ಬೆಂಗಳೂರು: ನಕಲಿ ಡಿಡಿ ಕೊಟ್ಟು ವಂಚಿಸುತ್ತಿದ್ದ ದಂಪತಿಯಾದ ಇಂದ್ರಜಿತ್ ನಾಯಕ್, ಮಂಜುಳಾ ಸೇರಿ ನಾಲ್ವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ನಕಲಿ ಡಿಡಿಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ನಕಲಿ ಡಿಡಿಯನ್ನು ಮುದ್ರಿಸಿ ಮಾರ್ವಾಡಿಗಳಿಗೆ ನೀಡುತ್ತಿದ್ದರು. ನಮಗೆ ತುರ್ತಾಗಿ ಹಣದ ಅವಶ್ಯಕತೆ ಇದೆ, ಡಿಡಿ ಮೇಲೆ ಕಮೀಷನ್ ಇಟ್ಟುಕೊಂಡು ಸ್ವಲ್ಪ ಹಣ ಕೊಡಿ ಎಂದು ಡೀಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿ ಇಂದ್ರಜಿತ್ ನಾಯಕ್ ಡಿಪ್ಲೊಮಾ ಪದವೀಧರ. ತುಂಬಾ ಹಣ ಗಳಿಸಿ ಐಷಾರಾಮಿಯಿಂದ ಜೀವನ ಸಾಗಿಸಬೇಕು ಎಂಬುದಾಗಿ ಈ ಕೃತ್ಯಕ್ಕೆ ಇಳಿದಿದ್ದಾನೆ. ಇಂದ್ರಜಿತ್ ನಾಯಕ್, ಆತನ ಪತ್ನಿ ಮಂಜುಳಾ ಜೊತೆ ಸೇರಿ ನಕಲಿ ಡಿಡಿ ತಯಾರಿಗೆ ಇಳಿದಿದ್ದರು. ಸೀಲುಗಳ ತಯಾರಿ ಮತ್ತು ಕಂಪ್ಯೂಟರ್ ಕೆಲಸಕ್ಕೆ ಇಬ್ಬರು ಅಸಿಸ್ಟೆಂಟ್ಗಳನ್ನು ಇಟ್ಟಿದ್ದರು. ಈ ನಾಲ್ವರು ಸೇರಿ ನಕಲಿ ಡಿಡಿ ತಯಾರಿಕೆಗೆ ಇಳಿದಿದ್ದು, ಈಗ ಪೊಲೀಸರಿಂದ ಬಂಧಿತರಾಗಿದ್ದಾರೆ.
ಆರೋಪಿ ದಂಪತಿ ಒಂದು ಲಕ್ಷ ಮೌಲ್ಯದ ಡಿಡಿಗೆ 50ದಿಂದ 60 ಸಾವಿರ ಹಣ ಪಡೆಯುತ್ತಿದ್ದರು. ಹೀಗೆ ಹತ್ತಾರು ಮಾರ್ವಾಡಿಗಳಿಗೆ ನಕಲಿ ಡಿಡಿ ಕೊಟ್ಟು ಮಕ್ಮಲ್ ಟೋಪಿ ಹಾಕಿದ್ದರು. ಇತ್ತೀಚಿಗೆ ಬೇಗೂರಿನ ಓರ್ವ ಮಾರ್ವಾಡಿಗೆ ನಾಲ್ಕು ಲಕ್ಷದ ನಕಲಿ ಡಿಡಿ ಕೊಟ್ಟು ಚೀಟಿಂಗ್ ಮಾಡಿದ್ದರು. ಈ ನಿಟ್ಟಿನಲ್ಲಿ ಮೋಸ ಹೋದ ಮಾರ್ವಾಡಿ ಬೇಗೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಡಿಡಿ ತಯಾರಿಸಲು ಬಳಸಿದ್ದ ಕಂಪ್ಯೂಟರ್, ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ.