ಬೆಳಗಾವಿ: ಯುವಕನನ್ನೇ ಬರ್ಬರ ಹತ್ಯೆಗೈದ ಮದ್ಯವ್ಯಸನಿ ಮಹಿಳೆ: ಏನಾಯಿತು ಅಂತೀರಾ? ಇಲ್ಲಿದೆ ನೋಡಿ

ಆತ ಚಿಕ್ಕವನಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆ ಪಾರ್ಶ್ವವಾಯುದಿಂದಾಗಿ ಹಾಸಿಗೆ ಹಿಡಿದಿದ್ದರು. ಕೆಲಸ ಅರಸಿ ಊರು ಬಿಟ್ಟು ಬೇರೆ ರಾಜ್ಯಕ್ಕೆ ತೆರಳಿದ್ದ ಆತ ಗ್ರಾಮದಲ್ಲಿ ನಡೆಯಯತ್ತಿದ್ದ ಜಾತ್ರೆಗೆ ಎಂದು ಬಂದಿದ್ದನು. ಜೊತೆಗೆ ಜಾತ್ರೆಗೆ ಹೊಸ ಬಟ್ಟೆ ಖರೀದಿಸಬೇಕೆಂದು ಸಿಟಿಗೆ ಹೋದಾತ ಹೆಣವಾಗಿ ಊರಿಗೆ ಮರಳಿದ್ದಾನೆ. ಅಷ್ಟಕ್ಕೂ ಆ ಬಡಪಾಯಿ ಯುವಕನಿಗೆ ಆಗಿದ್ದೇನು? ಇಲ್ಲಿದೆ ನೋಡಿ

ಬೆಳಗಾವಿ: ಯುವಕನನ್ನೇ ಬರ್ಬರ ಹತ್ಯೆಗೈದ ಮದ್ಯವ್ಯಸನಿ ಮಹಿಳೆ: ಏನಾಯಿತು ಅಂತೀರಾ? ಇಲ್ಲಿದೆ ನೋಡಿ
ಆರೋಪಿ ಮಹಿಳೆ, ಮೃತ ಯುವಕ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 02, 2023 | 8:23 AM

ಬೆಳಗಾವಿ: ಆಸ್ಪತ್ರೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕನ ಮೃತದೇಹ, ಆಸ್ಪತ್ರೆಯ ಶವಾಗಾರ ಎದುರು ಜಮಾಯಿಸಿರುವ ಸ್ನೇಹಿತರು, ಸಂಬಂಧಿಕರು. ಮತ್ತೊಂದೆಡೆ ತನಗೆ ಏನೂ ಗೊತ್ತೇ ಇಲ್ಲದಂತೆ ನಿಂತಿರುವ ಮದ್ಯಪಾನಮತ್ತ ಮಹಿಳೆ(Drunken Woman). ಶೋಕಸಾಗರದಲ್ಲಿ ಯುವಕನ ಅಂತ್ಯಸಂಸ್ಕಾರ ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಗಡಿ ಜಿಲ್ಲೆ ಬೆಳಗಾವಿ(Belagavi)ಯಲ್ಲಿ. ಈ ಫೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ನಾಗರಾಜ್ ರಾಗಿ ಪಾಟೀಲ್(25) ಮೂಲತಃ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ. ಕೆಲಸ ಅರಸಿ ಮಹಾರಾಷ್ಟ್ರದ ಕರಾಡ್​ಗೆ ತೆರಳಿದ್ದನು. ನಿನ್ನೆ(ಏ.30)ಯಷ್ಟೇ ಸ್ವಗ್ರಾಮ ತಾರಿಹಾಳಕ್ಕೆ ಬಂದಿದ್ದು, ಊರಿನಲ್ಲಿ ಜಾತ್ರೆಯಿರುವ ಕಾರಣ, ಹೊಸ ಬಟ್ಟೆ ಖರೀದಿಗಾಗಿ ಸ್ನೇಹಿತನ ಜೊತೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ. ಈ ವೇಳೆ ಮದ್ಯವ್ಯಸನಿ ಮಹಿಳೆಯೋರ್ವಳು ಎಂಟ್ರಿ ಕೊಟ್ಟಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ.ಹೆಚ್.ಗ್ರಾಮದ ನಿವಾಸಿಯಾಗಿರುವ ಅಂದಾಜು 40 ವರ್ಷದ ಜಯಶ್ರೀ ಪವಾರ್ ಎಂಬುವವರು ನಾಗರಾಜ್ ಬಳಿ ಬಂದು ಮೊಬೈಲ್ ನೀಡು ಮೊಬೈಲ್ ನೀಡು ಎಂದು ಕೇಳಿದ್ದಾಳಂತೆ. ಆಗ ಗಾಬರಿಗೊಂಡ ನಾಗರಾಜ್ ಯಾವ ಮೊಬೈಲ್ ಎಂದು ಪ್ರಶ್ನೆ ಮಾಡಿದ್ದಾನೆ. ಅಷ್ಟೇ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜ್​ನ ಎದೆಗೆ ಚುಚ್ಚಿದ್ದಾಳೆ. ಈ ವೇಳೆ ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ನಾಗರಾಜ್​ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಾಗರಾಜ್ ರಾಗಿ ಪಾಟೀಲ್ ಮೃತಪಟ್ಟಿದ್ದಾರೆ.

ಇನ್ನು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹಿಳೆ ಜಯಶ್ರೀ ಪವಾರ್​ರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಜಯಶ್ರೀ ಪವಾರ್ ಮದ್ಯವ್ಯಸನಿ ಎಂಬುದು ಗೊತ್ತಾಗಿದೆ. ಈ ಹಿಂದೆಯೂ ಹಲವು ಬಾರಿ ಈ ರೀತಿ ಸಾರ್ವಜನಿಕರ ಜೊತೆ ಕಿರಿಕ್ ಸಹ ಮಾಡಿದ್ದಳಂತೆ. ಇನ್ನು ಮರಣೋತ್ತರ ಪರೀಕ್ಷೆ ಬಳಿಕ ನಾಗರಾಜ್ ಮೃತದೇಹವನ್ನು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮಕ್ಕೆ ಸ್ಥಳಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದನ್ನೂ ಓದಿ:ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಕೊಲೆ: ಮದ್ಯವ್ಯಸನಿ ಪುತ್ರನಿಂದಲೇ ಘೋರ ಕೃತ್ಯ

ನಾಗರಾಜ್ ರಾಗಿ ಪಾಟೀಲ್ ಬಾಳಿ ಬದುಕಬೇಕಾಗಿದ್ದ ಯುವಕ. ಚಿಕ್ಕವನಿದ್ದಾಗಲೇ ತಾಯಿಯನ್ನ ಕಳೆದುಕೊಂಡಿದ್ದ. ತಂದೆ ಅನಾರೋಗ್ಯ ಪೀಡಿತರಾಗಿ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು. ಜಾತ್ರೆಗೆ ಎಂದು ಹೊಸ ಬಟ್ಟೆ ಖರೀದಿ ಮಾಡಲು ಬಂದ ನಾಗರಾಜ್​ನನ್ನ ಕ್ಷುಲ್ಲಕ ಕಾರಣಕ್ಕೆ ಈ ರೀತಿ ಹತ್ಯೆ ಮಾಡಲಾಗಿದ್ದು. ಆ ಪಾಪಿ ಮಹಿಳೆಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೊಲೆಯಾದ ನಾಗರಾಜ್ ಸಂಬಂಧಿಕರು ಆಗ್ರಹಿಸಿದ್ದಾರೆ.

ಕಿಚ್ಚ ಸುದೀಪ್ ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ತಾರಿಹಾಳ ಗ್ರಾಮದ ರೋಡ್​ ಶೋ ರದ್ದು

ಹೌದು ನಿನ್ನೆ(ಮೇ.1) ಬೆಳಗಾವಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲು ಆಗಮಿಸಿದ್ದ ಕಿಚ್ಚ ಸುದೀಪ್. ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ತಾರಿಹಾಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಬೇಕಾಗಿತ್ತು. ಆದ್ರೆ, ತಾರಿಹಾಳ ಗ್ರಾಮದ ನಿವಾಸಿ ಆಗಿದ್ದ ನಾಗರಾಜ್ ರಾಗಿ ಪಾಟೀಲ್ ಕೊಲೆಯಾದ ಹಿನ್ನೆಲೆ ತಾರಿಹಾಳ ಗ್ರಾಮದಲ್ಲಿ ನಡೆಸಬೇಕಿದ್ದ ರೋಡ್ ಶೋ ರದ್ದು ಮಾಡಲಾಗಿತ್ತು. ಅದೇನೇ ಇರಲಿ ಗುರುತು ಪರಿಚಯ ಇರದ ಯುವಕನ ಜೊತೆ ಕಿರಿಕ್ ಮಾಡಿದ ಪಾನಮತ್ತ ಮಹಿಳೆ ಆತನ ಕೊಲೆ ಮಾಡಿದ್ದು, ಪಾಪಿ ಮಹಿಳೆಗೆ ಇಡೀ ಊರಿನ ಜನ ಹಿಡಿಶಾಪ ಹಾಕುತ್ತಿದ್ದಾರೆ.

ವರದಿ: ಮಹಾಂತೇಶ ಕುರಬೇಟ್, ಟಿವಿ9 ಬೆಳಗಾವಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ