ಬೆಂಗಳೂರು ಗ್ರಾಮಾಂತರ, ಡಿ.07: ಜಿಲ್ಲೆಯ ಆನೇಕಲ್ ಪೊಲೀಸ್ ಠಾಣಾ(Anekal Police Station) ವ್ಯಾಪ್ತಿಯ ನಾರಾಯಣಪುರದಲ್ಲಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ತಂದೆಯಿಂದಲೇ ಕೊಲೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯ ತಂದೆ-ತಾಯಿ ಹಾಗೂ ಎರಡನೇ ಪತ್ನಿ ಸೇರಿ ಮೂವರು ಮಕ್ಕಳ ಜೊತೆ ನಾರಾಯಣಪುರದಲ್ಲಿ ಸುರೇಶ್ ವಾಸವಿದ್ದ. ಸುರೇಶನ ಮೊದಲನೇ ಪತ್ನಿ ಹಾಗೂ ಇಬ್ಬರು ಮಕ್ಕಳು ತಮಿಳುನಾಡಿನಲ್ಲಿ ವಾಸವಿದ್ದಾರೆ. ಇತ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಸುರೇಶ್ ನಿತ್ಯ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ವಾಪಸ್ ಆಗುವಾಗ ಕಂಠ ಪೂರ್ತಿ ಕುಡಿದು ಬರುತ್ತಿದ್ದ. ಕುಡಿದ ಮತ್ತಿನಲ್ಲಿ ಇಲ್ಲಸಲ್ಲದ ವಿಚಾರಕ್ಕೆ ಗಲಾಟೆ ಮಾಡಿ ತಂದೆ, ತಾಯಿ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ.
ನಿನ್ನೆ ಕೂಡ ಕೆಲಸಕ್ಕೆ ಹೋಗಿ ಬಂದಿದ್ದ ಸುರೇಶ್, ಕುಡಿದ ಮತ್ತಿನಲ್ಲಿ ತಾಯಿಯ ಜೊತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮನೆಯಲ್ಲಿಯೇ ಇದ್ದ ತಂದೆ ಯಲ್ಲಪ್ಪ, ಜಗಳ ಬಿಡಿಸಲು ಬಂದಾಗ ಆತನ ಮೇಲೆಯೂ ಹಲ್ಲೆ ನಡೆಸಿದ್ದ. ಅದರಂತೆ ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಸುರೇಶನ ಕುತ್ತಿಗೆಗೆ ತಂದೆ ಯಲ್ಲಪ್ಪ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುರೇಶ್ ಮನೆಯಿಂದ ಹೊರಗೆ ಓಡಿ ಬಂದಿದ್ದಾನೆ. ರಕ್ತದ ಮಡುವಿನಲ್ಲಿ ಕಿರುಚಾಡುತ್ತಿದ್ದ ಸುರೇಶನನ್ನು ಪತ್ನಿ ನಂದಿನಿ ಹಾಗೂ ಸ್ಥಳೀಯರು ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ:ಕೋಲಾರ: ಚಾಕುವಿನಿಂದ ಇರಿದು ತಂದೆಯಿಂದಲೇ ಮಗನ ಕೊಲೆ
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಆನೇಕಲ್ ಪೊಲೀಸರು, ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಸದ್ಯ ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿ ಯಲ್ಲಪ್ಪನನ್ನು ಬಂಧನ ಮಾಡಿ ಮಹಜರನ್ನು ನಡೆಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇನ್ನು ಕೊಲೆಗೆ ಮುಂಚೆ ನಡೆದ ಗಲಾಟೆಗೆ ಇನ್ನೊಂದು ಪ್ರಮುಖ ಕಾರಣವಿದೆ ಎನ್ನಲಾಗುತ್ತಿದೆ. ಸುರೇಶನ ಮಲ ತಂದೆ ಯಲ್ಲಪ್ಪ ಊರಿನವರಿಗೆಲ್ಲ ಇವನು ನನ್ನ ಮಗನಲ್ಲ ಸಾಕು ಮಗ ಎಂದು ಹೇಳಿಕೊಂಡು ಬರುತ್ತಿದ್ದನಂತೆ. ಇದೇ ವಿಚಾರಕ್ಕೆ ಕುಡಿದು ಬಂದು ಮನೆಯಲ್ಲಿ ಸುರೇಶ್ ಗಲಾಟೆ ಮಾಡಿದ್ದ. ಇದಕ್ಕೆಲ್ಲಾ ಕಾರಣ ನಿನೇ ಎಂದು ತಾಯಿ ರತ್ನಮ್ಮಳ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಕೋಪಗೊಂಡ ಯಲ್ಲಪ್ಪ ಕೈಯಲ್ಲಿದ್ದ ಚಾಕುವಿನಿಂದ ಸುರೇಶನ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಕುಡಿತದ ಚಟಕ್ಕೆ ದಾಸನಾಗಿ ಮನೆಯಲ್ಲಿ ದಿನನಿತ್ಯ ಗಲಾಟೆ ಮಾಡುತ್ತಿದ್ದ ಸುರೇಶ್, ತಂದೆಯಿಂದಲೇ ಕೊಲೆಯಾಗಿ ಹೋಗಿದ್ದು, ಕ್ಷಣಿಕ ಕೋಪದ ಕೈಗೆ ಬುದ್ದಿಕೊಟ್ಟ ತಂದೆ ಯಲ್ಲಪ್ಪ ಮಗನನ್ನು ಕೊಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಗಂಡು ದಿಕ್ಕಿಲ್ಲದಂತ ಕುಟುಂಬ ಇದೀಗ ಬೀದಿಗೆ ಬಿದ್ದಂತಾಗಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ