ಅತ್ಯಾಚಾರ ಎಸಗಿ ಪಾರಾರಿಯಾಗಿದ್ದ ಆರೋಪಿ ದುಬೈನಲ್ಲಿ ಸೆರೆ: ಪೊಲೀಸರ ಕಾರ್ಯಾಚರಣೆಯೇ ರೋಚಕ
ಕೇಂದ್ರೀಯ ತನಿಖಾ ದಳ ಅಧಿಕಾರಿಗಳ ಸಹಾಯದಿಂದ ಮಹದೇವಪುರ ಠಾಣೆ ಪೊಲೀಸರು ಅತ್ಯಾಚಾರ ಪ್ರಕರಣದ ಆರೋಪಿಯನ್ನು ದುಬೈನಲ್ಲಿ ಬಂಧಿಸಿ ಕರ್ನಾಟಕಕ್ಕೆ ಕರೆತಂದಿದ್ದಾರೆ. ಕೇರಳ ಮೂಲದ ಮಿಧುನ್ ಚಂದ್ರ ಬಂಧಿತ ಆರೋಪಿ.
ಬೆಂಗಳೂರು, ಡಿಸೆಂಬರ್ 09: ಕೇಂದ್ರೀಯ ತನಿಖಾ ದಳ (CBI) ಅಧಿಕಾರಿಗಳ ಸಹಾಯದಿಂದ ಮಹದೇವಪುರ ಠಾಣೆ ಪೊಲೀಸರು ಅತ್ಯಾಚಾರ ಪ್ರಕರಣದ ಆರೋಪಿಯನ್ನು ದುಬೈನಲ್ಲಿ ಬಂಧಿಸಿ (UAE) ಕರ್ನಾಟಕಕ್ಕೆ ಕರೆತಂದಿದ್ದಾರೆ. ಮಿಧುನ್ ಚಂದ್ರನ್ (31) ಬಂಧಿತ ಆರೋಪಿ. ಆರೋಪಿ ಮಿಧುನ್ ಚಂದ್ರನ್ ವಿರುದ್ಧ 2020 ರಲ್ಲಿ ಮಹದೇವಪುರ ಪೊಲೀಸ್ (Police) ಠಾಣೆಯಲ್ಲಿ ಅತ್ಯಾಚಾರ ಮತ್ತು ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದವು.
ಪ್ರೀತಿಯ ನಾಟಕವಾಡಿ ದೈಹಿಕ ಸಂಬಂಧ
ಕೇರಳ ಮೂಲದ ಮಿಧುನ್ ಚಂದ್ರ ನಗರದ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದನು. ಸಂತ್ರಸ್ತೆ ಕೂಡ ಕೇರಳ ರಾಜ್ಯದವಳಾಗಿದ್ದು, ಆಕೆ ಸಹ ಸಾಫ್ಟೆವೇರ್ ಉದ್ಯೋಗಿಯಾಗಿದ್ದಳು. ಆಗ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿದೆ. ಬಳಿಕ ಮಹದೇವಪುರ ಸಮೀಪ ಕೆಲ ತಿಂಗಳು ಇಬ್ಬರು ಲಿವಿಂಗ್ ಟುಗೆದರ್ನಲ್ಲಿ ನೆಲೆಸಿದ್ದರು.
ಆದರೆ 2020ರಲ್ಲಿ ಮಿಧುನ್ ಹಾಗೂ ಆತನ ಗೆಳತಿ ಮಧ್ಯೆ ಮನಸ್ತಾಪವಾಯಿತು. ಆಗ ಪರಸ್ಪರ ಜಗಳ ಮಾಡಿಕೊಂಡು ಇಬ್ಬರು ಪ್ರತ್ಯೇಕವಾಗಿದ್ದರು. ನಂತರ ಮಿಧುನ್ ಚಂದ್ರ ಸಂತ್ರಸ್ತೆಯನ್ನು ಮದುವೆಯಾಗಲು ಹಿಂದೇಟು ಹಾಕಿದ್ದನು. ಹೀಗಾಗಿ ಸಂತ್ರಸ್ತೆ 2020ರ ಫೆಬ್ರವರಿ 1 ರಂದು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಚೌಕಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯ ಬ್ಯಾಗ್ ಕಳ್ಳತನ; ದಂಗಾದ ಮಹಿಳಾ ಅಧಿಕಾರಿ
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣದಡಿ ಪೊಲೀಸರು ಮಿಧುನ್ನನ್ನು ಬಂಧಿಸಿದ್ದರು. ಆದರೆ ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ಆರೋಪಿ ಮಿಧುನ್ ದುಬೈಗೆ ಪರಾರಿಯಾಗಿದ್ದನು.
ಆರೋಪಿಯನ್ನು ಬಂಧಿಸಿದ್ದೇ ರೋಚಕ
ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ಮಿಧುನ್ ಬೆಂಗಳೂರು ತೊರೆದು ದುಬೈಗೆ ಹೋಗಿ ವಾಸವಾಗಿದ್ದನು. ಇತ್ತ ಅತ್ಯಾಚಾರ ಪ್ರಕರಣದ ವಿಚಾರಣೆಗೆ ದೀರ್ಘಾವಧಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಆತನ ಮೇಲೆ ಎಸಿಎಂಎಂ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿದೆ. ಈ ಸಂಬಂಧ ತನಿಖೆ ಕೈಗೆತ್ತಿಕೊಂಡ ಮಹದೇವಪುರ ಪೊಲೀಸರಿಗೆ ಮಿಧುನ್ ಚಂದ್ರ ದುಬೈನಲ್ಲಿರುವುದನ್ನು ಖಚಿತವಾಗಿದೆ.
ಆಗ ಸಿಬಿಐ ಇಂಟರ್‌ಪೋಲ್ ಮೂಲಕ ಆತನ ಮೇಲೆ ರೆಡ್ ಕಾರ್ನರ್ ನೋಟಿಸ್ ಅನ್ನು ಪೊಲೀಸರು ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ದುಬೈ ಪೊಲೀಸರು ವಶಕ್ಕೆ ಪಡೆದು ಇಂಟರ್‌ಫೋಲ್ ಅಧಿಕಾರಿಗಳ ಸುಪರ್ದಿಗೆ ವಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದು ಮಹದೇವಪುರ ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು ನೇತೃತ್ವದ ತಂಡವು, ದುಬೈಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಗುರುವಾರ ನಗರಕ್ಕೆ ಕರೆತಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ