ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಕೊಲೆ: ಮದ್ಯವ್ಯಸನಿ ಪುತ್ರನಿಂದಲೇ ಘೋರ ಕೃತ್ಯ
ಮದ್ಯಪಾನಕ್ಕೆ ಹಣ ನೀಡದ್ದಕ್ಕೆ ಮಗನೇ ತಂದೆಯನ್ನ ಕೊಂದಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಮಾರೇನಹಳ್ಳಿ ಪಿ. ಎಸ್ ಲೇಔಟ್ನಲ್ಲಿ ನಡೆದಿದೆ. ಸೆಕ್ಯೂರಿಟಿಗಾರ್ಡ್ ಬಸವರಾಜು(60) ಕೊಲೆಯಾದ ದುರ್ದೈವಿ.
ಬೆಂಗಳೂರು: ಮದ್ಯಪಾನಕ್ಕೆ ಹಣ ನೀಡದ್ದಕ್ಕೆ ಮಗನೇ ತಂದೆಯನ್ನ ಕೊಂದಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಮಾರೇನಹಳ್ಳಿ ಪಿ. ಎಸ್ ಲೇಔಟ್ನಲ್ಲಿ ನಡೆದಿದೆ. ಸೆಕ್ಯೂರಿಟಿಗಾರ್ಡ್ ಬಸವರಾಜು(60) ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿದ್ದ ಪುತ್ರ ನೀಲಧರ್ ಹಾಗೂ ತಂದೆ ಇಬ್ಬರು ವಾಸವಾಗಿದ್ದ ಶೆಡ್ನಲ್ಲಿ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನ ಕೊಲೆ ಮಾಡಿದ್ದಾನೆ. ಬಳಿಕ ಕೊಲೆಯಾಗಿ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಮಗನಿಂದಲೇ ತಂದೆ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಸ್ತಿ ವಿಚಾರಕ್ಕೆ ಅತ್ತಿಗೆ, ಅಣ್ಣನ ಮಗನ ಬರ್ಬರ ಹತ್ಯೆ
ಮಂಡ್ಯ: ಆಸ್ತಿ ವಿಚಾರಕ್ಕೆ ಜಗಳವಾಗಿ ಸ್ವಂತ ಅತ್ತಿಗೆ ಹಾಗೂ ಅಣ್ಣನ ಮಗನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆ ಪಾಂಡವಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೌದು ಜಮೀನಿನ ವಿಚಾರಕ್ಕೆ ಮೈದುನ ಸತೀಶ್ ಎಂಬಾತ ಪದೇ ಪದೇ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ನಿನ್ನೆ(ಏ.26) ಸಂಜೆ ಕೂಡ ಕಂಠ ಪೂರ್ತಿ ಕುಡಿದು ತೋಟದ ಮನೆಗೆ ಬಂದಿದ್ದಾನೆ. ಈ ವೇಳೆ ಕೆಲಸ ಮಾಡುತ್ತಿದ್ದ ಮೃತ ಶಾಂತಮ್ಮ ಹಾಗೂ ಯಶ್ವಂತ್ ಜೊತೆ ಜಗಳ ಶುರು ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಅತ್ತಿಗೆ ಶಾಂತಮ್ಮನನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ, 2 ಸಾವಿರ ರೂ. ದಂಡ
ಇನ್ನು ಇದೇ ವೇಳೆ ತಾಯಿ ಶಾಂತಮ್ಮ ಕಿರಿಚಾಡುತ್ತಿದ್ದಂತೆ ಸಹಾಯಕ್ಕೆ ಬಂದಿದ್ದ ಪುತ್ರ ಯಶ್ವಂತ್ನನ್ನು ಕೂಡ ಕುಡುಗೋಲಿನಿಂದ ದಾಳಿ ನಡೆಸಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪಾಂಡವಪುರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ 302 ಅಡಿ ಪ್ರಕರಣ ದಾಖಲಿಸಿಕೊಂಡು, ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ