ಆನೇಕಲ್, ಸೆಪ್ಟೆಂಬರ್ 11: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಸರಣಿ ಕಳ್ಳತನ (stolen) ಮುಂದುವರೆದಿದ್ದು, ಕಳೆದ 1 ವಾರದಿಂದ 6 ಮನೆಗಳ್ಳತನವಾಗಿದೆ. ಆ ಮೂಲಕ ಆನೇಕಲ್ ಪೋಲೀಸರಿಗೆ ಖತರ್ನಾಕ್ ಕದೀಮರು ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಲೋಕೇಶ್ ಎಂಬುವವರ ಮನೆಗೆ ನುಗ್ಗಿ 13 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿ ಆಗಿದ್ದಾರೆ. ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳ ಭೇಟಿಗೆ ದಂಪತಿ ಮಂಗಳೂರಿಗೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಇಂದು ಮುಂಜಾನೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದೊಂದು ವಾರದಿಂದ ಪ್ರತಿದಿನ ರಾತ್ರಿ ಮನೆಗಳ್ಳತನ ನಡೆಯುತ್ತಿವೆ. ಒಟ್ಟು 6 ಮನೆಗಳಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ನಗದು ದೋಚಿಕೊಂಡು ಕಳ್ಳರು ಪರಾರಿ ಆಗಿದ್ದಾರೆ. ಸದ್ಯ ಸ್ಥಳಕ್ಕೆ ಎಫ್ಎಸ್ಎಲ್, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ನಿಂದ ಕಾರಿನ ಎಂಜಿನ್ ಹೊತ್ತಿ ಉರಿದಿದ್ದು, ಸಂಚಾರಿ ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿರುವಂತಹ ಘಟನೆ ಜಿಲ್ಲೆಯ ಬಸವೇಶ್ವರ ವೃತ್ತದ ಬಳಿ ನಡೆದಿದೆ.
ಇದನ್ನೂ ಓದಿ: ಖಾಸಗಿ ಫೋಟೋ ವೈರಲ್: ಆರೋಪಿಗಳ ಬಂಧನವಾಗಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪಂಚಾಯತಿ ಸದಸ್ಯೆ
ಟ್ಯಾಂಕರ್ ಮೂಲಕ ನೀರು ಹೊಡೆದು ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊಗೆಯಾಡುವುದನ್ನು ತಕ್ಷಣ ಗಮನಿಸಿದ ಸಂಚಾರಿ ಕಾನ್ಸ್ಟೇಬಲ್ಗಳಾದ ಅನಿಲ ಕಲಬುರ್ಗಿ, ಅಲ್ತಾಪ್ ಎಂಬುವರು ಸಮಯಪ್ರಜ್ಞೆ ಮೆರೆದಿದ್ದಾರೆ.
ಕೋಲಾರ: ಕೆಜಿಎಫ್ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕೆಜಿಎಫ್ ತಾಲೂಕಿನ ಚೊಕ್ಕರ ಬಂಡೆ ಬಳಿ ಗಾಂಜಾ ಮಾರುತ್ತಿದ್ದ ಆಂಧ್ರ ಮೂಲದ ರೆಡ್ಡಪ್ಪರಾಜು ಎಂಬ ವ್ಯಕ್ತಿಯನ್ನು ಕೆಜಿಎಫ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 11 ಕೆಜಿ 200 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆ್ಯಂಡರ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚುತ್ತಿದ್ದ ಹಾಗೂ ಬೈಕ್ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ನಗರದ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಮನೆಗಳವು, ದರೋಡೆ, ಡಕಾಯಿತಿ, ಮಾದಕವಸ್ತು ಮಾರಾಟ ಸೇರಿದಂತೆ ಒಟ್ಟು ಎಂಟು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು.
ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ವಿನೋದ್ ಹಾಗೂ ಪ್ರಶಾಂತ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ 5.39 ಲಕ್ಷ ನಗದು, ಮೂರು ದ್ವಿಚಕ್ರ ವಾಹನ, 50 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:57 pm, Mon, 11 September 23