ಹಾಡುಹಗಲೇ ಸಾರಿಗೆ ಸಂಸ್ಥೆಯ ಚಾಲಕನ ಬರ್ಬರ ಹತ್ಯೆ; ಜನನಿಬಿಡ ಪ್ರದೇಶದಲ್ಲೆ ಚಾಲಕನನ್ನ ಅಟ್ಟಾಡಿಸಿಕೊಂಡು ಕೊಚ್ಚಿ ಕೊಂದ ಹಂತಕರು
ಅದು ಅತ್ಯಂತ ಜನಬೀಡ ಪ್ರದೇಶದಲ್ಲಿರುವ ಸಿಟಿ ಬಸ್ಟ್ಯಾಂಡ್ ಪ್ರದೇಶ. ಅಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ಬಸ್‌ಗಳಲ್ಲಿ ಓಡಾಡುತ್ತಿರುತ್ತಾರೆ. ಆದರೆ ಇಂತಹ ಜನನಿಬೀಡ ಪ್ರದೇಶದಲ್ಲಿ ಹಾಡುಹಗಲೇ ಸರ್ಕಾರಿ ಬಸ್ ಚಾಲಕನೋರ್ವನನ್ನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ರಣಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಕಲಬುರಗಿ: ಬರ್ಬರವಾಗಿ ಹತ್ಯೆಯಾಗಿ ಬಿದ್ದಿರೋ ವ್ಯಕ್ತಿ, ಹಾಡುಹಗಲೇ ರಣಭೀಕರ ಕೊಲೆ ಕಣ್ಣಾರೆ ಕಂಡು ಭಯಭೀತರಾಗಿರುವ ಸಾರ್ವಜನಿಕರು. ಮತ್ತೊಂದೆಡೆ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ. ಅಷ್ಟಕ್ಕೂ ಈ ರಣಭೀಕರ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ (Kalaburagi) ನಗರದ ಸೂಪರ್ ಮಾರ್ಕೆಟ್‌ನ ಸಿಟಿ ಬಸ್ ನಿಲ್ದಾಣದ ಬಳಿ. ಹೌದು ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಹೆಸರು ನಾಗಯ್ಯಸ್ವಾಮಿ. ಜಿಲ್ಲೆಯ ಅಫಜಲಪುರ ತಾಲೂಕಿನ ಮದರಾ (ಬಿ) ಗ್ರಾಮದವರು. ಕಳೆದ 20 ವರ್ಷಗಳಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಯ್ಯಸ್ವಾಮಿ. ಎಂದಿನಂತೆ ನಿನ್ನೆ(ಮೇ.12) ಮದ್ಯಾಹ್ನ ಸಿಟಿ ಬಸ್‌ನ್ನ ಮಿಣಜಗಿ ಗ್ರಾಮಕ್ಕೆ ಹೋಗಿ ವಾಪಾಸ್ಸು ಬಂದಿದ್ದರು. ಬಂದ ನಂತರ, ಮಹಿಳಾ ನಿರ್ವಾಹಕಿ ಜೊತೆ ಊಟ ಮಾಡಿದ್ದಾರೆ. ಬಳಿಕ ಬಸ್ ಹತ್ತಲು ಹೋದಾಗ, ಏಕಾಏಕಿ ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಲಾಂಗ್‌ನಿಂದ ಅಟ್ಟಾಡಿಸಿಕೊಂಡು ಮನಬಂದಂತೆ ಇರಿದು ರಣಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮಟ ಮಟ ಮದ್ಯಾಹ್ನ ಸಾವಿರಾರು ಜನರ ಮಧ್ಯೆ ನಡೆದ ಚಾಲಕನ ಬರ್ಬರ ಹತ್ಯೆಯಿಂದ ಜನ ಭಯಭೀತರಾಗಿದ್ದಾರೆ.
ನಗರದ ಮಹಾದೇವ ನಗರದಲ್ಲಿ ಪತ್ನಿ ಹಾಗೂ ಮಕ್ಕಳ ಜೊತೆ ವಾಸ ಮಾಡುತ್ತಿದ್ದ ನಾಗಯ್ಯ ಸ್ವಾಮಿ, ಸಹೋದರರ ಜೊತೆಗೆ ಆಸ್ತಿ, ಜಮೀನು ವೈಷಮ್ಯ ಇತ್ತು ಎನ್ನಲಾಗುತ್ತಿದೆ. ಮದರಾ ಗ್ರಾಮದ ನಿವಾಸಿಯಾಗಿದ್ದ ನಾಗಯ್ಯಸ್ವಾಮಿ, ಕಳೆದ ಹಲವಾರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮದ್ಯಾಹ್ನ ಊಟ ಮಾಡಿ ಬಸ್ ಹತ್ತಬೇಕು ಅನ್ನೊದ್ರೊಳಗೆ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಲಾಂಗ್‌ನಿಂದ ಕೈಗೆ ಹೊಡೆದಿದ್ದಾರೆ.ನಾಗಯ್ಯಸ್ವಾಮಿ ಹೆಬ್ಬೆರಳು ತುಂಡಾಗುತ್ತಿದ್ದಂತೆ ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಮತ್ತೆ ಅಟ್ಟಾಡಿಸಿಕೊಂಡು ಬಂದ ಹಂತಕರು ನಾಗಯ್ಯಸ್ವಾಮಿಯ ಕುತ್ತಿಗೆ, ಎದೆ, ಕೈ ಸೇರಿದಂತೆ ದೇಹದ ಹಲವಾರು ಭಾಗಗಳಲ್ಲಿ ಮನಬಂದಂತೆ ಕೊಚ್ಚಿ ಕೊಂದು ಎಸ್ಕೆಪ್ ಆಗಿದ್ದಾರೆ. ಇನ್ನು ಘಟನೆ ನಂತರ ಸಿಟಿ ಬಸ್ ನಿಲ್ದಾಣ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆ: ಆತ್ಮಹತ್ಯೆಯಲ್ಲ, ಕೊಲೆ ಎನ್ನುತ್ತಿರುವ ಕುಟುಂಬಸ್ಥರು
ಸ್ಥಳಕ್ಕೆ ಬಂದ ನಾಗಯ್ಯಸ್ವಾಮಿ ಪತ್ನಿ ಮತ್ತು ಕುಟುಂಬಸ್ಥರು ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹ ಕಂಡು ಆಕ್ರಂದನ ಮುಗಿಲುಮುಟ್ಟಿತ್ತು. ಅತ್ತ ಹತ್ಯೆಗೆ ಬಳಸಲಾಗಿದ್ದ ಲಾಂಗ್‌ನ್ನ, ಪೊಲೀಸರು ವಶಪಡಿಸಿಕೊಂಡಿದ್ದು, ಸ್ಥಳಕ್ಕೆ ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಡಿಸಿಪಿ ಶ್ರೀನಿವಾಸುಲು, ಸ್ಥಳಕ್ಕೆ ಬೆರಳಚ್ಚು ಮತ್ತು ಡಾಗ್ ಸ್ಕ್ವಾರ್ಡ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ನಂತರವಷ್ಟೆ ಕೊಲೆಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಪಿ ಶ್ರೀನಿವಾಸುಲು ಹೇಳಿದ್ದಾರೆ.
ಅದೆನೇ ಇರಲಿ ಕಳೆದೊಂದು ತಿಂಗಳಿಂದ ಎಲೆಕ್ಷನ್ ಮೂಡ್‌ನಲ್ಲಿದ್ದ ಜನರಿಗೆ, ಎಲೆಕ್ಷನ್ ಮುಗಿದ ಬೆನ್ನಲ್ಲೆ ಮತ್ತೆ ಕೊಲೆ ಪ್ರಕರಣಗಳು ಮರುಕಳಿಸಿದ್ದು, ತೊಗರಿ ನಾಡಿನ ಮಂದಿ ಅಕ್ಷರಶಃ ಬೆಚ್ಷಿಬಿದ್ದಿದ್ದಾರೆ. ಒಟ್ಟಾರೆಯಾಗಿ ಹಾಡುಹಗಲೇ ನಡೆದ ರಣಭೀಕರ ಹತ್ಯೆಯ ಹಂತಕರ ಬಂಧನಕ್ಕೆ ಖಾಕಿ ಬಲೆ ಬೀಸಿದ್ದು, ಶೀಘ್ರವೇ ಬಲೆಗೆ ಬಿಳುವ ಸಾಧ್ಯತೆಯಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:47 am, Sat, 13 May 23