ಬೆಳಗ್ಗೆ ಹಣ್ಣಿನ ವ್ಯಾಪಾರ, ರಾತ್ರಿ ಆಟೋ ಕಳ್ಳತನ -14 ಆಟೋಗಳ ಎಗರಿಸಿದ್ದ ಖದೀಮ ಅಂದರ್ ಆದ ಕತೆಯಿದು!
ಸುಲಭವಾಗಿ ಆಟೋಗಳನ್ನ ಕಳ್ಳತನ ಮಾಡಿಕೊಂಡು ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ 8 ರಿಂದ 15 ಸಾವಿರಗಳಿಗೆ ಮಾರಾಟ ಮಾಡುತ್ತಿದ್ದ.
ರಾಮನಗರ: ಆ ನಗರದ ಆಟೋ ಚಾಲಕರೆಲ್ಲ (Auto rickshaw) ಆತಂಕಗೊಂಡಿದ್ರು. ಮನೆಯ ಮುಂದೆ ನಿಲ್ಲಿಸಿದ ಆಟೋಗಳು ರಾತ್ರೋರಾತ್ರಿ ಅಬೇಸ್ ಆಗುತ್ತಿದ್ದವು. ಹೊಟ್ಟೆ ಪಾಡಿಗೆಂದು ಇದ್ದ ಆಧಾರವೇ ಇಲ್ಲದಂತಾಗಿತ್ತು ಅಂದ್ರೆ ಆಟೋ ಚಾಲಕರು ತಾನೆ ಏನು ಮಾಡಬೇಕು. ಆದರೆ ಕೊನೆಗೂ ಆಟೋ ಚಾಲಕರ ನಿದ್ರೆ ಗೆಡಿಸಿದ್ದ ಆ ಖತರ್ನಾಕ್ ಪೊಲೀಸರ ಬಲೆಗೆ ಬಿದ್ದಿದ್ದಾನೆ ಅನ್ನೀ. ಹೌದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಆಟೋ ಚಾಲಕರ ನಿದ್ರೆಗೆಡಿಸಿದ್ದ ಖತರ್ನಾಕ್ ಗೆ ಕೊನೆಗೂ ರಾಮನಗರ ಪುರ ಠಾಣೆ ಪೊಲೀಸರು (Ramanagara Police) ಕೋಳ ತೊಡಿಸಿದ್ದಾರೆ (Arrest). ಅಂದಹಾಗೆ ಆತನ ಹೆಸರು ಮಹಮದ್ ದಸ್ತಗಿರ್ (43). ಮೂಲತಃ ಮೈಸೂರು ಜಿಲ್ಲೆಯವನಾದ ಈತ, ಸದ್ಯ ಬೆಂಗಳೂರಿನ ಕೆಂಗೇರಿ ಬಳಿ ವಾಸವಾಗಿದ್ದಾನೆ. ಆದರೆ ಈತನ ಹಿಸ್ಟರಿಯನ್ನ ಕೇಳಿದ್ರೆ ನೀವು ಸಹಾ ಬೆಚ್ಚಿ ಬೀಳುತ್ತಿರಾ.
ಬೆಳಗಿನ ಸಮಯದಲ್ಲಿ ಹಣ್ಣಿನ ವ್ಯಾಪಾರ ಮಾಡುವ ಈತ, ರಾತ್ರಿ ವೇಳೆ ಮನೆಯ ಮುಂದೆ ನಿಲ್ಲಿಸಿದ ಆಟೋಗಳನ್ನ ಅಬೇಸ್ ಮಾಡಿ ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡುವುದೇ ಈತನ ಕಾಯಕವಾಗಿತ್ತು. ಇದುವರೆಗೂ 14 ಆಟೋಗಳನ್ನ ಕಳ್ಳತನ ಮಾಡಿ ಇದೀಗ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.
ಕಳೆದ ತಿಂಗಳು ರಾಮನಗರ ಟಿಪ್ಪು ನಗರದಲ್ಲಿ ಸಮದ್ ಎಂಬುವವರು ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿದ್ದರು. ಆದರದು ರಾತ್ರೋರಾತ್ರಿ ಕಳ್ಳತನವಾಗಿತ್ತು. ಅದೇ ರೀತಿ ಇನ್ನೂ ಹಲವು ಆಟೋಗಳು ಕೂಡ ರಾಮನಗರದಲ್ಲಿ ಕಳ್ಳತನ ಆಗಲು ಶುರುವಾಗಿದ್ದವು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಮಹಮದ್ ದಸ್ತಗಿರ್ ನನ್ನ ಬಂಧಿಸಿ 14 ಆಟೋಗಳನ್ನ ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ ಬೆಂಗಳೂರಿನ ಕೆಂಗೇರಿ ಬಳಿ ವಾಸವಾಗಿದ್ದ ಮಹಮದ್ ದಸ್ತಗಿರ್, ಸದ್ಯ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಆದರೆ ರಾತ್ರಿ ವೇಳೆ ಆಟೋಗಳನ್ನ ಕಳ್ಳತನ ಮಾಡುವುದನ್ನ ಕಾಯಕ ಮಾಡಿಕೊಂಡಿದ್ದ. ಈ ಹಿಂದೆ ಆಟೋ ಚಾಲಕನಾಗಿದ್ದ ಈತನಿಗೆ, ಯಾವ ರೀತಿ ಆಟೋಗಳನ್ನ ನಕಲಿ ಕೀ ಬಳಸಿ ತೆಗೆದುಕೊಂಡು ಹೋಗಬೇಕು ಎಂಬುದು ಚೆನ್ನಾಗಿ ಗೊತ್ತಿತ್ತು.
ಹೀಗಾಗಿ ಸುಲಭವಾಗಿ ಆಟೋಗಳನ್ನ ಕಳ್ಳತನ ಮಾಡಿಕೊಂಡು ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ 8 ರಿಂದ 15 ಸಾವಿರಗಳಿಗೆ ಮಾರಾಟ ಮಾಡುತ್ತಿದ್ದ. ಅಲ್ಲೂ ಕೂಡ ಮೊದಲು ಹಣವನ್ನು ಪಡೆದು ನಂತರ ಆಟೋಗಳ ಡಾಕ್ಯುಮೆಂಟ್ಸ್ ಸಮೇತ ಕೊಡುವುದಾಗಿ ಹೇಳಿ ಯಮಾರಿಸಿಬಿಡುತ್ತಿದ್ದ. ಅದೇ ರೀತಿ ಬೆಂಗಳೂರು, ರಾಮನಗರ, ಚನ್ನಪಟ್ಟಣ ನಗರಗಳಲ್ಲಿ 14 ಆಟೋಗಳನ್ನ ಕಳ್ಳತನ ಮಾಡಿ ಮಾರಾಟ ಮಾಡಿದ್ದಾನೆ ಎಂದು ಮಾಹಿತಿ ನೀಡಿದವರು ರಾಮನಗರ ಎಸ್ ಪಿ ಸಂತೋಷ್ ಬಾಬು ಕೆ.
ಒಟ್ಟಾರೆ ಆಟೋ ಚಾಲಕರ ನಿದ್ರೆಗೆಡಿಸಿದ್ದ ಖತರ್ನಾಕ್ ಆಸಾಮಿಯನ್ನು ಕೊನೆಗೂ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಆಟೋ ಚಾಲಕರು ಈ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ