ಬೆಂಗಳೂರು, ಮೇ 27: ರಾಜ್ಯದಲ್ಲಿ ಮತ್ತೊಂದು ಡೀಪ್ ಫೇಕ್ (Deep Fake) ಪ್ರಕರಣ ವರದಿಯಾಗಿದೆ. ಇತ್ತೀಚಿಗೆ ನಟಿಯರ ಭಾವಚಿತ್ರಗಳನ್ನು ಬಳಸಿ ಕೃತಕ ಬುದ್ಧಿಮತ್ತೆ (AI) ಮುಖಾಂತರ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ಬೆಂಗಳೂರಿನ (Bengaluru) ಪ್ರತಿಷ್ಠಿತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯ (School Students) ಭಾವಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಮುಖಾಂತರ ಅಶ್ಲೀಲವಾಗಿ ಎಡಿಟ್ ಮಾಡಿ ಎಲ್ಲಡೆ ಹರಿಬಿಡಲಾಗಿದೆ. ಮೇ 24 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
50ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಇನ್ಸ್ಟಾಗ್ರಾಮನಲ್ಲಿ ಗ್ರೂಪ್ ರಚಿಸಿಕೊಂಡಿದ್ದಾರೆ. ಬಳಿಕ ಈ ಗ್ರೂಪ್ನಲ್ಲಿ ಅನಾಮದೆಯ ವ್ಯಕ್ತಿ ವಿದ್ಯಾರ್ಥಿನಿಯರ ಮಾರ್ಫಿಂಗ್ ಭಾವಚಿತ್ರಗಳನ್ನು ಶೇರ್ ಮಾಡುತ್ತಾನೆ. ಈ ವಿಚಾರ ತಿಳಿದು ವಿದ್ಯಾರ್ಥಿನಿಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಪೋಷಕರು ಈಗಾಗಲೇ ಸೈಬರ್ ಸೆಲ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಡೀಪ್ಫೇಕ್ ವಿಡಿಯೋಗೆ ಬಲಿಯಾದ ರಶ್ಮಿಕಾ ಮಂದಣ್ಣ
ದುಷ್ಕರ್ಮಿಗಳು ಇತ್ತೀಚಿಗೆ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಭಾವಚಿತ್ರವನ್ನು ಡೀಪ್ ಫೇಕ್ ಮೂಲಕ ಅಶ್ಲೀಲವಾಗಿ ವಿಡಿಯೋ ಎಡಿಟ್ ಮಾಡಿದ್ದರು. ಈ ಪ್ರಕರಣ ನಂತರ ಇದೇ ರೀತಿ ನಟಿ ಕತ್ರಿನಾ ಕೈಫ್ ಅವರ ಭಾವಚಿತ್ರ ಉಪಯೋಗಿಸಿ ಅಶ್ಲೀಲವಾಗಿ ಎಡಿಟ್ ಮಾಡಲಾಗಿತ್ತು.
ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್ ಫೇಕ್ ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್ಮೇಲ್ ಮಾಡಿರುವ ಘಟನೆ ಕಳೆದ ವರ್ಷ ನವೆಂಬರ್ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿತ್ತು. ಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್ ಮಾಡಿದ್ದ ಆರೋಪಿ ಮಂಥನ್ ಪಾಟೀಲ್ (22)ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದದ್ದರು. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್ ಪಾಟೀಲ್ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಭಾವಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:36 pm, Mon, 27 May 24