ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣ: ಇಬ್ಬರ ಶವ ಕೆರೆಯಲ್ಲಿ ಪತ್ತೆ
ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಶವ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಪತ್ತೆಯಾಗಿದೆ. ಇಬ್ಬರೂ ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು, ಜೂನ್ 23: ವಿವಾಹಿತ ಪುರುಷನೊಂದಿಗೆ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಶವ ಕೊರಟಗೆರೆ (Kortgere) ತಾಲೂಕಿನ ಮಾವತ್ತೂರು ಕೆರೆಯಲ್ಲಿ (Lake) ಪತ್ತೆಯಾಗಿದೆ. ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಯುವತಿ ಅನನ್ಯ (19), ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ (50) ಮೃತ ದುರ್ದೈವಿಗಳು. ಮೃತ ರಂಗಶಾಮಣ್ಣ ಜೆರಾಕ್ಸ್ ಹಾಗೂ ಗ್ರಾಮ ಒನ್ ಅಂಗಡಿ ನಡೆಸುತ್ತಿದ್ದನು. ರಂಗಶಾಮಣ್ಣನ ಜೆರಾಕ್ಸ್ ಅಂಗಡಿಗೆ ಅನನ್ಯ ಆಗಾಗ ಬರುತ್ತಿದ್ದಳು. ಇದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿದೆ. ನಂತರ ಅನನ್ಯ-ರಂಗಶಾಮಣ್ಣ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಈ ವಿಚಾರ ಅನನ್ಯ ಪೋಷಕರಿಗೆ ತಿಳಿದಿದ್ದು, ವಿರೋಧ ವ್ಯಕ್ತವಾಗಿದೆ. ಬಳಿಕ ಇಬ್ಬರೂ 3 ದಿನಗಳ ಹಿಂದೆ ನಾಪತ್ತೆಯಾಗಿದ್ದರು.
ಇಂದು (ಜೂ.23) ಕೆರೆಯ ದಡದಲ್ಲಿ ಅನನ್ಯ ಮತ್ತು ರಂಗಶಾಮಣ್ಣ ಚಪ್ಪಲಿಗಳು ಸಿಕ್ಕಿವೆ. ಅಲ್ಲದೆ, ಕೆರೆ ಬಳಿ ನಿಂತಿದ್ದ ಕಾರಿನಲ್ಲಿ ಇಬ್ಬರ ಮೊಬೈಲ್ಗಳು ಸಿಕ್ಕಿವೆ. ಇಬ್ಬರೂ ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಾನ್ಸ್ಟೆಬಲ್ ಆತ್ಮಹತ್ಯೆ
ಕಲಬುರಗಿ: ಕಲಬುರಗಿ ನಗರದ ಉದನೂರ ರಸ್ತೆಯಲ್ಲಿರುವ ಜಮೀನಿನಲ್ಲಿ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಬೂಳ ಠಾಣೆಯ ಪೊಲೀಸ್ ಪೇದೆ ದೊಡ್ಡೇಶ್ (40) ಮೃತ ದುರ್ದೈವಿ. ಪೇದೆ ದೊಡ್ಡೇಶ್ ಕಲಬುರಗಿ ಹೈಕೋರ್ಟ್ ಬಳಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ ಆಕಾಶ್ ಹಿರೇಮಠ ಕೊಲೆ ಪ್ರಕರಣ: 8 ಜನರ ಬಂಧನ
ಮದುವೆಗೆ ನಿರಾಕರಿಸಿದ್ದಕ್ಕೆ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು
ರಾಯಚೂರು: ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮೇಲಿಂದ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅನುರಾಧ (19) ಮೃತ ಯುವತಿ. ರಾಯಚೂರು ನಗರದ ದೇವರ ಕಾಲೋನಿಯಲ್ಲಿರುವ ಸಾಂತ್ವನ ಕೇಂದ್ರದಲ್ಲಿ ಘಟನೆ ನಡೆದಿದೆ. ಅನುರಾಧಾ ಮತ್ತು ವಿನಯ ರೆಡ್ಡಿ ಪ್ರೀತಿಸುತ್ತಿದ್ದರು. ಜೂನ್ 20 ರಂದು ರಕ್ಷಣೆ ಕೋರಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ಪ್ರೇಮಿಗಳು ತೆರಳಿದ್ದರು. ಬಳಿಕ ಅನುರಾಧಾ ತನ್ನ ಪೋಷಕರ ಬಳಿ ಹೋಗಲು ನಿರಾಕರಿಸಿದ್ದಳು. ಹೀಗಾಗಿ ಪೊಲೀಸರು ಅನುರಾಧಾಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದರು.
ಈ ಮಧ್ಯೆ ವಿನಯ್ ರೆಡ್ಡಿ ಸಾಂತ್ವನ ಕೇಂದ್ರಕ್ಕೆ ಬಂದು ನಿನ್ನನ್ನು ಮದುವೆಯಾಗಲ್ಲ ಎಂದು ಹೇಳಿದ್ದನು. ಇದರಿಂದ ನೊಂದ ಅನುರಾಧಾ ಸಾಂತ್ವನ ಕೇಂದ್ರದ ಮೊದಲನೇ ಮಹಡಿಯಿಂದ ಕೆಳಗೆ ಹಾರಿದ್ದಾಳೆ. ಇದರಿಂದ ಅನುರಾಧಾಳ ಕಾಲು ಮುರಿದಿತ್ತು. ಅಲ್ಲದೇ, ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಕೂಡಲೆ ಅನುರಾಧಾಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನುರಾಧಾ ಮೃತಪಟ್ಟಿದ್ದಾರೆ. ಆರೋಪಿ ವಿನಯ್ ರೆಡ್ಡಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರಾಯಚೂರು ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sun, 23 June 24