Accident: ರಾಜ್ಯದ ಹಲವೆಡೆ ಭೀಕರ ಅಪಘಾತ; ಪ್ರತ್ಯೇಕ ಘಟನೆಗಳಲ್ಲಿ 6 ಜನರ ಸಾವು
ದೇವನಹಳ್ಳಿ, ಚಿಕ್ಕಬಳ್ಳಾಪುರ, ತುಮಕೂರು, ಧಾರವಾಡ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಭೀಕರ ರಸ್ತೆ ಅಪಘಾತಗಳು ಸಂಭವಿಸಿವೆ. ಪ್ರತ್ಯೇಕ ಘಟನೆಗಳಲ್ಲಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದೇವನಹಳ್ಳಿ, ಸೆ.22: ರಾಜ್ಯದ ಹಲವೆಡೆ ಇಂದು ಭೀಕರ ಅಪಘಾತಗಳು (Accident) ಸಂಭವಿಸಿದ್ದು ಪ್ರತ್ಯೇಕ ಘಟನೆಗಳಲ್ಲಿ 6 ಜನ ಮೃತಪಟ್ಟ (Death) ಘಟನೆ ನಡೆದಿದೆ. ಯೂ ಟರ್ನ್ ಪಡೆಯುವ ವೇಳೆ ಬೈಕ್ಗೆ ಟ್ರಾಕ್ಟರ್ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗುಂದಿ ಕ್ರಾಸ್ ಬಳಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದ ರಂಗಪ್ಪ (50) ಮತ್ತು ಸುಧಾ (45) ಮೃತ ದುರ್ದೈವಿಗಳು. ಅಪಘಾತದಲ್ಲಿ ಟ್ರಾಕ್ಟರ್ ಚಕ್ರಕ್ಕೆ ಸಿಲುಕಿದ ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ. ದಂಪತಿ ಮಾಲೂರು ಕಡೆಯಿಂದ ಹೊಸಕೋಟೆಯತ್ತ ಬರ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದ ನಂತರ ಟ್ರಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದು ಸದ್ಯ ಚಾಲಕ ಭರತ್ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಇಬ್ಬರು ದುರ್ಮರಣ
ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಸುಮೋದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಸಾವು
ಇನ್ನು ಮತ್ತೊಂದೆಡೆ ತುಮಕೂರು ತಾಲೂಕಿನ ತಿಮ್ಮರಾಜನಹಳ್ಳಿ ಬಳಿ ಬೈಕ್ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ನಲ್ಲಿದ್ದ ತೇಜಸ್ವಿನಿ(32), ರಂಗನಾಥ್(35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿಮ್ಮರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಸವಾರರು ಶಿರಾ ಪಟ್ಟಣದಿಂದ ತುಮಕೂರು ಕಡೆಗೆ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು ಮಹಿಳೆ ಕೊಲೆಗೆ ಪರಸಂಗದ ಅನುಮಾನ? 50 ತುಂಡುಗಳನ್ನು ಜೋಡಿಸಿ ವರದಿ ಸಿದ್ಧ ಮಾಡುವಿದೇ ಸವಾಲು
ಬೈಕ್ ಮತ್ತು ಲಾರಿ ನಡುವೆ ಅಪಘಾತ, ದೃಶ್ಯ ಸೆರೆ
ಮಂಗಳೂರು ನಗರದ ಕೆ.ಪಿ.ಟಿ ಜಂಕ್ಷನ್ನ ಪೆಟ್ರೋಲ್ ಪಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಅಶೋಕ್ಗೆ ಗಂಭೀರ ಗಾಯಗಳಾಗಿವೆ. ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್ನ ಸಪ್ತಗಿರಿ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರ್ತಿದ್ದ. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಗೂಡ್ಸ್ ಲಾರಿ ಬರ್ತಿತ್ತು. ಏಕಾಏಕಿ ಎಡಬದಿಗೆ ತಿರುಗಿಸಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಬೈಕ್ ಸವಾರನ ಸೊಂಟ ಹಾಗೂ ಬಲ ಕೈ ಮೇಲೆ ಲಾರಿಯ ಎದುರಿನ ಚಕ್ರ ಹರಿದಿದೆ. ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದ ವಿಡಿಯೋ ಇಲ್ಲಿದೆ
ಜೆಸಿಬಿ ಮತ್ತು ಕ್ಯಾಂಟರ್ ಮಧ್ಯೆ ಅಪಘಾತ
ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಜೆಸಿಬಿ ಮತ್ತು ಕ್ಯಾಂಟರ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕ್ಯಾಂಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಜೀವ ಬಿಡುತ್ತಿದ್ದ ಲೈವ್ ವಿಡಿಯೋ ವೈರಲ್ ಆಗಿದೆ. ಧಾರವಾಡ ತಾಲೂಕಿನ ತಡಕೋಡ-ಖಾನಾಪುರ ಗ್ರಾಮದ ಈರಪ್ಪ ಜಿರೀಗವಾಡ ಮೃತ ವ್ಯಕ್ತಿ.
ಧಾರವಾಡದಿಂದ ತಡಕೋಡದತ್ತ ಕ್ಯಾಂಟರ್ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಈರಪ್ಪ ಜಿರೀಗವಾಡ ಚಾಲಕನ ಸೀಟ್ನಲ್ಲಿ ಸಿಲುಕಿದ್ದು ಹೊರಗೆ ತೆಗೆಯಲಾಗದ ಸ್ಥಿತಿಯಲ್ಲಿದ್ದರು. ಸ್ಥಳೀಯರು ಬಾಯಿಗೆ ನೀರು ಹಾಕುತ್ತಿದ್ದಂತೆಯೇ ಜೀವ ಬಿಟ್ಟಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ