ಬೆಂಗಳೂರು, ಫೆಬ್ರವರಿ 6: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Stock Market Investment) ಮಾಡಿ ಹೆಚ್ಚು ಗಳಿಕೆ ಮಾಡಬೇಕೆಂಬ ಆಸೆಯಲ್ಲಿ ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪ್ಗಳ ಮೂಲಕ ಬರುವ ಸಂದೇಶಗಳಿಗೆ ಮಾರುಹೋಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಬೆಂಗಳೂರಿನಲ್ಲಿ (Bengaluru) ಹೆಚ್ಚಾಗಿರುವುದು ತಿಳಿದುಬಂದಿದೆ. ಇಂಥ ಪ್ರಕರಣಗಳಿಗೆ ಸಂಬಂಧಿಸಿ ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಪೊಲೀಸರಿಗೆ (Cyber Crime Police) ಬರುವ ದೂರುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಎನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ನೀಡುವ ಭರವಸೆಯೊಂದಿಗೆ ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪ್ಗಳ ಮೂಲಕ ಸೈಬರ್ ವಂಚಕರು ಈಗಾಗಲೇ ಹಲವಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಹೀಗಾಗಿ ಅಂಥ ಗ್ರೂಪ್ಗಳಲ್ಲಿದ್ದರೆ ತಕ್ಷಣವೇ ಎಕ್ಸಿಟ್ ಆಗುವಂತೆ ಪೊಲೀಸರು ಸೂಚಿಸಿದ್ದಾರೆ.
ವಂಚಕರು ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪಲ್ಲಿ ಟ್ರ್ಯಾಪ್ ಮಾಡಿ ವಂಚನೆ ಮಾಡುವ ವಿಧಾನವೇ ರೋಚಕವಾಗಿದೆ. ಮೊದಲು ವಾಟ್ಸ್ಆ್ಯಪ್, ಟೆಲಿಗ್ರಾಂ ಗ್ರೂಪ್ಗಳನ್ನ ಕ್ರಿಯೇಟ್ ಮಾಡುವ ಖದೀಮರು, ಷೇರುಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಬಗ್ಗೆ ಸುಳ್ಳು ಸಂದೇಶಗಳನ್ನು ಕಳುಹಿಸುತ್ತಾರೆ. ಆ ಟ್ರೇಡಿಂಗ್ ಸಲಹಾ ಗ್ರೂಪ್ಗಳಲ್ಲಿರುವ ಬಹುತೇಕರು ವಂಚಕರೇ ಆಗಿರುತ್ತಾರೆ. ಕೋಟಿಗಟ್ಟಲೇ ಹಣ ಗಳಿಸಿದ ಮಸೇಜ್ಗಳಿಗೆ ಅಮಾಯಕರು ಮಾರುಹೋಗುತ್ತಾರೆ.
ಇಂಥ ಗ್ರೂಪೊಂದರಲ್ಲಿ ಬಂದ ಸಲಹೆ ಕೇಳಿ ಹಣ ಕಳುಹಿಸಿದ ಟೆಕ್ಕಿ ಅಯ್ಯಪ್ಪ ಎಂಬವರು 90 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತಾವು ಬೇಗನೆ ಹೆಚ್ಚು ಹಣ ಸಂಪಾದಿಸಬೇಕು ಹೇಗೆ ಎಂದು ಇಂಥ ಗ್ರೂಪ್ಗಳಲ್ಲಿ ಕೇಳಿದವರು ಬೇಗನೆ ಅವರ ಬಲೆಗೆ ಬೀಳುತ್ತಿದ್ದಾರೆ.
ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತ ದಂಪತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣು
ಬೆಂಗಳೂರಿನ ‘ಟ್ರೇಡಿಂಗ್ ಸ್ಟಾಕ್ ಮಾರ್ಕೆಟ್’ ಹೆಸರಿನಲ್ಲಿ ಅಯ್ಯಪ್ಪ ಅವರನ್ನು ವಂಚಿಸಲಾಗಿದೆ. ಡಿ ಮ್ಯಾಟ್ ಅಕೌಂಟ್ ಇಲ್ಲದೇ ಷೇರು ಮಾರುಕಟ್ಟೆಯಲ್ಲಿ ಷೇರು ಹೋಲ್ಡರ್ ಆಗಲು ಸಾಧ್ಯವಿಲ್ಲ ಎಂಬುದು ಅಯ್ಯಪ್ಪ ಅವರಿಗೆ ಮೋಸಹೋದ ನಂತರ ಅರಿವಾಗಿದೆ. ಬಳಿಕ ಅವರು, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈಶಾನ್ಯ ಸೈಬರ್ ಪೊಲೀಸ್ ಠಾಣೆಯಲ್ಲಿ ಈವರೆಗೆ ಮೂರು ದೂರುಗಳು ದಾಖಲಾಗಿವೆ. ವಿದ್ಯಾವಂತರೇ ಹೆಚ್ಚಾಗಿ ಇಂಥ ಪ್ರಕರಣಗಳಲ್ಲಿ ವಂಚನೆಗೀಡಾಗುತ್ತಿದ್ದಾರೆ. ಸದ್ಯ ದೂರು ದಾಖಲಾಗುತ್ತಿದ್ದಂತೆಯೇ ‘ಟ್ರೇಡಿಂಗ್ ಸ್ಟಾಕ್ ಮಾರ್ಕೆಟ್’ ವೆಬ್ಸೈಟ್ ಅನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬ್ಲಾಕ್ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ