ಕಾರವಾರ: ಪೋಷಕರು ಬುದ್ದಿವಾದ ಹೇಳಿದಕ್ಕೆ ಪ್ಯಾರಾಮೇಡಿಕಲ್ (Paramedical) ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ. ಮೇಘ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಮೂಲತಃ ಸಿದ್ದಾಪುರ ತಾಲೂಕಿನವಳಾಗಿದ್ದು, ಹಬ್ಬುವಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿ ಕುಟುಂಬ, ಪ್ಯಾರಾಮೇಡಿಕ್ ಕೋರ್ಸ್ ಮುಗಿಸಿಕೊಂಡಿದ್ದಳು. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾರ್ನಲ್ಲಿ ವ್ಯಕ್ತಿ ಮೇಲೆ ಹಲ್ಲೆ
ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಾರ್ನಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆದಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕು ಬನ್ನೂರಿನಲ್ಲಿ ನಡೆದಿದೆ. ದಯಾನಂದ್ ಹಲ್ಲೆಗೆ ಒಳಗಾದವರು. ಗುರು, ಚಂದ್ರು ಸೇರಿದಂತೆ ಹಲವರು ಲಾಂಗ್, ಬಿಯರ್ ಬಾಟಲಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡಿರುವ ದಯಾನಂದ್ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಮಾರಾಟ: ಆರೋಪಿಗಳ ಬಂಧನ
ಮೈಸೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿದರು. ಅಜ್ಮಲ್ ಖಾನ್, ಸೈಯದ್ ಆಸಿಫ್, ವಾಹಿದ್ ಪಾಷಾ ಬಂಧಿತರು. ಬಂಧಿತರಿಂದ 1 ಕೆಜಿ 750 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಅನುಮಾನಸ್ಪದ ಸಾವು:
ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಓರ್ವ ಅನುಮಾನಸ್ಪದ ಸಾವನ್ನಪ್ಪಿರುವಂತಹ ಘಟನೆ ನಂಜನಗೂಡು ತಾಲ್ಲೂಕು ಹಿಮ್ಮಾವು ಗ್ರಾಮದಲ್ಲಿ ನಡೆದಿದೆ. ಬೇಬಿ (28) ಮೃತ ದುರ್ದೈವಿ. ಬೇಬಿ ಮೂಲತಃ ನಂಜನಗೂಡು ಲಲಿತಾಪುರ ಗ್ರಾಮದವರಾಗಿದ್ದು, 8 ವರ್ಷದ ಹಿಂದೆ ಹಿಮ್ಮಾವು ಗ್ರಾಮದ ಉಮೇಶ್ ಜೊತೆ ಮದುವೆಯಾಗಿದ್ದರು. ಹಣಕ್ಕಾಗಿ ಪೀಡಿಸುತ್ತಿದ್ದ ಉಮೇಶ್ ಜಗಳ ಮಾಡಿ ಕೊಲೆ ಮಾಡಿರುವುದಾಗಿ ಮೃತ ಬೇಬಿ ಪೋಷಕರು ಆರೋಪಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯರ ಭಯ ಮುಕ್ತ ಕರ್ನಾಟಕ ಹೆಸರಿನಲ್ಲಿ ಬೈಕ್ ರ್ಯಾಲಿ:
ರಾಯಚೂರು: ಯುವತಿಯರು ಮಹಿಳೆಯರ ಭಯ ಮುಕ್ತ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಂತ ಬೈಕ್ ರ್ಯಾಲಿ ಮಾಡುತ್ತಿದ್ದಾರೆ. ಸದ್ಯ ಬೈಕ್ ರ್ಯಾಲಿ ರಾಯಚೂರು ತಲುಪಿದೆ. ಆಸಿಡ್ ದಾಳಿಗೆ ಒಳಗಾಗಿರುವವರಿಗೆ ಸ್ಕಿನ್ ಡೊನೇಶನ್ ಇತರೆ ಮಹಿಳಾ ಸಮಸ್ಯೆಗಳ ಕುರಿತು ಸಂದೇಶ ಸಾರುತ್ತಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿ ಆಸಿಡ್ ದಾಳಿ ಕೇಸ್ ವಿರುದ್ಧ ಕಿಡಿಕಾರಿದ್ದಾರೆ. ಟಿವಿ9ಗೆ ಹೇಳಿಕೆ ನೀಡಿದ ಕೀರ್ತಿನಿ, ಮುಂಬೈನಲ್ಲಿ ಆಸಿಡ್ ಕೇಸ್ ನೋಡುತ್ತಿದ್ದೆವು. ಈಗ ಕರ್ನಾಟಕದಲ್ಲಿ ಮತ್ತೆ ಆಗುತ್ತಿವೆ. ಆರೋಪಿಯನ್ನು ಕರೆತಂದು ನಡು ರಸ್ತೆಯಲ್ಲಿ ನಿಲ್ಲಿಸಬೇಕು. ಅವನಿಗೆ ಸೀಮೆ ಎಣ್ಣೆ ಸುರಿದು, ಬೊಬ್ಬೆಗಳು ಬರೋ ಹಾಗೆ ಮಾಡಬೇಕು. ಅವನನ್ನು ಸಾಯಿಸೋದು ಬೇಡ, ಆತನನ್ನು ಬದುಕಿಸಿ. ಆದರೆ ಆರೋಪಿಗೆ ಆ ನರಳಾಟ ಏನು ಅನ್ನೋದು ಗೊತ್ತಾಗಬೇಕು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:41 pm, Tue, 3 May 22