ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ದಾಳಿ, ಬಲೆಗೆ ಬಿದ್ದ ಬೆಂಗಳೂರು ಮೂಲದ ರೌಡಿಶೀಟರ್‌ಗಳು
ಆಂಧ್ರದ ಅನಂತಪುರ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದು, ಬೆಂಗಳೂರು ಮೂಲದ ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ.
ತಿರುಪತಿ: ಆಂಧ್ರ ಪ್ರದೇಶದ ಅನಂತಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಕಲಿ ನೋಟು ಚಲಾವಣೆ ಹಾಗೂ ಇತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಕುಖ್ಯಾತ ಅಂತಾರಾಜ್ಯ ಸುಲಿಗೆಕೋರರ ತಂಡವನ್ನು ಬಂಧಿಸಿದ್ದಾರೆ. ಬಂಧಿತರಿಂದ 18 ಶಸ್ತ್ರಾಸ್ತ್ರಗಳ ಜೊತೆಗೆ 95 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಉಮ್ಮರ್ತಿಯ ರಾಜ್‌ಪಾಲ್ ಸಿಂಗ್ ಹಾಗೂ ಸುತಾರ್ ಸೇರಿದಂತೆ ಬೆಂಗಳೂರು ಮೂಲದ ನಾಲ್ವರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಆಂಧ್ರಪ್ರದೇಶ, ಕರ್ನಾಟಕ, ಗೋವಾದಲ್ಲಿ ಶಸ್ತ್ರಾಸ್ತ್ರ ಮಾರಾಟ, ನಕಲಿ ಕರೆನ್ಸಿ, ಡ್ರಗ್ಸ್ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿತ್ತು.
ಇನ್ನು ಈ ಬಗ್ಗೆ ವಿಜಯವಾಡದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಜಿಪಿ ರಾಜೇಂದ್ರನಾಥ ರೆಡ್ಡಿ, ಅನಂತಪುರ ಎಸ್ಪಿ ಫಕೀರಪ್ಪ ಕಾಗಿನೆಲ್ಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜ್‌ಪಾಲ್ ಸಿಂಗ್ ಅವರು ದೇಶದ ವಿವಿಧ ಭಾಗಗಳಲ್ಲಿ ನೂರಾರು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು, ಈ ಬಗ್ಗೆ ಅವರ ವಿರುದ್ಧ ನಾಲ್ಕು ಪ್ರಕರಣಗಳು ಇವೆ. ಉಳಿದ ನಾಲ್ಕು ಆರೋಪಿಗಳು ಅನಧಿಕೃತ ಶಸ್ತ್ರಾಸ್ತ್ರ ತಯಾರಿಕಾ ಘಟಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲೂ ಮಾದಕ ವಸ್ತು ಪೂರೈಕೆಯಲ್ಲಿ ತೊಡಗಿದ್ದರು. ಎಂದು ಆರೋಪಿಗಳ ಕೃತ್ಯಗಳ ಮಾಹಿತಿ ನೀಡಿದರು.
ಬೆಂಗಳೂರಿನ ಜಮ್ಶೀದ್ ಅಲಿಯಾಸ್ ಖಾನ್ ಗಾಂಜಾ, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ 12 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಬೆಂಗಳೂರಿನ ಅಮೀರ್ ಪಾಷಾ ಏಳು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ದಕ್ಷಿಣ ಗೋವಾದ ರಿಯಾಜ್ ಅಬ್ದುಲ್ ಶೇಕ್ ನಾಲ್ಕು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದರು.
ಮಧ್ಯಪ್ರದೇಶದ ಶಸ್ತ್ರಾಸ್ತ್ರ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದಾಗ, ನಮ್ಮ ತಂಡವು ಬೆರೆಟ್ಟಾ 9ಎಂಎಂ ಸೆಮಿ ಅಟೋಮೆಟಿಕ್ ಮಿಸ್ತೂಲ್, 9 ಎಂಎಂ ಪಿಸ್ತೂಲ್, 11 0.32 ಎಂಎಂ ಪಿಸ್ತೂಲ್, ರಿವಾಲ್ವರ್ಗಳನ್ನು ವಶಪಡಿಸಿಕೊಂಡಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಆರೋಪಿಗಳು ಬೆಂಗಳೂರು ವ್ಯಾಪ್ತಿಯಲ್ಲಿ ಗಲಾಟೆ, ಹತ್ಯೆ, ಸುಲಿಗೆಯಲ್ಲಿ ತೊಡಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಚಾರಣೆ ನಡೆಸಿದ ಫಕೀರಪ್ಪ ಮತ್ತು ಕಲ್ಯಾಣದುರ್ಗ ಡಿಎಸ್‌ಪಿ ಬಿ.ಶ್ರೀನಿವಾಸುಲು ಹಾಗೂ ತಂಡದ ಇತರ ಸದಸ್ಯರನ್ನು ಡಿಜಿಪಿ ಶ್ಲಾಘಿಸಿದರು.
ಇನ್ನಷ್ಟು ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ