AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಅನ್ಯ ಜಾತಿ ಯುವಕನನ್ನ ಪ್ರೀತಿಸಿ ತಂದೆಯಿಂದಲೇ ಹೆಣವಾದ ಅಪ್ರಾಪ್ತ ಬಾಲಕಿ; 100 ದಿನ ಕಳೆದರೂ ಸಿಗದ ಶವ

ಏನೂ ತಿಳಿಯದ ವಯಸ್ಸಿನಲ್ಲೆ ಆ ಬಾಲಕಿ ಪ್ರೀತಿಯ ಬಲೆಗೆ ಬಿದ್ದಿದ್ದಳು. ಜಾತಿಯ ಎಲ್ಲೆ ಮೀರಿ ಪ್ರೀತಿ ಮಾಡಿದಕ್ಕೆ ಮುದ್ದಾದ ಮಗಳನ್ನೇ ನೀರಿಗೆ ತಳ್ಳಿ ತಂದೆಯೇ ಕೊಲೆ ಮಾಡಿದ್ದ. ನೂರು ದಿನ ಕಳೆದರೂ ಬಾಲಕಿಯ ಶವ ಪತ್ತೆಯಾಗಿಲ್ಲ. ಒಂದೆಡೆ ಪೊಲೀಸರು ಪಾಪಿ ತಂದೆಯನ್ನ ಜೈಲಿಗೆ ಅಟ್ಟಿದ್ರೆ, ಇನ್ನೊಂದೆಡೆ ಬಾಲಕಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಳ್ಳಾರಿ: ಅನ್ಯ ಜಾತಿ ಯುವಕನನ್ನ ಪ್ರೀತಿಸಿ ತಂದೆಯಿಂದಲೇ ಹೆಣವಾದ ಅಪ್ರಾಪ್ತ ಬಾಲಕಿ; 100 ದಿನ ಕಳೆದರೂ ಸಿಗದ ಶವ
ಅನ್ಯ ಜಾತಿ ಯುವಕನೊಂದಿಗೆ ಪ್ರೀತಿ, ತಂದೆಯಿಂದಲೇ ಮಗಳ ಹತ್ಯೆ, ಕೊನೆ ಬಾರಿ ಮಗಳ ಮುಖ ನೋಡಲು ಕಾಯುತ್ತಿರುವ ತಾಯಿ, ಅಜ್ಜ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 18, 2023 | 10:50 PM

Share

ಬಳ್ಳಾರಿ: ಅದು ಕಳೆದ ನವಂಬರ್ 31ರಂದು ನಡೆದ ಘಟನೆ. ಆ ಲವ್ ಸ್ಟೋರಿಯ ಸುದ್ದಿ ಕೇಳಿ ಇಡೀ ಬಳ್ಳಾರಿ ಜಿಲ್ಲೆಯ ಜನ ಬೆಚ್ಚಿಬಿದ್ದಿತ್ತು. ಸಂಡೂರು ತಾಲೂಕಿನ ಕುಡತಿನಿ ಪಟ್ಟಣದ ನಿವಾಸಿ ಓಂಕಾರಗೌಡ ಎಂಬಾತ ಮುದ್ದಾಗಿ ಸಾಕಿ ಬೆಳೆಸಿದ ಮಗಳನ್ನೇ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ. ಅನ್ಯ ಜಾತಿಯ ಯುವಕನನ್ನ ಪ್ರೀತಿಸುತ್ತಿದ್ದ ಒಂದೇ ಕಾರಣಕ್ಕೆ ಅಪ್ರಾಪ್ತ ಮಗಳನ್ನ ತಂದೆಯೇ ನೀರಿಗೆ ತಳ್ಳಿ ಕೊಲೆ ಮಾಡಿದ್ದನು. ತಂದೆಯ ಜೊತೆ ಬಾರ್​ನಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಜಾತಿಯ ಯುವಕನನ್ನ ಪ್ರೀತಿಸುತ್ತಿದ್ದ ಮಗಳಿಂದ ಮರ್ಯಾದೆ ಹೋಯ್ತು ಎಂಬ ಕಾರಣಕ್ಕೆ ಹೆತ್ತ ತಂದೆ ಮುದ್ದಾದ ಮಗಳನ್ನ ರಾತ್ರೋ ರಾತ್ರಿ ಎಚ್​.ಎಲ್​.ಸಿ ಕಾಲುವೆಗೆ ತಳ್ಳಿ ಸಾಯಿಸಿದ್ದ. ಮರ್ಯಾದೆ ಹತ್ಯೆಗೂ ಮುನ್ನ ಹೆತ್ತ ಮಗಳಿಗೆ ಗಂಧದಗುಡಿ ಚಿತ್ರ ತೋರಿಸುವುದಾಗಿ ಚಿತ್ರಮಂದಿರಕ್ಕೆ ಕರೆದೊಯ್ದಿದ್ದ ತಂದೆ, ಮಗಳಿಗೆ ಓಲೆ ಕೊಡಿಸಿ ಮರಳಿ ಮನೆಗೆ ತೆರಳುವ ವೇಳೆ ಕಾಲುವೆಗೆ ತಳ್ಳಿ ಸಾಯಿಸಿದ್ದಾನೆ.

ಮಗಳನ್ನ ರಭಸವಾಗಿ ಹರಿಯುವ ಕಾಲುವೆಯ ನೀರಿಗೆ ತಳ್ಳಿ ಹತ್ಯೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ತಂದೆಯನ್ನ ಬಂಧಿಸಿ, ಬಾಲಕಿಯ ಕೊಲೆಯ ಪ್ರಕರಣವನ್ನ ಪೊಲೀಸರು ಭೇಧಿಸಿದ್ದರು. ಮರ್ಯಾದೆ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ತಂದೆ ಜೈಲು ಪಾಲಾಗಿದ್ದಾನೆ. ಆದ್ರೆ ಬಾಲಕಿಯ ಹತ್ಯೆ ನಡೆದು ನೂರು ದಿನಗಳು ಕಳೆದ್ರು ಕೊಲೆಯಾಗಿರುವ ಬಾಲಕಿಯ ಶವ ಪತ್ತೆಯಾಗದಿರುವುದು ಕುಟುಂಬಸ್ಥರ ಕಣ್ಣೀರಿಗೆ ಕಾರಣವಾಗಿದೆ.

ಇದನ್ನೂ ಓದಿ:ಮೈಸೂರು: ಬುದ್ದಿವಾದ ಹೇಳಿದಕ್ಕೆ ಕಬಾಬ್​ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿದ ಧುರಳರು

ಅನ್ಯ ಜಾತಿಯ ಯುವಕನನ್ನ ಪ್ರೀತಿಸಿದ ಮಗಳನ್ನ ಹತ್ಯೆ ಮಾಡಿದ ಓಂಕಾರಗೌಡ ಹತ್ಯೆಗೂ ಮುನ್ನ ಮಗಳ ಹೆಸರಿನಲ್ಲಿ ಬ್ಯಾಂಕ್​ನಲ್ಲಿದ್ದ ಹಣವನ್ನ ಸಹ ಡ್ರಾ ಮಾಡಿದ್ದ. ಮಗಳ ಹತ್ಯೆ ನಂತರ ತೆಲೆಮರೆಸಿಕೊಂಡಿದ್ದ ತಂದೆ ಓಂಕಾರಗೌಡ ಹಾಗೂ ಕೊಲೆಗೆ ಸಹಕರಿಸಿದ ಸ್ನೇಹಿತ ಭೀಮಪ್ಪನನ್ನ ಈಗಾಗಲೇ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದ್ರೆ ಕುಡತಿನಿ ಬಳಿಯ ಸಿದ್ದಮ್ಮನಹಳ್ಳಿಯ ತುಂಗಭದ್ರಾ ನದಿಯ ಕಾಲುವೆಯ ನೀರಿನಲ್ಲಿ ಕೊಚ್ಚಿಹೋದ ಬಾಲಕಿಯ ಶವ ಮಾತ್ರ ಇನ್ನೂ ಪತ್ತೆಯಾಗಿಲ್ಲ. 100 ದಿನ ಕಳೆದರೂ ಕುಡತಿನಿ ಪೊಲೀಸರು ಹತ್ಯೆಯಾದ ಬಾಲಕಿಯ ಶವಕ್ಕಾಗಿ ಹುಡುಕಾಟ ನಡೆಸುತ್ತಲೇ ಇದ್ದಾರೆ.

ಬಾಲಕಿ ಬದುಕಿದ್ದಾಳೋ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾಳೋ ಅನ್ನೋದು ಮಾತ್ರ ಸಸ್ಪೇನ್ಸ್ ಆಗಿದೆ. ಬಾಲಕಿಯನ್ನ ಹತ್ಯೆ ಮಾಡಿರುವುದಾಗಿ ತಂದೆಯೇ ಒಪ್ಪಿಕೊಂಡಿರುವುದರಿಂದ ಕೊಲೆ ಪ್ರಕರಣವೇನೂ ದಾಖಲಾಗಿದೆ. ಆದ್ರೆ ಕೊಲೆಯಾದ ಬಾಲಕಿಯ ಶವ ಮಾತ್ರ ಇನ್ನೂ ಪತ್ತೆಯಾಗುತ್ತಿಲ್ಲ. ಹೀಗಾಗಿ ಪೊಲೀಸರು ಬಾಲಕಿಯ ಶವಕ್ಕಾಗಿ ಹುಡುಕಾಟ ನಡೆಸಿ ಹೈರಾಣಾಗಿ ಹೋಗಿದ್ದಾರೆ. ಇತ್ತ ಮುದ್ದಾದ ಮೊಮ್ಮಗಳನ್ನ ಕಳೆದುಕೊಂಡ ತಾತ ಅಜ್ಜಿ. ಮೊಮ್ಮಗಳ ಮುಖವನ್ನ ಕೊನೆ ಭಾರಿಗೂ ನೋಡಲಾಗಲಿಲ್ಲ ಅಂತಾ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:ಶಿವರಾತ್ರಿ ಪ್ರಯುಕ್ತ ಬಿಜೆಪಿ ಮುಖಂಡ ಆಯೋಜಿಸಿದ್ದ ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ

ಇನ್ನು ಮಗಳ ಸಾವಿನ ಸುದ್ದಿ ತಿಳಿದ ದಿನದಿಂದ ತಾಯಿ ಹಾಗೂ ಮನೆಯವರು ಬಾಲಕಿಯ ಶವಕ್ಕಾಗಿ ಕಣ್ಣೀರಿಡುತ್ತಿದ್ದಾರೆ. ಪೊಲೀಸರು ಸಹ ಕೊಲೆಯಾದ ಬಾಲಕಿಯ ಶವ ಹುಡುಕಾಟ ನಡೆಸಿ ಬಾಲಕಿಯ ಕುಟುಂಬಸ್ಥರಿಗೆ ಸ್ವಾಂತನ ಹೇಳಿ ತನಿಖೆ ಮುಂದುವರೆಸಿದ್ದಾರೆ. ಬಾಲಕಿಯನ್ನ ತಂದೆ ನಿಜವಾಗಿಯೂ ನೀರಿನಲ್ಲೆ ತಳ್ಳಿ ಕೊಲೆ ಮಾಡಿದ್ನೋ, ಇಲ್ಲ ಬೇರೆ ಎಲ್ಲಾದ್ರೂ ಹೂತು ಹಾಕಿದ್ದಾನೋ ಅನ್ನೋ ಬಗ್ಗೆ ಪೊಲೀಸರಿಗೆ ಇನ್ನೂ ಅನುಮಾನವಿದೆ. ಹೀಗಾಗಿ ಪೊಲೀಸ್​ ಇಲಾಖೆ ಕೊಲೆ ಆರೋಪಿಗಳನ್ನ ಮರಳಿ ವಿಚಾರಣೆ ಮಾಡಿ, ಸತ್ಯಾಂಶ ತಿಳಿಸಿ ಅಂತಾ ಹೆತ್ತ ತಾಯಿ ಕಣ್ಣೀರಿಡುತ್ತಿದ್ದಾರೆ. ಇದ್ದೊಬ್ಬ ಮುದ್ದಾದ ಮಗಳ ಶವವನ್ನ ನೋಡಲಾಗಲಿಲ್ಲ ಎಂದು ಕಣ್ಣೀರಿಡುತ್ತಲೇ ಕಾಲ ಕಾಲ ಕಳೆಯುತ್ತಿರುವುದು ನಿಜಕ್ಕೂ ದುರಂತವಾಗಿದೆ.

ವರದಿ: ವಿರೇಶ್ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Sat, 18 February 23