ಉಪ ನೋಂದಾವಣಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ: ಬೆಂಗಳೂರು ಗ್ರಾಮಾಂತರ ಮತ್ತು ನಗರದಲ್ಲಿ ಸಿಕ್ಕ ಹಣ ಎಷ್ಟು ಎಂಬುದು ಇಲ್ಲಿದೆ
ನಗರ, ಗ್ರಾಮಾಂತರ ಜಿಲ್ಲೆಯ ಸಬ್ರಿಜಿಸ್ಟ್ರಾರ್ ಕಚೇರಿಗಳ ಮೇಲಿನ ಲೋಕಾಯುಕ್ತ ದಾಳಿ ವೇಳೆ ಲಕ್ಷಾಂತರ ರೂಪಾಯಿ ಪತ್ತೆಯಾಗಿದ್ದು, ಇದರ ಮೂಲದ ಬಗ್ಗೆ ತನಿಖೆ ಆರಂಭಗೊಂಡಿದ್ದು, ಕಚೇರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು: ನಗರ, ಗ್ರಾಮಾಂತರ ಜಿಲ್ಲೆಯ ಸಬ್ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಗುರುವಾರ ನಡೆದ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಜಪ್ತಿ ಮಾಡಲಾದ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ಮಾಹಿತಿ ನೀಡುವಂತೆ 14 ಸಬ್ ರಿಜಿಸ್ಟ್ರಾರ್ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಒಂದೊಮ್ಮೆ ಅಧಿಕಾರಿಗಳು ನೋಟಿಸ್ಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಲೋಕಾಯುಕ್ತ ಪೊಲೀಸರು ಅಧಿಕಾರಿಗಳನ್ನು ಬಂಧಿಸಲಿದ್ದಾರೆ. ಬೆಂಗಳೂರು ವ್ಯಾಪ್ತಿಯ ನಾಗವಾರ, ಬಾಣಸವಾಡಿ, ಕೋರಮಂಗಲ, ವರ್ತೂರು, ಬೇಗೂರು ಸೇರಿ 14 ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು.
ಉಪನೋಂದಾವಣಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ವೇಳೆ ಮಧ್ಯವರ್ತಿಗಳು, ಕಂಪ್ಯೂಟರ್ ಆಪರೇಟರ್ ಬಳಿ ಲಕ್ಷ ಲಕ್ಷ ಹಣ ಪತ್ತೆಯಾಗಿತ್ತು. ಒಟ್ಟು 14 ಕಡೆಗಳಲ್ಲಿ ನಡೆದ ದಾಳಿ ವೇಳೆ 7.5 ಲಕ್ಷ ರೂಪಾಯಿವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಣ ಬೆಂಗಳೂರು ನಗರದಲ್ಲಿ ನಡೆದ ದಾಳಿಯದ್ದಾಗಿದ್ದರೆ ಬೆಂಗಳೂರು ಗ್ರಾಮಾಂತರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಕ್ಕ ಹಣವೆಷ್ಟು? ಗ್ರಾಮಾಮತರ ಜಿಲ್ಲೆಯಲ್ಲಿ ಒಟ್ಟು 2,64,920 ರೂ. ಹಣ ಪತ್ತೆಯಾಗಿದೆ. ಆನೆಕಲ್ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 95,170 ರೂ., ಹೊಸಕೋಟೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 1,04,230 ರೂ., ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 42,170 ರೂ., ಬನ್ನೇರುಘಟ್ಟ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 23,350 ರೂ. ಪತ್ತೆಯಾಗಿತ್ತು.
ಸದ್ಯ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದ ಹಣದ ಮೂಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅದರಂತೆ ಹಣದ ಮೂಲ ಯಾವುದು, ಯಾಕಾಗಿ ಹಣವನ್ನ ಪಡೆಯಲಾಗಿದೆ ಎಂಬುದನ್ನು ತಿಳಿಯಲು ಕಚೇರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬ್ರೋಕರ್, ಕಂಪ್ಯೂಟರ್ ಆಪರೇಟರ್ಗಳ ಜೊತೆ ಸಬ್ ರಿಜಿಸ್ಟ್ರಾರ್ ಕೂಡ ಕಂಬಿ ಎಣಿಸುವ ಸ್ಥಿತಿ ಬರಬಹುದೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Fri, 4 November 22