ರಾಜ್ಯಪಾಲ ಆಗ್ತಿದ್ದೇನೆಂದು ಹೇಳಿ ಹಲವರಿಂದ ಹಣ ಪೀಕಿದ ಆಸಾಮಿ: ಬರೋಬ್ಬರಿ 28 ಲಕ್ಷ ರೂ. ಹಣ ಕಳೆದುಕೊಂಡ ನಿವೃತ್ತ ಯೋಧ

ಖಾಯಂ ನೌಕರಿ ನೀಡುವುದಾಗಿ ಹೇಳಿ ನಂಬಿಸಿ ನಿವೃತ್ತ ಸಿಆರ್​ಪಿಎಫ್​ ಯೋಧರೊಬ್ಬರಿಂದ ಬರೋಬ್ಬರಿ 28 ಲಕ್ಷ ರೂ. ಪಡೆದು ವಾಪಸ್​ ಕೊಡದೆ ವ್ಯಕ್ತಿಯೋರ್ವ ಯಾಮಾರಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ರಾಜ್ಯಪಾಲ ಆಗ್ತಿದ್ದೇನೆಂದು ಹೇಳಿ ಹಲವರಿಂದ ಹಣ ಪೀಕಿದ ಆಸಾಮಿ: ಬರೋಬ್ಬರಿ 28 ಲಕ್ಷ ರೂ. ಹಣ ಕಳೆದುಕೊಂಡ ನಿವೃತ್ತ ಯೋಧ
ಶಾಂತಕುಮಾರ್, ನಿವೃತ್ತ ಯೋಧ ಮಾರುತಿ ಘೋಡಕೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2023 | 7:16 PM

ಕಲಬುರಗಿ: ಖಾಯಂ ನೌಕರಿ ನೀಡುವುದಾಗಿ ಹೇಳಿ ನಂಬಿಸಿ ನಿವೃತ್ತ ಸಿಆರ್​ಪಿಎಫ್​ ಯೋಧ (CRPF soldier) ರೊಬ್ಬರಿಂದ ಬರೋಬ್ಬರಿ 28 ಲಕ್ಷ ರೂ. ಪಡೆದು ವಾಪಸ್​ ಕೊಡದೆ ವ್ಯಕ್ತಿಯೋರ್ವ ಯಾಮಾರಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪರ್ಸನಲ್ ಬಾಡಿಗಾರ್ಡ್ ಆಗಿ ಖಾಯಂ ನೌಕರಿ ಕೊಡ್ತೇನೆ. ನಾನು ರಾಜ್ಯಪಾಲ ಆಗ್ತಿದ್ದೇನೆ ಅಂತ ಹೇಳಿ ವ್ಯಕ್ತಿಯೋರ್ವ ಯಾಮಾರಿಸಿದ್ದಾನೆ. ಅನೇಕ ವರ್ಷಗಳ ಕಾಲ ಕಷ್ಟಪಟ್ಟು ಸಂಪಾದಿಸಿದ್ದ ಹಣವನ್ನು ಕಳೆದುಕೊಂಡು ನಿವೃತ್ತ ಯೋಧ ಕಂಗಾಲಾಗಿದ್ದಾನೆ. ಮಾರುತಿ ಘೋಡಕೆ ಹಣ ಕಳೆದುಕೊಂಡ ಯೋಧ. ಮೂಲತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಾವಳೇಶ್ವರ ಗ್ರಾಮದ ನಿವಾಸಿ. ಕೆಲ ವರ್ಷಗಳಿಂದ ಕಲಬುರಗಿ ನಗರದಲ್ಲಿಯೇ ವಾಸವಾಗಿದ್ದಾರೆ. ಅನೇಕ ವರ್ಷಗಳ ಕಾಲ ಸಿಆರ್​ಪಿಎಫ್​ನಲ್ಲಿ ಕೆಲಸ ಮಾಡಿದ್ದ ಇವರು 2016 ರಲ್ಲಿ ನಿವೃತ್ತರಾಗಿದ್ದರು.

ಕಲಬುರಗಿ ನಗರದಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ಇದೇ ಸಂದರ್ಭದಲ್ಲಿ ಕಲಬುರಗಿ ನಗರದ ನಿವಾಸಿಯಾಗಿರುವ ಶಾಂತಕುಮಾರ್ ಜಟ್ಟೂರ್ ಅನ್ನೋರು, ನಾನು ತೆಲಂಗಾಣ ರಾಜ್ಯದ ರಾಜ್ಯಪಾಲ ಆಗುತ್ತಿದ್ದೇನೆ, ತನಗೆ ಭದ್ರತಾ ಸಿಬ್ಬಂದಿ ಬೇಕು ಅಂತ ಹೇಳಿದ್ದರಿಂದ ಮಾರುತಿ ಅವರು ಜೈ ಸೆಕ್ಯೂರಿಟಿ ಮ್ಯಾನ್ ಪವರ್ ಏಜನ್ಸಿ ಮೂಲಕ, ಶಾಂತಕುಮಾರ್ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಗ ಶಾಂತಕುಮಾರ್ ತಾನು ರಾಜ್ಯಪಾಲ ಆಗ್ತಿದ್ದೇನೆ, ನಿನ್ನನ್ನು ನನ್ನ ಖಾಯಂ ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ತೇನೆ ಅಂತ ನಿವೃತ್ತ ಯೋಧ ಮಾರುತಿಗೆ ಹೇಳಿದ್ದರಂತೆ.

ಇದನ್ನೂ ಓದಿ: PSI ​ಮರುಪರೀಕ್ಷೆ ಸದ್ಯಕ್ಕೆ ನಡೆಯೋಲ್ಲ ಎಂದ ಸಿಐಡಿ ಪೊಲೀಸರು: ಅಂತಹ ಶಾಕಿಂಗ್ ಬೆಳವಣಿಗೆಯೊಂದು ನಡೆದಿದೆ ಇಂದು! ಏನದು?

ಜೊತೆಗೆ ತನ್ನ ಬಳಿ ಸಾಕಷ್ಟು ಹಣವಿದೆ. ಆದ್ರೆ ಪ್ರೋಟೋಕಾಲ್ ಇರೋದರಿಂದ, ಅದನ್ನು ಪಡೆಯಲು ಆಗ್ತಿಲ್ಲಾ. ಹೀಗಾಗಿ ಒಂದಿಷ್ಟು ಹಣ ಕೊಡು, ಆ ಮೇಲೆ ಆ ಹಣವನ್ನು ನೀಡ್ತೇನೆ ಅಂತ ಹೇಳಿ 2022ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಇಪ್ಪತ್ತೇಳು ಲಕ್ಷ ತೊಂಬತ್ತೇಳು ಸಾವಿರ ಹಣ ಪಡೆದಿದ್ದಾನೆ. ಶಾಂತಕುಮಾರ್ ರಾಜ್ಯಪಾಲ ಆಗ್ತಿದ್ದೇನೆ ಅಂತ ಹೇಳಿದಾಗ, ದೊಡ್ಡ ವ್ಯಕ್ತಿ ಪರಿಚಯವಾಗಿದೆ ತನಗೆ ಸಹಾಯವಾಗಬಹುದು ಅಂತ ತಿಳಿದು, ತಮಗೆ ನಿವೃತ್ತಿ ನಂತರ ಬಂದಿದ್ದ ಹಣ ಸೇರಿದಂತೆ ತಮ್ಮಲ್ಲಿದ್ದ ಹಣವನ್ನು ಒಟ್ಟುಗೂಡಿಸಿ ಶಾಂತಕುಮಾರ್​ಗೆ ನೀಡಿದ್ದರು. ಆದ್ರೆ ಹಣ ಪಡೆದ ಶಾಂತಕುಮಾರ್ ಇಲ್ಲಿವರಗೆ ವಾಪಸ್ಸು ನೀಡಿಲ್ಲ. ಹಣ ಕೇಳಿದ್ರೆ ಇಂದು ಕೊಡ್ತೇನೆ, ನಾಳೆ ಕೊಡ್ತೇನೆ ಅಂತ ಹೇಳುತ್ತಾ ದಿನಗಳನ್ನು ದೂಡುತ್ತಿದ್ದಾನೆ ಅಂತ ಮಾರುತಿ ಆರೋಪಿಸಿದ್ದಾರೆ. ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್​ ಕಾರ್ಡ್​ ಜಾಲ ಭೇದಿಸಿದ ಸಿಸಿಬಿ ಪೊಲೀಸರು; ಓರ್ವ ಆರೋಪಿ ಅರೆಸ್ಟ್

ಶಾಂತಕುಮಾರ್​ ತಾನು ರಾಜ್ಯಪಾಲ ಆಗ್ತಿದ್ದೇನೆ ಅಂತ ಹೇಳಿ ಅನೇಕರಿಗೆ ವಂಚಿಸಿರುವ ಆರೋಪಗಳು ಕೇಳಿ ಬಂದಿವೆ. ತನ್ನ ಮನೆಯನ್ನು ರಿನೋವೇಷನ್ ಕೂಡಾ ಮಾಡಿಸಿಕೊಂಡಿದ್ದು, ಗುಂಡಣ್ಣ ಅನ್ನೋ ಕಾರ್ಪೆಂಟರ್, ತಾವೇ ಎಲ್ಲಾ ವಸ್ತುಗಳನ್ನು ಖರೀದಿಸಿ, ಮನೆಯ ಕೆಲಸ ಮಾಡಿಕೊಂಟ್ಟಿದ್ದಾರಂತೆ. ಅವರಿಗೆ ಒಂದು ಲಕ್ಷ ಎಂಬತ್ತು ಸಾವಿರ ಹಣ ನೀಡಬೇಕಂತೆ. ಅವರಿಗೂ ಕೂಡಾ ಹಣ ನೀಡಿಲ್ಲವಂತೆ. ಶಾಂತಕುಮಾರ್, ತನಗೆ ಸರ್ಕಾರದ ಕಾರು ನೀಡಿದ್ದಾರೆ ಅಂತ ಹೇಳಿ, ತನ್ನ ಕಾರ್ ಮೇಲೆ ಗೌರ್ನಮೆಂಟ್ ವೆಹಿಕಲ್ ಅಂತ ಬರೆಸಿದ್ದಾನಂತೆ. ಜೊತೆಗೆ ಬಾಡಿಗಾರ್ಡ್ ಇಟ್ಟುಕೊಂಡಿದ್ದಾನಂತೆ. ಅನೇಕರಿಗೆ ತಾನು ರಾಜ್ಯಪಾಲ ಆಗ್ತಿದ್ದೇನೆ ಅಂತ ಸುಳ್ಳು ಹೇಳಿ, ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದಾನೆ ಅಂತ ವಂಚನೆಗೊಳಗಾದವರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಟಿವಿ9 ತಂಡ ಕೂಡಾ, ವಂಚನೆ ಮಾಡಿರೋ ಆರೋಪ ಹೊಂದಿರುವ ಶಾಂತಕುಮಾರ್ ಅವರನ್ನು ಸಂಪರ್ಕಿಸುವ ಕೆಲಸ ಮಾಡಿತು.ಆದ್ರೆ ಶಾಂತಕುಮಾರ್ ಅವರ ನಂಬರ್ ಸ್ವಿಚ್ ಆಪ್ ಆಗಿದೆ. ಶಾಂತಕುಮಾರ್ ವಿರುದ್ದ ಇದೀಗ ವಂಚನೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡಿ, ಶಾಂತಕುಮಾರ್ ಅವರನ್ನು ಪತ್ತೆ ಮಾಡಿ ವಿಚಾರಣೆ ಮಾಡಿದ್ರೆ, ಆರೋಪದ ಅಸಲಿ ಸತ್ಯ ಹೊರಬರಲಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.