ಆನೇಕಲ್: ದಾಳಿ ವೇಳೆ ಅರ್ಧ ಕಿಲೋಮೀಟ್ ಹಿಮ್ಮುಖವಾಗಿ ಕಾರು ಚಲಾಯಿಸಿ ಸಿನಿಮೀಯವಾಗಿ ಬಚಾವಾದ ರೌಡಿಶೀಟರ್

| Updated By: Ganapathi Sharma

Updated on: Nov 19, 2024 | 12:39 PM

ಆನೇಕಲ್​ನಲ್ಲಿ ರೌಡಿ ಶೀಟರ್ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ನಡೆದಿದೆ. ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಟಾಟಾ ಸಫಾರಿ ಸ್ಕಾರ್ಪಿಯೋ ಕಾರಿನಲ್ಲಿ ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಹಲ್ಲೆಗೆ ಯತ್ನಿಸಲಾಗಿದೆ. ಈ ವೇಳೆ ಅರ್ಧ ಕಿಲೋಮೀಟರ್​ನಷ್ಟು ಹಿಮ್ಮುಖವಾಗಿ ಕಾರು ಚಾಲಾಯಿಸಿಕೊಂಡು ಹೋದ ರೌಡಿಶೀಟರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಆನೇಕಲ್: ದಾಳಿ ವೇಳೆ ಅರ್ಧ ಕಿಲೋಮೀಟ್ ಹಿಮ್ಮುಖವಾಗಿ ಕಾರು ಚಲಾಯಿಸಿ ಸಿನಿಮೀಯವಾಗಿ ಬಚಾವಾದ ರೌಡಿಶೀಟರ್
ಹಲ್ಲೆಯಿಂದ ಜಖಂಗೊಂಡಿರುವ ಕಾರು
Follow us on

ಆನೇಕಲ್, ನವೆಂಬರ್ 19: ಆನೇಕಲ್ ಕುಖ್ಯಾತ ರೌಡಿ ಶೀಟರ್ ಮನು ಅಲಿಯಾಸ್ ಜಾಕಿ ಆ್ಯಂಡ್ ಗ್ಯಾಂಗ್ ಮೇಲೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾದಪಟ್ಟಣ ಬಳಿ ಸಿನಿಮೀಯ ರೀತಿಯಲ್ಲಿ ದಾಳಿ ನಡೆದಿದೆ. ಆದರೆ, ಕೂದಲೆಳೆ ಅಂತರದಲ್ಲಿ ಮನು ಹಾಗೂ ಗ್ಯಾಂಗ್ ತಪ್ಪಿಸಿಕೊಂಡಿದೆ.

ಜಾಕಿ ಆ್ಯಂಡ್ ಗ್ಯಾಂಗ್ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಜಿಗಣಿ ಕಡೆಯಿಂದ ಆನೇಕಲ್ ಕಡೆ ಹೊರಟಿದ್ದ ವೇಳೆ ಮಾದಪಟ್ಟಣದ ಬಳಿ ಟಾಟಾ ಸಫಾರಿ ಕಾರು ಅಡ್ಡಗಟ್ಟಿದೆ. ಹಿಂದೆಯಿಂದ ಇನ್ನೋವಾ ಕ್ರಿಸ್ಟಾ ಕಾರನ್ನು ಸ್ಕಾರ್ಪಿಯೋ ಕಾರು ಲಾಕ್ ಮಾಡಿದೆ. ಎರಡು ಕಾರಿನಲ್ಲಿದ್ದವರು ಲಾಂಗು ಮಚ್ಚುಗಳಿಂದ ಇನ್ನೋವಾ ಕ್ರಿಸ್ಟಾ ಕಾರಿನ ಮೇಲೆ ಅಟ್ಯಾಕ್ ಮಾಡುತ್ತಿದ್ದಂತೆಯೇ ಅಲರ್ಟ್ ಆದ ಜಾಕಿ ಅಂಡ್ ಗ್ಯಾಂಗ್, ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದು ಹಿಮ್ಮುಖವಾಗಿ ಅರ್ಧ ಕಿಲೋಮೀಟರ್ ಚಾಲಾಯಿಸಿ ಡಿವೈಡರ್​ಗೆ ಡಿಕ್ಕಿ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿದೆ. ಗುರಿ ತಪ್ಪುತ್ತಿದ್ದಂತೆಯೇ ದಾಳಿಕೋರರು ಸಹ ಸ್ಕಾರ್ಪಿಯೋ ಕಾರು ಬಿಟ್ಟು ಟಾಟಾ ಸಫಾರಿ ವಾಹನದಲ್ಲಿ ಎಸ್ಕೇಪ್ ಆಗಿದ್ದಾರೆ.

ತಂಗಿ ಮದುವೆ ಆಮಂತ್ರಣ ಹಂಚಲು ಹೋಗಿದ್ದವನ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು

ಹಂತಕರಿಂದ ತಪ್ಪಿಸಿಕೊಂಡ ಮನು ಹಲವು ಸುಫಾರಿ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪಾತಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶೀಟರ್. ಈ ಹಿಂದೆ ಆನೇಕಲ್​​ನ ಬೆಸ್ತಮಾರನಹಳ್ಳಿ ಸುನೀಲ್ ಕೊಲೆ ಕೇಸ್​​ನಲ್ಲಿ ಪ್ರಮುಖ ಆರೋಪಿಯಾಗಿದ್ದು, ಬೆಂಗಳೂರಿನ ಕಲಾಸಿಪಾಳ್ಯ ರೌಡಿ ಶೀಟರ್ ಪಿಟ್ಟಾ ನಾಗನ ಕೊಲೆ ಪ್ರಕರಣದಲ್ಲಿಯೂ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ರೌಡಿ ಶೀಟರ್ ಮನು ಇದೇ ತಿಂಗಳು 23-24 ನೇ ತಾರೀಖು ನಡೆಯಲಿರುವ ತಂಗಿ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ. ಹಿಗಾಗಿ ಆನೇಕಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮದುವೆ ಆಮಂತ್ರಣ ಪತ್ರಿಕೆ ಹಂಚಿದ್ದು, ಸಂಜೆ ಬೆಂಗಳೂರಿನ ಗೆಳೆಯರಿಗೆ ಪತ್ರಿಕೆ ಹಂಚಿ ವಾಪಸ್ ಆಗುತ್ತಿದ್ದ ವೇಳೆ ಹಂತಕರು ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಮರ್ಮಾಂಗ ಕತ್ತರಿಸಿ ಬಾಯಲ್ಲಿ ತುರುಕಿದ ಹಂತಕರು; ಕೊಲ್ಕತ್ತಾ ಶಿಕ್ಷಕನ ಬರ್ಬರ ಹತ್ಯೆ

ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಇದರ ನಡುವೆ ರೌಡಿ ಶೀಟರ್ ಮನು ಆ್ಯಂಡ್ ಗ್ಯಾಂಗ್ ಪರಾರಿಯಾಗುವ ಭರದಲ್ಲಿ ಬೈಕ್ ಸವಾರರ ಬಳಿ ಎರಡು ಬೈಕ್​​ಗಳನ್ನು ಕಸಿದು ಪರಾರಿಯಾಗಿದ್ದು, ಘಟನೆಯ ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ