದಲ್ಲಿಯೇ ಬರ್ಬರವಾಗಿ ಕೊಲೆಯಾಗಿದ್ದಾನೆ.
ಇತ್ತ ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ಅನಿಲ್, ತನ್ನದೇ ಆದ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ, ರಾಜಕೀಯದ ಜೊತೆ ಆರ್ಥಿಕವಾಗಿಯೂ ಬೆಳೆಯುತ್ತಿದ್ದ.ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದ ಅನಿಲ್ ಗೆ ಒಬ್ಬಳು ಹೆಣ್ಣು ಮಗಳು ಸಹ ಇದ್ದಾಳೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದವನ್ನು ಈ ರೀತಿ ರಸ್ತೆಯ ಮಧ್ಯದಲ್ಲಿ ಕೊಲೆಯಾಗಿ ಬಿದ್ದಿದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಟ್ಟಾರೆ ಗ್ರಾಮ ಪಂಚಾಯತಿ ಸದಸ್ಯನ ಕೊಲೆಯ ಹಿಂದೆ ಸಾಕಷ್ಟು ಅನುಮಾನಗಳಿವೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸರಿಯಾದ ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಕೊಲೆಯ ಹಿಂದಿನ ವಿಚಾರ ಹೊರ ಬೀಳಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ