ಪ್ರತಿಷ್ಠಿತ ಐಕಿಯಾ ಕಂಪನಿಯ ಹೆಸರಿನಲ್ಲಿ ವಂಚನೆ, ಹಣ ಡಬಲ್ ಆಗುತ್ತದೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ

| Updated By: Ganapathi Sharma

Updated on: May 01, 2024 | 7:27 AM

ಪ್ರತಿಷ್ಠಿತ ಬ್ರ್ಯಾಂಡ್​​​ ಐಕಿಯಾ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ ಬೆಂಗಳೂರಿನ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ ಬಗ್ಗೆ ತಿಳಿದುಬಂದಿದೆ. ಆ್ಯಪ್ ಹಾಗೂ ಪರಿಚಯದವರೇ ನೀಡಿದ ಭರವಸೆ ನಂಬಿ ಹಣ ಡಬಲ್ ಆಗುತ್ತದೆಂದು ಲಕ್ಷಾಂತರ ರೂಪಾಯಿ ದುಡ್ಡು ಸುರಿದ ಜನರೀಗ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರತಿಷ್ಠಿತ ಐಕಿಯಾ ಕಂಪನಿಯ ಹೆಸರಿನಲ್ಲಿ ವಂಚನೆ, ಹಣ ಡಬಲ್ ಆಗುತ್ತದೆಂದು ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ 1: ಪ್ರತಿಷ್ಠಿತ ಬ್ರ್ಯಾಂಡ್​​​ ಐಕಿಯಾ (IKEA) ಹೆಸರಿನಲ್ಲಿ ಬೆಂಗಳೂರಿನಲ್ಲಿ (Bengaluru) ಅನೇಕ ಮಂದಿಗೆ ಉಂಡೆನಾಮ ಹಾಕಲಾಗಿದ್ದು, ಜನ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಹಾಕಿದ್ದ ಹಣ ಡಬಲ್‌ ಆಗುತ್ತದೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಲಾಗಿದೆ. ಮೋಸದ ಮಾತುಗಳಿಗೆ ಮರುಳಾಗಿ ಆ್ಯಪ್​​ನಲ್ಲಿ ಇದ್ದ ದುಡ್ಡೆಲ್ಲಾ ಹೂಡಿಕೆ ಮಾಡಿದವರೀಗ, ಹಾಕಿದ್ದ ಹಣ ವಿತ್ ಡ್ರಾ ಮಾಡಲಾಗದೇ ಪರದಾಡುತ್ತಿದ್ದಾರೆ. ಪ್ರತಿಷ್ಠಿತ ಪರ್ನಿಚರ್ ಕಂಪನಿ ಐಕಿಯಾ ಹೆಸರಿನಲ್ಲಿ ಯಮಾರಿಸಲಾಗಿದೆ.

ಪ್ರತಿಷ್ಠಿತ ಐಕಿಯಾ ಬ್ರ್ಯಾಂಡ್ ಹೆಸರಿನಲ್ಲಿ ಮನಿ ಮಾರ್ಕೆಟಿಂಗ್ ಆ್ಯಪ್ ಕ್ರಿಯೇಟ್ ಮಾಡಲಾಗಿದೆ. ಚೈನ್ ಲಿಂಕ್ ಮೂಲಕ ಆ್ಯಪ್​​ನಲ್ಲಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಳ್ಳಲಾಗಿದೆ. ಹೇಗೂ ಐಕಿಯಾ ಬ್ರ್ಯಾಂಡ್ ಅಂತ ಜನ ನಂಬಿದ್ದಾರೆ. ಜೊತೆಗೆ ಹಣ ಡಬಲ್ ಆಗುತ್ತದೆ ಎಂದು ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದಾಗ ಭರ್ಜರಿ ಲಾಭ ಬಂದಿದೆ. ಹೇಗೂ ಲಾಭ ಆಗುತ್ತದೆ ಎಂದು ಯಾಮಾರಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದೇ ಲಕ್ಷ ಲಕ್ಷ ಹಣ ಹೂಡಿಕೆ ಮಾಡುತ್ತಿದ್ದಂತೆ ನಕಲಿ ಆ್ಯಪ್‌ನ ಕಳ್ಳಾಟ ಶುರು ಆಗಿದೆ. ಈಗ ಆ್ಯಪ್ ನಿಂದ ಹಣ ವಿತ್ ಡ್ರಾ ಮಾಡಲಾಗದೇ, ಹೂಡಿಕೆ ಮಾಡಿದವರಿಗೆ ದಿಕ್ಕು ತೋಚದಂತಾಗಿದೆ.

4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ

ಬೆಂಗಳೂರಿನ ಸುಮಾರು 4 ಸಾವಿರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಈ ಬಗ್ಗೆ ಸೈಬರ್ ಕ್ರೈಮ್ ಪೋಲಿಸರಿಗೆ ದೂರು ನೀಡಲಾಗ್ತಿದೆ. ಮೊದಲು ಹಣ ವಾಪಸ್ ನೀಡಿದ್ದರು. ನಂತರ ನಾಲ್ಕು ನಾಲ್ಕು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೆ. ಈಗ ನೋಡಿದರೆ ವಿಥ್ ಡ್ರಾ ಅಪ್ಷನ್ ಬ್ಲಾಕ್ ಮಾಡಿದ್ದಾರೆ ಎಂದು ಸಂತ್ರಸ್ತರು ನೋವು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಐಕಿಯ ಫರ್ನಿಚರ್ ಕಂಪನಿ ಅವರನ್ನು ಭೇಟಿ ಮಾಡಿ ವಿಚಾರಿಸಿದರೆ, ಇದು ನಕಲಿ ಆ್ಯಪ್ ಇದಕ್ಕೂ ನಮಗೂ ಯಾವುದೇ ಸಂಬಂಧಿವಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎನ್ನುತ್ತಾರೆ ಸಂತ್ರಸ್ತರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಷೇರು ಹೂಡಿಕೆ ನೆಪದಲ್ಲಿ ₹5.17 ಕೋಟಿ ವಂಚನೆ

ಪರಿಚಯ ಇರುವವರೇ ಚೈನ್ ಲಿಂಕ್ ಮೂಲಕ‌ ಹಣ ಹೂಡಿಕೆ ಮಾಡಿಸಿದ್ದಾರೆ. ಬಣ್ಣದ ಮಾತುಗಳನ್ನು ನಂಬಿ ಆರಂಭದಲ್ಲಿ ಹೊಡಿಕೆ ಮಾಡಿದ್ದಾರೆ. ಈಗ ವಿತ್ ಡ್ರಾ ಮಾಡಲು ಸಮಸ್ಯೆ ಆಗ್ತಿದ್ದಂತೆ, ತಮ್ಮನ್ನ ಸೇರಿಸಿದವರ ಬಳಿ ಕೇಳಿದ್ದಾರೆ. ಅವರು ನಮಗೂ ಅದೇ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ ಎಂದು ವಂಚನೆಗೊಳಗಾದ ಗಣೇಶ್ ಬಾಬು ಎಂಬವರು ಅಲವತ್ತುಕೊಂಡಿದ್ದಾರೆ.

ಹಣ ಡಬಲ್, ತ್ರಿಬಲ್ ಆಗುತ್ತದೆ ಎಂಬ ಆಸೆಯಿಂದ ಈ ರೀತಿ ಸಿಕ್ಕಸಿಕ್ಕ ಆ್ಯಪ್​​ಗಳಲ್ಲಿ ಹೂಡಿಕೆ ಮಾಡುವವರು ಇನ್ನಾದರೂ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಕಷ್ಟಪಟ್ಟು ದುಡಿದ ದುಡ್ಡು ಇನ್ಯಾರದ್ದೋ ಪಾಲಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:23 am, Wed, 1 May 24