ಬೆಂಗಳೂರು: ಕಂಟೇನರ್ನಲ್ಲಿಟ್ಟು ಎಟಿಎಂ ಮಷಿನ್ ಕದ್ದೊಯ್ದ ಖದೀಮರು
ಎಟಿಎಂ ಯಂತ್ರವನ್ನು ಖದೀಮರು ಕಂಟೇನರ್ನಲ್ಲಿ ತುಂಬಿಸಿಕೊಂಡು ಕದ್ದೊಯ್ದ ಘಟನೆ ಬೆಳ್ಳಂದೂರಿನ ಹರಳೂರು ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು: ಬೆಳ್ಳಂದೂರಿನ ಹರಳೂರು ರಸ್ತೆಯಲ್ಲಿರುವ ಎಟಿಎಂ ಯಂತ್ರದ ಮೇಲೆ ಕಣ್ಣು ಹಾಕಿದ ಖದೀಮರು ರಾತ್ರೋರಾತ್ರಿ ಎಟಿಎಂ ಕೇಂದ್ರಕ್ಕೆ ನುಗ್ಗಿ ಯಂತ್ರವನ್ನು ಕಂಟೇನರ್ನಲ್ಲಿ ತುಂಬಿಸಿಕೊಂಡು ಕದ್ದೊಯ್ದ (ATM Machine Theft) ಘಟನೆ ನಡೆದಿದೆ. ಬ್ಯಾಂಕ್ ಆಫ್ ಬರೋಡಾ ದ ಎಟಿಎಂ (Bank Of Baroda ATM) ಯಂತ್ರ ಇದಾಗಿದ್ದು, ಡಿ.10ರ ರಾತ್ರಿ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಕಳವು ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಡಿಸೆಂಬರ್ 10ರಂದು ರಾತ್ರಿ 2.30ರ ಸುಮಾರಿಗೆ ಟ್ರಕ್ನೊಂದಿಗೆ ಬಂದ ಕತರ್ನಾಕ್ ಕಳ್ಳರು, ಎಟಿಎಂ ಕೇಂದ್ರಕ್ಕೆ ನುಗ್ಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸಿಸಿಕ್ಯಾಮರಾಕ್ಕೆ ಸ್ಪ್ರೇ ಮಾಡಿದ್ದಾರೆ. ನಂತರ ಎಟಿಎಂ ಯಂತ್ರವನ್ನು ಕಂಟೇರ್ನಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.
ಬೆಂಗಳೂರಿನ ಉತ್ತರ ವಿಭಾಗದಲ್ಲಿ ಪುಡಿ ರೌಡಿಗಳ ಅಟ್ಟಹಾಸ
ನಗರದ ಉತ್ತರ ವಿಭಾಗದಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದು, ಹಾಡುಹಗಲೇ ಲಾಂಗ್, ಮಚ್ಚು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಡ್ರಗ್ ಪೆಡ್ಲರ್ಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಜೈಲಿನಿಂದ ಹೊರಬಂದು ಕೊಲೆ ಯತ್ನ ನಡೆಸಿದ್ದಾರೆ. ವ್ಯಕ್ತಿಯೊಬ್ಬರು ಡ್ರಗ್ಸ್ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದಿದ್ದ ರಾಜಗೋಪಾಲನಗರ ಠಾಣೆ ಪೊಲೀಸರು, ಅಯೂಬ್, ರೋಷನ್ ಎಂಬವರನ್ನು ಬಂಧಿಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಆರೋಪಿಗಳು, ಜಾಮೀನು ಪಡೆದು ಹೊರಬಂದಿದ್ದರು.
ಇದನ್ನೂ ಓದಿ: ದೆಹಲಿ ಹತ್ಯೆ ಮಾದರಿಯಲ್ಲಿ ತಂದೆಯನ್ನೇ ಕೊಂದು ದೇಹವನ್ನು 30 ತುಂಡು ಮಾಡಿ ಬೋರ್ವೆಲ್ಗೆ ಹಾಕಿದ ಮಗ!
ಜೈಲಿನಿಂದ ಹೊರಬಂದಿದ್ದ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಲಾಂಗ್ ಹಿಡಿದು ಕೊಲೆ ಮಾಡಲು ಬಂದಿದ್ದ ಆರೋಪಿಗಳನ್ನು ನೋಡಿದ ಮಾಹಿತಿದಾರ ಕ್ಷಣಾರ್ಧದಲ್ಲೇ ಸ್ಥಳದಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಅಯೂಬ್ ಹಾಗೂ ರೋಷನ್ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಜೀವ ಕಳೆದುಕೊಳ್ಳುವ ಭಯ ಎದುರಾಗಿದ್ದು, ಪೆಡ್ಲರ್ ಬಗ್ಗೆ ಮಾಹಿತಿ ನೀಡಿದ್ದ ವ್ಯಕ್ತಿಗೆ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ? ಕಂಡ ಕಂಡಲ್ಲಿ ಪುಡಿ ರೌಡಿಗಳು ಲಾಂಗ್ ಹಿಡಿದು ಓಡಾಡುತ್ತಿದ್ದಾರೆ. “ಕ್ರೈಂ ನಡೆದಾಗ ಪೊಲೀಸರಿಗೆ ಮಾಹಿತಿ ನೀಡಿ, ನಿಮ್ಮ ಮಾಹಿತಿ ಗೌಪ್ಯವಾಗಿರುತ್ತದೆ. ನಾವು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಕಾನೂನು ಸುವ್ಯವಸ್ಥೆಗೆ ನಮ್ಮೊಂದಿಗೆ ಸಹಕರಿಸಿ” ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡುತ್ತಿರುತ್ತದೆ. ಆದರೆ ನಿಜಕ್ಕೂ ಪೊಲೀಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದವರು ಸುರಕ್ಷಿತವಾಗಿರುತ್ತಾರಾ? ಮಾಹಿತಿ ನೀಡಿದ ಎಲ್ಲರಿಗೂ ಪೊಲೀಸರು ರಕ್ಷಣೆ ಕೊಡುತ್ತಾರೆಯೇ ಎಂಬುದು ಈಗಿನ ಪ್ರಶ್ನೆ.
ಹಿಟ್ ಅಂಡ್ ರನ್, 3 ಸಾವು ಪ್ರಕರಣಕ್ಕೆ ಟ್ವಿಸ್ಟ್
ಆನೇಕಲ್: ಹಿಟ್ ಅಂಡ್ ರನ್ ವೇಳೆ ನಡೆದ ಅಪಾಘಾತದಲ್ಲಿ ಮೂವರು ಯುವಕರ ಸಾವನ್ನಪ್ಪಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಯುವಕರಿಗೆ ಗುದ್ದಿದ್ದು ಒಂದು ಲಾರಿ ಅಲ್ಲ. ಎರಡು ಲಾರಿ ಗುದ್ದಿರುವ ಶಂಕೆ ವ್ಯಕ್ತವಾಗಿದೆ. ವೇಗದ ಜಿದ್ದಿಗೆ ಬಿದ್ದ ಎರಡು ಲಾರಿಗಳು ಓವರ್ ಟೇಕ್ ಮಾಡಲು ಹೋಗಿ ಮೂವರು ಯುವಕರಿಗೆ ಗುದ್ದಿರುವ ಸಾಧ್ಯತೆ ಇದೆ. ಏಕಪಥ ರಸ್ತೆಯಲ್ಲಿ ವೇಗವಾಗಿ ಲಾರಿ ಚಾಲಾಯಿಸಿಕೊಂಡು ಓವರ್ಟೇಕ್ ಮಾಡಲು ಹೋದಾಗ ಎಡ ಬದಿಗೆ ಬಂದ ಲಾರಿಯಿಂದ ತಪ್ಪಿಸಿಕೊಳ್ಳಲು ಬಲ ಬದಿಗೆ ಯುವಕರು ಸರಿದಿದಿದ್ದಾರೆ. ಈ ವೇಳೆ ಬಲ ಬದಿಯಿಂದ ಬಂದ ಲಾರಿಗೆ ಸಿಕ್ಕಿ ಯುವಕರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳದಲ್ಲಿ ಸಿಕ್ಕ ಲಾರಿಯ ಅವಶೇಷಗಳ ಪರಿಶೀಲನೆ ನಡೆಸಿದ ಪೊಲೀಸರು ಲಾರಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಮೃತರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ಸೋಜಿಗವೆಂಬುವಂತೆ ಮೃತರೆಲ್ಲರೂ ತಂದೆ ತಾಯಿಯ ಒಂದೇ ಸಂತಾನದವರಾಗಿದ್ದಾರೆ. 13 ಸಾವಿರ ವೇತನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವಕರು, ಘಟನೆಯ ದಿನ ರಾತ್ರಿ 8 ಗಂಟೆಗೆ ಚಿಕನ್ ತರಲು ಮನೆಯಿಂದ ಹೊರಟಿದ್ದರು. ಉಳಿದ ಸ್ನೇಹಿತರಿಗೆ ಅನ್ನ ರೆಡಿ ಮಾಡಿ ಇಡಿ ಎಂದು ಹೇಳಿ ಹೋಗಿದ್ದರು. ಹೀಗೆ ಹೋದವರು ರಾತ್ರಿ 11 ಗಂಟೆಯಾದರೂ ವಾಪಸ್ ಬರದ ಸ್ನೇಹಿತರಿಗೆ ಪೊಲೀಸರು ಅಪಘಾತದ ಸುದ್ದಿ ತಿಳಿಸಿದಾಗಲೇ ತಿಳಿದಿದೆ.
ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು
ಆನೇಕಲ್:ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದ ಘಟನೆ ಆನೇಕಲ್ ಪಟ್ಟಣದ ಶಿವಾಜಿ ಸರ್ಕಲ್ ಬಳಿ ನಡೆದಿದ್ದು, ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಡಿ.11 ರಂದು ರಾತ್ರಿ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳೆಕಿಗೆ ಬಂದಿದೆ. ಮುನಿವೆಂಕಟಪ್ಪ ಲೇಔಟ್ನ ಪಾರ್ವತಮ್ಮ ಬಳಿ ಮೊಮ್ಮಗನ ಜೊತೆ ಮನೆಯ ಕಡೆಗೆ ನಡೆದು ಹೋಗುವಾಗ ಹಿಂಬದಿಯಿಂದ ಬಂದ ಕಳ್ಳರು 80 ಗ್ರಾಂ ಮೌಲ್ಯದ ಮಾಂಗಲ್ಯ ಸರ ಕದ್ದಿದ್ದಾರೆ. ಘಟನೆ ಸಂಬಂಧ ಆನೇಕಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 am, Tue, 13 December 22